ನಟ ಧನಂಜಯ್ ವಿರುದ್ಧ ದರ್ಶನ್ ಅಭಿಮಾನಿಗಳು ಕೆಂಡಕಾರುತ್ತಿರುವುದೇಕೆ?
ಡಾಲಿ ಧನಂಜಯ್ ಮದುವೆಗೆ ಇನ್ನೊಂದು ವಾರ ಬಾಕಿಯಿದೆ. ಮದುವೆ ತಯಾರಿ ಕೂಡ ಜೋರಾಗಿದೆ. ರಾಜಕೀಯ ಮುಖಂಡರು, ವಿವಿಧ ಮಠಾಧೀಶರು ಹಾಗೂ ಸಿನಿಮಾ ತಾರೆಯರಿಗೆ ಮದುವೆ ಆಮಂತ್ರಣ ನೀಡಿ ಆಹ್ವಾನಿಸುತ್ತಿದ್ದಾರೆ. ಇತ್ತೀಚೆಗೆ ನಟ ಯಶ್ ಅವರಿಗೂ ಆಮಂತ್ರಣ ನೀಡಿದ್ದರು.
ಎರಡು ದಿನಗಳ ಹಿಂದೆ ಭಾವಿ ಪತ್ನಿ ಜೊತೆ ನಟ ಧನಂಜಯ್ ಸುದ್ದಿಗೋಷ್ಠಿ ನಡೆಸಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವೇಳೆ ಸಾಕಷ್ಟು ಪ್ರಶ್ನೆಗಳಿಗೆ ಧನಂಜಯ್ ಹಾಗೂ ಧನ್ಯತಾ ಉತ್ತರಿಸಿದ್ದರು. ನಟ ದರ್ಶನ್ ಅವರನ್ನು ಮದುವೆಗೆ ಸ್ವಾಗತಿಸುವ ಬಗ್ಗೆಯೂ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಧನಂಜಯ್ ನೀಡಿದ್ದ ಉತ್ತರ ಇದೀಗ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಧನಂಜಯ್ ಮಾತನಾಡಿ "ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ, ಅಂದ್ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಂದಲೇ ಕರೆಯುತ್ತೇನೆ" ಎಂದು ಧನಂಜಯ್ ಹೇಳಿದ್ದರು. ಡಾಲಿಗೆ ದರ್ಶನ್ ಅವರನ್ನು ರೀಚ್(ಸಂಪರ್ಕಿಸುವುದು) ಆಗುವುದು ಅಷ್ಟು ಕಷ್ಟನಾ? ಸುಖಾ ಸುಮ್ಮನೆ ಹೀಗೆಲ್ಲಾ ಹೇಳಬಾರದು. ಅಣ್ಣ ಅಣ್ಣ ಎನ್ನುತ್ತಿದ್ದವರು ಅಣ್ಣನನ್ನು ಮದುವೆ ಕರೆಯೋಕೆ ಆಗುವುದಿಲ್ಲವೇ ಎಂದು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ವಿರುದ್ಧ ದರ್ಶನ್ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಬೆಳೆಯುವರೆಗೂ ಅಣ್ಣ ಅಣ್ಣ ಎನ್ನುತ್ತಿದ್ದರು ಈಗ ಹೀಗೆ ಮಾತಾಡೋದಾ? ಎನ್ನುತ್ತಿದ್ದಾರೆ. ಇದಕ್ಕೆ ಧನಂಜಯ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಡಾಲಿ ತಮ್ಮ ಪರಿಶ್ರಮದಿಂದಲೇ ಬೆಳೆದು ಬಂದದ್ದು. ಅವರನ್ನು ಯಾರೂ ಬೆಳೆಸಲಿಲ್ಲ. ಅವರು ಮದುವೆಗೆ ಆಹ್ವಾನಿಸುವುದಿಲ್ಲ ಎಂದು ಹೇಳಿಲ್ಲ ಅಲ್ಲವೇ? ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅಷ್ಟೇ ಹೇಳಿದ್ದಾರೆ. ಸುಖಾ ಸುಮ್ಮನೆ ಯಾಕೆ ಇದಕ್ಕೆ ದೊಡ್ಡ ರಾದ್ಧಾಂತ ಮಾಡುತ್ತಿದ್ದೀರಾ? ಎಂದು ಕೇಳುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿತ್ತು. ಈ ವೇಳೆ ಧನಂಜಯ್ ಪ್ರತಿಕ್ರಿಯಿಸಿ ಮಾತನಾಡಿದ್ದರು. "ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಅಲ್ಲಿ ಒಂದು ದುರಂತ ನಡೆದಿದೆ. ಒಂದು ಜೀವ ಹೋಗಿದೆ, ಒಂದು ತಪ್ಪು ಆಗಿದೆ. ಆ ಮನುಷ್ಯ(ರೇಣುಕಾಸ್ವಾಮಿ)ನ ತಂದೆ ತಾಯಿ ಮುಖ ನೋಡಿದಾಗ ಆತನ ಪತ್ನಿ ಮುಖ ನೋಡಿದರೆ ಎಂಥಹವರಿಗೂ ಬೇಸರ ಆಗುತ್ತದೆ. ಆ ಜೀವಕ್ಕೆ ನ್ಯಾಯ ಸಿಗಬೇಕು" ಎಂದು ಹೇಳಿದ್ದರು.
"ವಿಷಯ ಗೊತ್ತಾದಾಗ ನನಗೂ ಬೇಸರವಾಗಿತ್ತು. ಒಂದು ಕಡೆ ಆ ಜೀವಕ್ಕೆ ಸ್ಪಂದಿಸುವುದಾದರೆ ಮತ್ತೊಂದು ಕಡೆ ತುಂಬಾ ಪ್ರೀತಿ ಅಭಿಮಾನದಿಂದ ಪ್ರೀತಿಸುವವರ(ದರ್ಶನ್) ಹೆಸರು ಕೇಳಿಬಂದಾಗ ಅದು ಬೇಸರವಾಗುತ್ತದೆ. ಯಾವುದನ್ನು ಸಮರ್ಥಿಸುವುದಕ್ಕೆ ಆಗುವುದಿಲ್ಲ. ಎಲ್ಲದ್ದಕ್ಕೂ ಕಾನೂನಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಅದು ಬಿಟ್ಟು ನಾವೇನು ಮಾತನಾಡಿದರೂ ಪ್ರಯೋಜನವಿಲ್ಲ" ಎಂದು ಧನಂಜಯ್ ತಿಳಿಸಿದ್ದರು.
ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ದರ್ಶನ್ ಸದ್ಯಕ್ಕೆ ಅಷ್ಟು ಸುಲಭವಾಗಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ತಮ್ಮ ಫ್ಯಾಮಿಲಿ ಹಾಗೂ ಕೆಲವೇ ಆಪ್ತರ ಜೊತೆ ಇದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಮೌನಕ್ಕೆ ಜಾರಿದ್ದಾರೆ. ಇತ್ತೀಚೆಗೆ ಚಿತ್ರರಂಗದವರು ಯಾರು ಕೂಡ ದರ್ಶನ್ ಭೇಟಿ ಮಾಡಿಲ್ಲ. ಹಾಗಾಗಿಯೇ ಧನಂಜಯ್ ಕೂಡ ಸಂಪರ್ಕಿಸಿ ಮದುವೆಗೆ ಕರೆಯಲು ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ.
ದರ್ಶನ್ ನಟನೆಯ 'ಯಜಮಾನ' ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದರು. ಡಾಲಿ ಸಿನಿಮಾಗಳ ಪ್ರಚಾರಕ್ಕೆ ದರ್ಶನ್ ಬೆಂಬಲವಾಗಿ ನಿಂತಿದ್ದರು. ಧನು ನಿರ್ಮಾಣದ 'ಟಗರು ಪಲ್ಯ' ಚಿತ್ರದ ಪ್ರಚಾರಕ್ಕೆ ದರ್ಶನ್ ಬಂದಿದ್ದರು.


Click it and Unblock the Notifications











