ನಾಪತ್ತೆಯಾಗಿದ್ದ ದರ್ಶನ್ ಮಾಜಿ ಪಿಎ ಮಲ್ಲಿ 8 ವರ್ಷಗಳ ಬಳಿಕ ಪ್ರತ್ಯಕ್ಷ; ದಿಢೀರ್ ಸುದ್ದಿಗೋಷ್ಠಿ
ನಟ ದರ್ಶನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ 2018ರಲ್ಲಿ ದಿಢೀರ್ ನಾಪತ್ತೆ ಆಗಿದ್ದರು. 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ 1 ಕೋಟಿ ರೂ. ವಂಚನೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಆ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಅಜ್ಞಾತದಲ್ಲಿದ್ದ ಮಲ್ಲಿ ಈಗ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ.
15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಮಲ್ಲಿಕಾರ್ಜುನ್ ಗುರ್ತಿಸಿಕೊಂಡಿದ್ದರು. ದರ್ಶನ್ ಮಾತ್ರವಲ್ಲ ದಿನಕರ್ ಅವರಿಗೂ ಬಹಳ ಆಪ್ತರಾಗಿದ್ದರು. ಇದೇ ಕಾರಣಕ್ಕೆ ದರ್ಶನ್ ಮ್ಯಾನೇಜರ್ ಕೆಲಸ ಕೊಟ್ಟು ಜೊತೆಗೆ ಇಟ್ಟುಕೊಂಡಿದ್ದರು. ತಮ್ಮನಿಗಿಂತ ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದರು. ದಿನಕರ್ ಕೂಡ ಆಗಾಗ್ಗೆ ಹಣದ ಸಹಾಯ ಮಾಡುತ್ತಿದ್ದರು. ಆದರೆ ಏಕಾಏಕಿ ಅರ್ಜುನ್ ಸರ್ಜಾ ಹಾಗೂ ದರ್ಶನ್ ಅವರಿಗೂ ಮಲ್ಲಿ ಮೋಸ ಮಾಡಿ ನಾಪತ್ತೆ ಆಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಎರಡು ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ವಿರುದ್ಧ ಅರ್ಜುನ್ ಸರ್ಜಾ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇದೀಗ ಉದ್ಘೋಷಣೆ ಪತ್ರ ಹೊರಡಿಸಿತ್ತು. ಗಾಂಧಿನಗರದಲ್ಲಿ ಮಲ್ಲಿ 11 ಕೋಟಿ ರೂ. ವಂಚನೆ ಮಾಡಿರುವ ತಲೆ ಮರೆಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದೇ ಮಲ್ಲಿ ಸುಮ್ಮನಿದ್ದರು. ತಮ್ಮ ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ದಿಢೀರನೆ ಬಂದು ಸುದ್ದಿಗೋಷ್ಠಿ ಕರೆದಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ವಿಚಾರಣಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲೇ ನಾಪತ್ತೆ ಆಗಿದ್ದ ಮಲ್ಲಿಕಾರ್ಜುನ್ ಬಂದು ಮಾಧ್ಯಮದವರನ್ನು ಭೇಟಿ ಆಗುವುದಾಗಿ ಹೇಳಿದ್ದಾರೆ. ಪಿಆರ್ ಮೂಲಕ ಮಾಧ್ಯಮದವರಿಗೆ ಸುದ್ದಿಗೋಷ್ಠಿಗೆ ಆಹ್ವಾನ ನೀಡಿದ್ದಾರೆ. "ನಾನು ಮಲ್ಲಿಕಾರ್ಜುನ್ ಬಿ ಸಂಕನಗೌಡರ. ಮೂಲತಃ ಗದಗದವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿತರಕನಾಗಿ, ಕೆಲಸ ಮಾಡಿದ್ದೇನೆ" ಎಂದು ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.

ಕೆಲವು ವರ್ಷಗಳಾದ ಮೇಲೆ ಮತ್ತೆ ನಾನು ವಾಪಾಸ್ ಬಂದಿದ್ದೀನಿ ಎಂದು ಮಲ್ಲಿ ತಿಳಿಸಿದ್ದಾರೆ. "ಅನಿವಾರ್ಯ ಕಾರಣಗಳಿಂದ ಮತ್ತು ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆ, ನನ್ನ ಬಿಸಿನೆಸ್‌ನಲ್ಲಿ ನಷ್ಟ ಉಂಟಾಗಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು. ನನ್ನ ಮುಂದಿನ ಯೋಜನೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು 16- 04- 2026, ಗುರುವಾರದಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ( 11AM) ಬೆಂಗಳೂರಿನ ಜಿಟಿ ಮಾಲ್ ಎಮ್ ಎಮ್ ಬಿ ಲೆಗೆಸಿ ಇಲ್ಲಿ ನಾನು ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದೇನೆ. ತಾವೆಲ್ಲರೂ ದಯವಿಟ್ಟು ಬರಬೇಕಾಗಿ ವಿನಂತಿ" ಎಂದು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯಾವೆಲ್ಲಾ ವಿಚಾರಗಳಿಗೆ ಸ್ಪಷ್ಟನೆ ಕೊಡುತ್ತಾರೆ? ಏನೆಲ್ಲಾ ಆರೋಪ ಮಾಡುತ್ತಾರೆ ಕಾದು ನೋಡಬೇಕಿದೆ.
ದರ್ಶನ್ ಅವರಿಗೂ ಕೂಡ ಮಲ್ಲಿಕಾರ್ಜುನ್ 2 ಕೋಟಿ ರೂ.ವರೆಗೆ ವಂಚನೆ ಮಾಡಿರುವ ಆರೋಪ ಇದೆ. ದರ್ಶನ್ ಆಪ್ತ ಎಂದು ಹೇಳಿಕೊಂಡು ಮಲ್ಲಿಕಾರ್ಜುನ್ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು. ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಬ್ಯಾರ್ ಅಡಿಯಲ್ಲಿ ಸಿನಿಮಾ ವಿತರಣೆ ಆರಂಭಿಸಿದ್ದರು. ಅರ್ಜುನ್ ಸರ್ಜಾ ನಿರ್ಮಾಣದ 'ಪ್ರೇಮಬರಹ' ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡಿದ್ದರು. ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಬುಕ್‌ಲೆಟ್‌ನಲ್ಲಿ ವಿತರಣೆಯ ಹಣದ ವಿಚಾರವನ್ನ ಬರೆದುಕೊಟ್ಟಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ಅರ್ಜುನ್ ಸರ್ಜಾ ಕಾನೂನು ಹೋರಾಟ ಆರಂಭಿಸಿದ್ದರು.
2003ರಿಂದ ದಿನಕರ್ ಹಾಗೂ ಮಲ್ಲಿಕಾರ್ಜುನ್ ಪರಿಚಯವಿತ್ತು. ಶಿವರಾಜ್‌ಕುಮಾರ್ ನಟನೆಯ 'ವಾಲ್ಮೀಕಿ' ಚಿತ್ರಕ್ಕೆ ಎಂ. ಎಸ್ ರಮೇಶ್ ಆಕ್ಷನ್ ಕಟ್ ಹೇಳಿದ್ದರು. ಆ ಚಿತ್ರಕ್ಕೆ ದಿನಕರ್ ಹಾಗೂ ಮಲ್ಲಿ ಇಬ್ಬರೂ ಸಹಾಯಕರಾಗಿ ಕೆಲಸ ಮಾಡಿದ್ದರು. ದಿನಕರ್ ನಿರ್ದೇಶನದ 'ಜೊತೆ ಜೊತೆಯಲಿ' ಹಾಗೂ 'ನವಗ್ರಹ' ಚಿತ್ರಗಳಿಗೆ ಕೋ-ಡೈರೆಕ್ಟರ್ ಆಗಿ ಮಲ್ಲಿ ಕೆಲಸ ಮಾಡಿದ್ದರು. ಬಳಿಕ ಟೆಕ್ಕಿಗಳ ಜೊತೆ ಸೇರಿ ಯಶ್ ನಟನೆಯ 'ಮೊದಲ ಸಲ' ಸಿನಿಮಾ ನಿರ್ಮಿಸಿ ನಷ್ಟ ಅನುಭವಿಸಿದ್ದರು. ಬಳಿಕ ಮತ್ತೆ ದರ್ಶನ್ ಬಳಿ ಹೋಗಿ ಮ್ಯಾನೇಜರ್ ಆಗಿ ಸೇರಿಕೊಂಡಿದ್ದರು.
'ಬುಲ್‌ಬುಲ್' ಸಿನಿಮಾ ಸಮಯದಲ್ಲಿ ಮಲ್ಲಿಕಾರ್ಜುನ್‌ಗೆ ದಿನಕರ್ 40 ಲಕ್ಷ ರೂ. ಕೊಟ್ಟಿದ್ದರಂತೆ. ಆದರೆ ಸಾಲ ತೀರಿಸಿರಲಿಲ್ಲ. ಆ ಸಾಲ ಬೆಳೆದು ದೊಡ್ಡದಾಗಿತ್ತು ಎಂದು ಮಲ್ಲಿ ನಾಪತ್ತೆಯಾದ 15 ದಿನಗಳ ಬಳಿಕ ಸ್ವತಃ ದಿನಕರ್ ಹೇಳಿದ್ದರು.


Click it and Unblock the Notifications











