'ಡೆವಿಲ್' ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಜೋರಾಗಿದ್ಯಾ? ಏನಿದೆ ಹೊಸ ಅಪ್‌ಡೇಟ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಸಿನಿಮಾ ದಸರಾ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ. ಸದ್ಯ ಚಿತ್ರದ ಡಬ್ಬಿಂಗ್ ವರ್ಕ್ ಶುರುವಾಗಿದೆ.
'ಕಾಟೇರ' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ದರ್ಶನ್ ನಟಿಸುತ್ತಿರುವ ಸಿನಿಮಾ ಇದು. ಕಾರಣಾಂತರಗಳಿಂದ ಸಿನಿಮಾ ತಡವಾಯಿತು. ಈಗಾಗಲೇ ಟಾಕಿ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಸಾಂಗ್ಸ್ ಹಾಗೂ ಫೈಟ್ಸ್ ಶೂಟಿಂಗ್ ನಡೆಯಬೇಕಿದೆ. ಅದಕ್ಕೂ ಮುನ್ನ ಡಬ್ಬಿಂಗ್ ಮುಗಿಸಲು ಚಿತ್ರತಂಡ ಮುಂದಾಗಿದೆ. ಮೊದಲಿಗೆ ದರ್ಶನ್ ತಮ್ಮ ಪಾತ್ರಕ್ಕೆ ವಾಯ್ಸ್ ಡಬ್ ಮಾಡಲಿದ್ದಾರೆ.

ಸ್ವತಃ ಮಿಲನಾ ಪ್ರಕಾಶ್ 'ಡೆವಿಲ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದು ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಗಿಲ್ಲಿ ನಟ, ಶೋಭರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚೆಗೆ ಥ್ರಿಯೇಟ್ರಿಕಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಜೊತೆಗೆ ಓಟಿಟಿ ರೈಟ್ಸ್ ಬಹಳ ಮುಖ್ಯ ಎನ್ನುವಂತಾಗಿದೆ. ಡಿಜಿಟಲ್ ರೈಟ್ಸ್‌ನಿಂದಲೇ ಸ್ಟಾರ್ ನಟರ ಚಿತ್ರಗಳಿಗೆ ಭರ್ಜರಿ ಆದಾಯ ಬರುವಂತಾಗಿದೆ.
ಸ್ಟಾರ್ ನಟರ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಲು ಓಟಿಟಿ ಸಂಸ್ಥೆಗಳ ನಡುವೆಯೂ ಪೈಪೋಟಿ ಏರ್ಪಡುತ್ತದೆ. 'ಡೆವಿಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿರುವುದರಿಂದ ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಜೋರಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗ್ತಿದೆ. ಇನ್ನು ಚಿತ್ರದ ಟ್ರೈಲರ್, ಹಾಡುಗಳು ಬಂದಿಲ್ಲ. ಸದ್ಯಕ್ಕೆ ಚಿತ್ರತಂಡ ಸಿನಿಮಾ ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿದೆ. ಶೀಘ್ರದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ.
ದರ್ಶನ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ. ಅದರಲ್ಲೂ 'ಡೆವಿಲ್' ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹಾಗಾಗಿ ಡಿಜಿಟಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಲಿದೆ. ಅದಕ್ಕಾಗಿ ಡಿಮ್ಯಾಂಡ್ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಸದ್ಯ ನಾಗರಬಾವಿಯಲ್ಲಿರುವ ಸಾಧುಕೋಕಿಲ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ಆರಂಭವಾಗುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ. ಬುಕ್‌ಮೈಶೋನಲ್ಲಿ 'ಡೆವಿಲ್' ಪೇಜ್ ಕ್ರಿಯೇಟ್ ಆಗಿದ್ದು ಅಭಿಮಾನಿಗಳು ಆಸಕ್ತಿ ವ್ಯಕ್ತಪಡಿಸಿ ಲೈಕ್ ಮಾಡುತ್ತಿದ್ದಾರೆ. ಬರೀ ಬುಕ್‌ಮೈಶೋನಲ್ಲಿ 'ಕಾಟೇರ' ಚಿತ್ರದ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿ ದಾಖಲೆ ಬರೆದಿತ್ತು. ಅದನ್ನು 'ಡೆವಿಲ್' ಮೀರಿಸುತ್ತೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಈಗಾಗಲೇ 25 ಸಾವಿರಕ್ಕೂ ಹೆಚ್ಚು ಜನ ಸಿನಿಮಾ ನೋಡಲು ಬಯಸಿ ಪೇಜ್ ಲೈಕ್ ಮಾಡಿದ್ದಾರೆ.

ಅಧಿಕಾರ, ಸೇಡು ಮತ್ತು ನಿಜವಾದ ಪ್ರೀತಿಯ ಕಥೆ 'ಡೆವಿಲ್' ಎಂದು ಚಿತ್ರತಂಡ ಹೇಳಿದೆ. ಇನ್ನು ಚಿತ್ರದಲ್ಲಿ ದರ್ಶನ್ ರಾಜ್ಯದ ಮುಖ್ಯಮಂತ್ರಿಯ ಅವತಾರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅದರ ಸುಳಿವು ಕೊಡುವಂತಹ ಮೇಕಿಂಗ್ ಫೋಟೊವೊಂದು ವೈರಲ್ ಆಗಿದ್ದು ಗೊತ್ತೇಯಿದೆ. ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ದಸರಾ ಹಬ್ಬಕ್ಕೆ 'ಡೆವಿಲ್' ಸಿನಿಮಾ ತೆರೆಗೆ ಬರಬೇಕಿತ್ತು. ರೇಣುಕಾಸ್ವಾಮಿ ಪ್ರಕರಣದಿಂದ ವರ್ಷದ ಹಿಂದೆ ಚಿತ್ರೀಕರಣ ನಿಂತು ಹೋಗಿತ್ತು. ಇನ್ನು ಬೆಂಗಳೂರು, ಮೈಸೂರು, ರಾಜಸ್ಥಾನದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ನಟ ದರ್ಶನ್ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ ಆಕ್ಷನ್ ಸನ್ನಿವೇಶಗಳನ್ನು ತಡವಾಗಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗಲಿದೆ.


Click it and Unblock the Notifications











