ಗಣೇಶ ಮೆರವಣಿಗೆ ವೇಳೆ ದರ್ಶನ್ ಅಂಧಾಭಿಮಾನಿಗಳ ವಿಕೃತಿ, ಹುಚ್ಚಾಟ; ವೀಡಿಯೋ ವೈರಲ್
ಅಭಿಮಾನಿಗಳ ಹೆಸರಿನಲ್ಲಿ ಕೆಲವರ ಪುಂಡಾಟ ಆಗಾಗ್ಗೆ ಎಲ್ಲೆ ಮೀರುತ್ತದೆ. ಅಭಿಮಾನ ಸರಿ, ಆದರೆ ಎಲ್ಲವೂ ಒಂದು ಮಿತಿಯಲ್ಲಿ ಇರಬೇಕು. ಯಾವುದೂ ಕೂಡ ಅತಿ ಆಗಬಾರದು. ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾರ ಕಾಮನ್ ಎನ್ನುವಂತಾಗಿಬಿಟ್ಟಿದೆ.
ನಟ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಕೆಲವರ ಹುಚ್ಚಾಟ ಆಗಾಗ್ಗೆ ಸುದ್ದಿ ಆಗುತ್ತಿರುತ್ತದೆ. ಕೆಲ ದಿನಗಳ ಹಿಂದೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ವಿರುದ್ಧ ಕೆಲವರು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬೆದರಿಕೆ ಹಾಕುವ ಹಂತಕ್ಕೆ ಹೋಗಿದ್ದರು. ಪ್ರಥಮ್ ಈ ಬಗ್ಗೆ ದೂರು ನೀಡಿದ್ದರು. ಬಳಿಕ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಬುದ್ದಿ ಹೇಳಿದ್ದರು.

ಪ್ರಥಮ್ ಹಾಗೂ ಕೆಲ ಅಂಧಾಭಿಮಾನಿಗಳ ನಡುವಿನ ತಿಕ್ಕಾಟ ಮುಂದುವರೆಯುತ್ತಲೇ ಇದೆ. ಪರೋಕ್ಷವಾಗಿ ಇಂತಹವರಿಗೆ ಪ್ರಥಮ್ ಟಾಂಗ್ ಕೊಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸದ್ಯ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. 3 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ನಡೆಸುತ್ತಿದ್ದಾರೆ.
ದೇವಸ್ಥಾನಗಳಲ್ಲಿ ದರ್ಶನ್ ಹೆಸರಿನಲ್ಲಿ ಅಭಿಮಾನಿಗಳು ಪೂಜೆ ನಡೆಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೂಡ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆ ದೇವಸ್ಥಾನವೊಂದರಲ್ಲಿ ದೇವರ ವಿಗ್ರಹದ ಬಳಿ ದರ್ಶನ್ ಫೋಟೊ ಇಟ್ಟು ಪೂಜೆ ಮಾಡಿದ್ದ ಘಟನೆ ನಡೆದಿತ್ತು. ಕೂಡಲೇ ಅರ್ಚಕರನ್ನು ಅಮಾನತು ಮಾಡಲಾಗಿತ್ತು.

ಗಣೇಶ ಹಬ್ಬದ ಸಂಭ್ರಮದಲ್ಲಿ ಕೆಲವಡೆ ಗಣೇಶ ಮೂರ್ತಿ ಜೊತೆ ದರ್ಶನ್ ಫೋಟೊ ಇಟ್ಟು ಅಭಿಮಾನಿಗಳು ಪೂಜೆ ಮಾಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು ಗಣೇಶ ಮೆರವಣಿಗೆ ವೇಳೆ ದರ್ಶನ್‌ಗೆ ಜೈಕಾರ ಹಾಕುವುದು, ಫೋಟೊ ಹೊತ್ತು ಕುಣಿದಾಡುವಂತಹ ಘಟನೆಗಳು ನಡೆಯುತ್ತಿದೆ. ಇದೆಲ್ಲವೂ ಸರಿ, ಇದನ್ನು ಅಭಿಮಾನ ಎನ್ನಬಹುದು. ಆದರೆ ಇದನ್ನು ಮೀರಿ ಕೆಲವರು ಹುಚ್ಚಾಟ ಮೆರೆಯುತ್ತಿದ್ದಾರೆ.
ಈ ಹಿಂದೆ ನಟ ದರ್ಶನ್ ಮಾಧ್ಯಮದವರಿಗೆ ಬೈದಿದ್ದಾರೆ ಎನ್ನಲಾಗಿದ್ದ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕೆಟ್ಟ ಕೆಟ್ಟ ಪದಗಳು ಆ ಆಡಿಯೋದಲ್ಲಿವೆ. ಇದೇ ಆಡಿಯೋವನ್ನು ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕಿ ಕುಣಿದಿರುವ ವೀಡಿಯೋ ವೈರಲ್ ಆಗ್ತಿದೆ. ಗಣೇಶನ ಮುಂದೆ ಇಂತಹ ಕೆಟ್ಟ ಪದಗಳ ಆಡಿಯೋ ಹಾಕಿ ಕುಣಿಯುವುದು ಎಂಥಹ ವಿಕೃತಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಗಣೇಶನ ಮೆರವಣಿಗೆಯಲ್ಲಿ ಇಂತಹ ಕೆಟ್ಟ, ಕೊಳಕು ಪದಗಳನ್ನು ಬಳಸಿರುವ ಆಡಿಯೋವನ್ನು ಈ ರೀತಿ ಬಳಸುವುದು ಎಷ್ಟು ಸರಿ? ಯಾವುದಕ್ಕೂ ಒಂದು ಮಿತಿ ಇಲ್ಲವೇ? ಅಭಿಮಾನ ಸರಿ, ಆದರೆ ದೇವರಿಗೆ ಅಪಚಾರ ಮಾಡುವುದು ಸರೀನಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಗಣೇಶ ಮೆರವಣಿಗೆ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
ಕೆಲವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಈ ಹುಚ್ಚಾಟದ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಪರಿಜ್ಞಾನ ಬೇಡವೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











