ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಟೀಸರ್ ಲೀಕ್ ಆಗಿಬಿಡ್ತಾ?
ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಕುತೂಹಲ ಮೂಡಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಕೆಲ ದಿನ ಜೈಲು ಸೇರಿದ್ದರಿಂದ ಚಿತ್ರೀಕರಣ ತಡವಾಗುತ್ತಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ.
ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಈ ಬಾರಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆಗೆ ಬ್ರೇಲ್ ಹಾಕಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ಮನವಿ ಸಹ ಮಾಡಿದ್ದಾರೆ. ಇನ್ನು ಫೆಬ್ರವರಿ 16ರಂದು 'ಡೆವಿಲ್' ಟೀಸರ್ ರಿಲೀಸ್ ಬಗ್ಗೆ ಘೋಷಣೆ ಆಗಿದೆ. ಒಂದು ವಾರದ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ. ಅದರಲ್ಲೂ ಆಕ್ಷನ್ ಸನ್ನಿವೇಶವನ್ನು ಸೆರೆಹಿಡಿಯಲಾಗಿತ್ತು.

ಆಕ್ಷನ್ ಝಲಕ್ ಜೊತೆಗೆ ಸಣ್ಣ ಡೈಲಾಗ್ ಸೇರಿಸಿ 'ಡೆವಿಲ್' ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. 5 ದಿನ ಮೊದಲೇ ಟೀಸರ್ ಲೀಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಕೆಲವರು ಲೀಕ್ ಆಗಿರುವ ಟೀಸರ್ ನೋಡಿದ್ದೇವೆ, ಸೂಪರ್ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಇದೇ ವಿಚಾರ ಟ್ವಿಟರ್‌ನಲ್ಲಿ ಬಹಳ ಟ್ರೆಂಡ್ ಆಗುತ್ತಿದೆ.
ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಸಣ್ಣ ಟೀಸರ್ ಬಂದಿತ್ತು. ಸ್ಟೈಲಿಶ್ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದ ಝಲಕ್ ಅದು. ಅಜನೀಶ್ ಲೋಕನಾಥ್ ಬಿಜಿಎಂ ಹಿನ್ನೆಲೆಯಲ್ಲಿ ದರ್ಶನ್ ಖಡಕ್ ವಾಯ್ಸ್‌ನಲ್ಲಿ 'ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು' ಎನ್ನುವ ಡೈಲಾಗ್ ಇದ್ದ ಟೀಸರ್ ಗಮನ ಸೆಳೆದಿತ್ತು, ಆ ಬಳಿಕ ಚಿತ್ರದ ಯಾವುದೇ ಫೋಟೊ, ವೀಡಿಯೋ ಹೊರ ಬರಲಿಲ್ಲ.
ಸಿನಿಮಾ ಟೀಸರ್, ಟ್ರೈಲರ್ ಅಥವಾ ಇಡೀ ಸಿನಿಮಾ ಲೀಕ್ ಆಗುವುದು ಹೊಸದೇನು ಅಲ್ಲ. ದೊಡ್ಡ ದೊಡ್ಡ ಸಿನಿಮಾಗಳಿಗೆ ಕಿಡಿಗೇಡಿಗಳು ಇಂತಹ ಶಾಕ್ ಕೊಟ್ಟಿದ್ದಾರೆ. ಆದರೆ 'ಡೆವಿಲ್' ಚಿತ್ರದ ಟೀಸರ್ ಲೀಕ್ ಎನ್ನುವುದೆಲ್ಲಾ ಸುಳ್ಳು ಎನ್ನಲಾಗ್ತಿದೆ. ದರ್ಶನ್ ಆಪ್ತ ಮೂಲಗಳ ಮಾಹಿತಿ ಪ್ರಕಾರ ಯಾವುದೇ ಟೀಸರ್ ಲೀಕ್ ಆಗಿಲ್ಲ, ಅಭಿಮಾನಿಗಳು ಟ್ರೆಂಡ್ ಕ್ರಿಯೇಟ್ ಮಾಡಲು ಹೀಗೆ ಪೋಸ್ಟ್ ಮಾಡುತ್ತಿದ್ದಾರೆ ಅಷ್ಟೇ ಎನ್ನುತ್ತಿದ್ದಾರೆ.
'ಡೆವಿಲ್' ಚಿತ್ರಕ್ಕೆ ರಚನಾ ರೈ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮಹೇಶ್ ಮಂಜ್ರೇಕರ್, ಜಿಸ್ಸು ಸೇನ್‌ಗುಪ್ತಾ, ಮುಖೇಶ್ ರಿಷಿ, ಫರ್ದೀನ್ ಖಾನ್ ಚಿತ್ರದ ತಾರಾಗಣದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಸ್ವತಃ ನಿರ್ದೇಶಕ ಮಿಲನಾ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾರೆಗಮ ಸಂಸ್ಥೆಗೆ ಚಿತ್ರದ ಆಡಿಯೋ ರೈಟ್ಸ್ ಮಾರಾಟವಾಗಿದೆ.
'ಡೆವಿಲ್' ಬಳಿಕ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ. ಕೆವಿಎನ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಬೇಕಿತ್ತು. ಕಾರಣಾಂತರಗಳಿಂದ ಅದು ಬದಲಾಗುತ್ತಿದೆ. ಬೇರೆ ಬ್ಯಾನರ್‌ನಲ್ಲಿ ದರ್ಶನ್- ಪ್ರೇಮ್ ಸಿನಿಮಾ ಬರಲಿದೆ. ಇನ್ನು ಸೂರಪ್ಪ ಬಾಬು ನಿರ್ಮಾಣದ ಚಿತ್ರದಲ್ಲಿ ಕೂಡ ದರ್ಶನ್ ನಟಿಸಲು ಒಪ್ಪಿದ್ದರು. ಆದರೆ ಅವರ ಅಡ್ವಾನ್ಸ್ ಹಣವನ್ನು ದರ್ಶನ್ ವಾಪಸ್ ಕೊಟ್ಟಿದ್ದಾರೆ. ಮುಂದಿನ ತಿಂಗಳು 'ಡೆವಿಲ್' ಸಿನಿಮಾ ಚಿತ್ರೀಕರಣ ಪುನರಾರಂಭವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











