ರೇಣುಕಾಸ್ವಾಮಿ ಪ್ರಕರಣ, ದರ್ಶನ್‌ಗೆ ಶಾಕ್ ನೀಡಿದ ಸ್ವಿಜರ್ಲ್ಯಾಂಡ್..!
ದರ್ಶನ್ ಅವರಂತಹ ನಂಬರ್ 1 ಹೀರೋ ಸುಮ್ಮನೆ ಕೂತರೆ ಅವರಿಗೆ ಮಾತ್ರ ಅಲ್ಲ ಇಡೀ ಚಿತ್ರರಂಗಕ್ಕೆ ನಷ್ಟ ಗ್ಯಾರೆಂಟಿ. ಯಾಕೆಂದರೆ ವರ್ಷಕ್ಕೆ ಎರಡು ಚಿತ್ರಗಳನ್ನು ಕಡ್ಡಾಯವಾಗಿ ಮಾಡುತ್ತಾ ಬಂದವರು ದರ್ಶನ್. ಆದರೆ ಕಳೆದ ವರ್ಷ ದುರಾದೃಷ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆನ್ನು ಹತ್ತಿತ್ತು. ಅ'ಪವಿತ್ರ' ಸಂಬಂಧ ಸೆರೆವಾಸ ಅನುಭವಿಸುವಂತೆ ಮಾಡಿತ್ತು. ಅಭಿಮಾನಿಗಳ ದುಃಖಕ್ಕೆ ಕಾರಣವೂ ಆಗಿತ್ತು.
ಆದರೆ ಈಗ ಕಾರ್ಮೋಡ ಸರಿದಿದೆ. ದರ್ಶನ್ ಬದುಕು ಮತ್ತೆ ಮೊದಲಿನ ಲಯಕ್ಕೆ ಬಂದಿದೆ. ಮಗ ಮತ್ತು ಪತ್ನಿಯ ಜೊತೆ ನೆಮ್ಮದಿಯಿಂದ ಬದುಕುತ್ತಿರುವ ದರ್ಶನ್ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಶತಾಯು ಗತಾರು ಈ ವರ್ಷ ಡೆವಿಲ್ ಚಿತ್ರವನ್ನು ತೆರೆಗೆ ತರಬೇಕೆನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿದ್ಧಾರೆ. ಆದರೆ ಇದೇ ಸಮಯದಲ್ಲಿ ದರ್ಶನ್‌ಗೆ ಅವರದ್ದೇ ನೆಚ್ಚಿನ ತಾಣವಾದ ಸ್ವಿಜರ್ಲ್ಯಾಂಡ್ ಶಾಕ್ ನೀಡಿದೆ.

ಹೌದು, ದರ್ಶನ್ ಅವರ ಹೃದಯದಲ್ಲಿ ಸ್ವಿಜರ್ಲ್ಯಾಂಡ್‌ಗೆ ವಿಶೇಷವಾದ ಸ್ಥಾನ ಇದೆ. ಯಾಕೆಂದರೆ ದರ್ಶನ್ ಅವರ ವೃತ್ತಿ ಬದುಕಿನ ಹಲವು ನೆನಪುಗಳು ಸ್ವಿಜರ್ಲ್ಯಾಂಡ್ ಜೊತೆ ಇವೆ. 'ಪೋರ್ಕಿ' ಹಿಡಿದು ರಾಬರ್ಟ್‌ವರೆಗೆ ದರ್ಶನ್ ಅವರ ಹಲವು ಚಿತ್ರಗಳ ಚಿತ್ರೀಕರಣ ಸ್ವಿಜರ್ಲ್ಯಾಂಡ್ ನಲ್ಲಿ ನಡೆದಿದೆ. ಒಂದರ್ಥದಲ್ಲಿ ಸ್ವಿಜರ್ಲ್ಯಾಂಡ್ ಇರದ ದರ್ಶನ್ ಅವರ ಚಿತ್ರ ಅಪೂರ್ಣ.
ಆದರೆ ಈಗ ಇದೇ ಸ್ವಿಜರ್ಲ್ಯಾಂಡ್ ಗೆ ದರ್ಶನ್ ಕಾಲಿಡುವಂತೆ ಇಲ್ಲ. ಇದಕ್ಕೆ ಕಾರಣವಾಗಿದ್ದು ರೇಣುಕಾ ಸ್ವಾಮಿ ಪ್ರಕರಣ. ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಸದ್ಯ ದರ್ಶನ್ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಆದರೆ.. ಈ ಥೈಲ್ಯಾಂಡ್ ಪ್ರವಾಸ ಪೂರ್ವ ನಿಯೋಜಿತ ಅಲ್ಲ.
ಹೌದು, ''ನ್ಯೂಸ್ 18 ಕನ್ನಡ'' ವರದಿಯ ಪ್ರಕಾರ ಅಸಲಿಗೆ ದರ್ಶನ್ ತಮ್ಮ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಈ ಮೊದಲು ಸ್ವಿಜರ್ಲ್ಯಾಂಡ್‌ಗೆ ಹೋಗಬೇಕೆಂದುಕೊಂಡಿದ್ದರು. 64 ಸಿಸಿಎಚ್ ಕೋರ್ಟ್ ಅನುಮತಿ ಪಡೆದು ದರ್ಶನ್ ಯುರೋಪ್‌ನ ಸ್ವಿಟ್ಜರ್‌ಲ್ಯಾಂಡ್ ವೀಸಾಗೆ ಅಪ್ಲೈ ಮಾಡಿದ್ದರು. ಆದರೆ ದರ್ಶನ್ ಅವರ ಮೇಲೆ ಇನ್ನು ರೇಣುಕಾಸ್ವಾಮಿ ಕೊಲೆ ಆರೋಪ ಇದೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇದೆ. ಈ ಹಿನ್ನೆಲೆ ವೀಸಾ ಕೊಡಲು ಸ್ವಿಟ್ಜರ್‌ಲ್ಯಾಂಡ್ ನಿರಾಕರಿಸಿದೆ.
ಹೀಗಾಗಿ ಬೇರೆ ದಾರಿ ಇಲ್ಲದೇ ದರ್ಶನ್ ಈಗ ತಮ್ಮ ಡೆವಿಲ್ ತಂಡದ ಜೊತೆ ಥೈಲ್ಯಾಂಡ್‌ನತ್ತ ಮುಖ ಮಾಡಿದ್ದಾರೆ. ಪುಕೆಟ್‌ನಲ್ಲಿ ಈಗಾಗಲೇ ಬಿಡಾರ ಹೂಡಿದ್ದಾರೆ. ಇಲ್ಲಿ ಹಾಡು ಮತ್ತು ಒಂದು ಸಾಹಸ ಸನ್ನಿವೇಶವನ್ನು ಸೆರೆ ಹಿಡಿಯುವ ಪ್ಲ್ಯಾನ್‌ನ್ನು ನಿರ್ದೇಶಕ ಮಿಲನಾ ಪ್ರಕಾರ್ಶ ಮಾಡಿದ್ದಾರೆ ಎನ್ನುವ ಸುದ್ದಿ ಇದ್ದು, ಈ ಭಾಗದ ಚಿತ್ರೀಕರಣ ಮುಗಿದರೆ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾದಂತೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ.. ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ಥೈಲ್ಯಾಂಡ್‌ಗೆ ಚಿತ್ರತಂಡ ತೆರಳಿದ್ದು ಇದೇ ವರ್ಷ ಬೆಳ್ಳಿತೆರೆಯಲ್ಲಿ 'ಡೆವಿಲ್' ಧಗಧಗಿಸಲಿದೆ.


Click it and Unblock the Notifications











