ಸಾಲಕ್ಕೆ ಹೆದರಿ 7 ವರ್ಷ ಊರು ಬಿಟ್ಟೆ, ಸಾಡೇ ಸಾಥ್ ನಡೀತಿತ್ತು; ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿ ಮಾತು
8 ವರ್ಷಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಾಪಸ್ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. 15 ವರ್ಷಗಳ ಕಾಲ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಬಿ ಸಂಕನಗೌಡರ ಸಾಲ ಮಾಡಿಕೊಂಡು ತೀರಿಸಲಾಗದೇ ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಮಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆ ದಿನ ಊರು ಬಿಟ್ಟು ಹೋಗಲು ಕಾರಣ ಏನು ಎನ್ನುವುದನ್ನು ವಿವರಿಸಿದ್ದಾರೆ.
ಅವತ್ತು ಬೇರೆ ಆಯ್ಕೆ ಇರಲಿಲ್ಲ. ಹಾಗಾಗಿ ಊರು ಬಿಟ್ಟು ಹೋದೆ. ಹೋಗುವ ಮುನ್ನ ಯಾರಿಗೆಲ್ಲಾ ಹಣ ಕೊಡಬೇಕಿತ್ತು ಎಲ್ಲರಿಗೂ ಮೆಸೇಜ್ ಮಾಡಿದ್ದೆ. ಆ ಬಳಿಕ ಸಿಮ್, ಮೊಬೈಲ್ ಎಲ್ಲಾ ಬಿಸಾಕಿ ಹೊರಟುಬಿಟ್ಟೆ ಎಂದು ಆ ದಿನ ಏನಾಯ್ತು ಎಂದು ವಿವರಿಸಿದ್ದಾರೆ. ಊರೂರು ಅಲೆಯುತ್ತಿದ್ದೆ. ಉತ್ತರ ಭಾರತದ ಸಾಕಷ್ಟು ಕಡೆಗಳಲ್ಲಿ ಕಾಲ ಕಳೆದೆ. ಒಂದೇ ಕಡೆ ಬಹಳ ದಿನ ಇರುತ್ತಿರಲಿಲ್ಲ. ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಹಾಗಾಗಿ ಹಿಂದಿ, ಇಂಗ್ಲೀಷ್ ತಕ್ಕ ಮಟ್ಟಿಗೆ ಬರ್ತಿತ್ತು. ಹಾಗಾಗಿ ಎಲ್ಲಿಗೂ ಭಾಷೆ ಸಮಸ್ಯೆ ಆಗಲಿಲ್ಲ. ಹೋಟೆಲ್, ರೆಸಾರ್ಟ್ ಹೀಗೆ ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.

ಪತ್ನಿಗೆ ಪತ್ರ ಬರೆದು ಮಾಹಿತಿ ನೀಡಿದ್ದೆ. ಕ್ಷೇಮವಾಗಿ ಇದ್ದೀನಿ. ಒಂದಲ್ಲ ಒಂದು ದಿನ ಬರ್ತೀನಿ. ಯಾವಾಗ ಬರ್ತೀನಿ ಎನ್ನುವುದು ಗೊತ್ತಿಲ್ಲ, ಧೈರ್ಯವಾಗಿರಿ ಎಂದು ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಪೋಷಕರು, ನೆಂಟರು, ಸ್ನೇಹಿತರು ಎಲ್ಲರನ್ನು ಬಿಟ್ಟು 7 ವರ್ಷ ಅಜ್ಞಾತದಲ್ಲಿದ್ದೆ. ನಿನಗೆ ಸಾಡೆ ಸಾಥ್ ನಡೀತಿದೆ. ಬಹಳ ಕೆಟ್ಟದಾಗುತ್ತದೆ, ಎಚ್ಚರವಾಗಿರು ಎಂದು ಗುರುಗಳೊಬ್ಬರು ನನಗೆ ಹೇಳಿದ್ರು.. ಸಾಡೆ ಸಾಥ್ ಇದ್ದಾಗಲೇ ಊರುಬಿಟ್ಟೆ, ಈಗ 7 ವರ್ಷ ಕಳೆದಿದೆ. ಈ ಸಾಡೆ ಸಾಥ್ ಮುಗಿದಿದೆ. ನೇಪಾಳದ ಸ್ನೇಹಿತನೊಬ್ಬನ ಊರಿಗೆ ಹೋಗಿದ್ದೆ. ಅಲ್ಲಿ ಆಶ್ರಯ ಪಡೆದೆ. ಅವರನ ರೆಸಾರ್ಟ್‌ನಲ್ಲಿ ಕೆಲ ದಿನಗಳ ಕಳೆದೆ ಎಂದು ಮಲ್ಲಿಕಾರ್ಜುನ್ ವಿವರಿಸಿದ್ದಾರೆ.
ಆರೇಳು ವರ್ಷ ಕಳೆದ ಬಳಿಕ ಗಿಲ್ಟ್ ಕಾಡುವುದಕ್ಕೆ ಶುರುವಾಯ್ತು.. ನನ್ನೂರಿಗೆ ಬರಬೇಕು, ಸಾಲ ತೀರಿಸಬೇಕು ಅನಿಸಿತು. ನನ್ನ ಕಷ್ಟ ಹೇಳಿಕೊಂಡರೆ ಅವಕಾಶ ಕೊಡ್ತಾರೆ, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಬೇಕು, ಸಾಧ್ಯವಾದಷ್ಟು ಸಾಲ ವಾಪಸ್ ಕೊಡೋಣ, ನಾನು ಊರು ಬಿಟ್ಟು ಹೋಗಿದ್ದು ತಪ್ಪು ಎಂದು ಗೊತ್ತಾಯ್ತು. ನನ್ನ ತಂದೆ, ತಾಯಿ, ಅಜ್ಜಿ, ಸ್ನೇಹಿತ ಪ್ರವೀಣ್ ಸತ್ತಾಗಲೂ ಬರೋಕೆ ಸಾಧ್ಯವಾಗಲಿಲ್ಲ. ಬಹಳ ಬೇಸರವಾಯಿತು. ತಂದೆ, ತಾಯಿ ಸತ್ತಾಗ ಹಿಡಿ ಮಣ್ಣು ಹಾಕಲು ಸಾಧ್ಯವಾಗಲಿಲ್ಲ ಎಂದು ಹೇಳಿ ಮಲ್ಲಿಕಾರ್ಜುನ್ ಭಾವುಕರಾಗಿದ್ದಾರೆ.
ಒಂದೂವರೆ ವರ್ಷದಿಂದ ನಮ್ಮ ಮನೆಯವರ ಸಂಪರ್ಕಕ್ಕೆ ಬಂದೆ. ಇದೇ ಸಮಯದಲ್ಲಿ ದರ್ಶನ್ ಸರ್ ಅವರ ವಿಚಾರ ಗೊತ್ತಾಯಿತು. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಗೊತ್ತಾಯ್ತು. ಈ ನಡುವೆ ಎರಡ್ಮೂರು ಶಸ್ತ್ರಚಿಕಿತ್ಸೆ ನಡೆದು ಬಹಳ ನೋವುಪಟ್ಟೆ. ಈ ನಡುವೆ ಅರ್ಜುನ್ ಸರ್ಜಾ ಅವರ ಕೇಸ್ ಇತ್ತು. ಅರ್ಜುನ್ ಸರ್ಜಾ ಅವರಿಗೆ ಚೆಕ್ ಕೊಟ್ಟಿದ್ದೆ, ಅದು ಬೌನ್ಸ್ ಆಗಿ ಸರ್ಚ್ ವಾರೆಂಟ್ ಇಶ್ಯೂ ಆಗಿತ್ತು. ಹಾಗಾಗಿ ಬೇಲ್ ಪಡೆಯಬೇಕಿತ್ತು. ಕಳೆದ ವರ್ಷ ಮೇ 29ಕ್ಕೇ ಬೇಲ್ ಸಿಕ್ತು. ಆಗ ಬೆಂಗಳೂರಿಗೆ ಬಂದು ಹೋದೆ. ದಿನಕರ್ ಅವರನ್ನು ಭೇಟಿ ಮಾಡಿದ್ದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ಸಾಲ ಕೊಟ್ಟ ಎಲ್ಲರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತನಾಡಿದ್ದೀನಿ. ಸಾಲು ವಾಪಸ್ ಕೊಡ್ತೀನಿ ಎಂದು ಹೇಳಿಬಂದಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











