ದರ್ಶನ್‌ಗೆ ಜೀವಾವಧಿ ಶಿಕ್ಷೆಯಾದರೆ ಸಿನಿಜೀವನದ ಕಥೆಯೇನು? ಚಿತ್ರರಂಗಕ್ಕೆ ನಷ್ಟವಾಗುತ್ತಾ?
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದಾರೆ. ಈ ಬಾರಿ ಅಷ್ಟು ಸುಲಭವಾಗಿ ಜಾಮೀನು ಸಿಗಲ್ಲ, ಅವರಿಗೆ ಜೀವಾವಧಿ ಶಿಕ್ಷೆಯಾಗಬಹುದು ಎಂದು ಕಾನೂನು ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ವೇಳೆ ಅದು ನಿಜವೇ ಆಗಿಬಿಟ್ಟರೆ ಮುಂದೇನು? ದರ್ಶನ್ ಸಿನಿ ಜೀವನ ಮುಗಿಯುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ನಟ ದರ್ಶನ್ ಈ ಪ್ರಕರಣದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ ಎಂದೇ ಹೇಳಲಾಗುತ್ತಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಹೋದಾಗ ದರ್ಶನ್ ಅಲ್ಲಿ ಇದ್ದರೋ ಇಲ್ಲವೋ ಎನ್ನುವ ಬಗ್ಗೆ ವಿಚಾರಣೆ ವೇಳೆ ಸತ್ಯ ಗೊತ್ತಾಗಲಿದೆ. ಇನ್ನುಳಿದಂತೆ ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್, ಪೋರೆನ್ಸಿಕ್ ಸಾಕ್ಷ್ಯ, ಮುಖ್ಯವಾಗಿ ಆರೋಪಿಗಳ ಪೋನ್ ಕಾಲ್ ಡೀಟೈಲ್ಸ್ ಸೇರಿದಂತೆ ಪ್ರಾಸಿಕ್ಯೂಷನ್ ಬಳಿ ಸಾಕ್ಷಾಧಾರಗಳಿವೆ. ಇನ್ನು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ದರ್ಶನ್ ತಮ್ಮ ಅಭಿಮಾನಿ ಸಂಘದ ರಾಘವೇಂದ್ರನ ಸಹಾಯದಿಂದ ಅಪಹರಣ ಮಾಡಿಸಿದ್ದಾರೆ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದೆಲ್ಲವೂ ವಿಚಾರಣೆ ವೇಳೆ ದರ್ಶನ್‌ಗೆ ಕಂಟಕವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ದರ್ಶನ್ ಜಾಮೀನಿಗೆ ಸುಪ್ರೀಂ ಕೋರ್ಟ್‌ನಲ್ಲೇ ಹಿನ್ನಡೆಯಾಗಿದೆ. ಹಾಗಾಗಿ ಮತ್ತೆ ಜಾಮೀನು ಕೇಳಿ ಕೋರ್ಟ್ ಮೆಟ್ಟಿಲೇರುವುದು ಅನುಮಾನ. ಇದೊಂದು ವಿಶೇಷ ಪ್ರಕರಣ ಎಂದು ಸುಪ್ರೀಂ ಹೇಳಿಬಿಟ್ಟಿದೆ. ಒಂದು ವೇಳೆ ಅರ್ಜಿ ಹಾಕಿದರೂ ಜಾಮೀನು ಸಿಗಲ್ಲ, ಹಾಗಾಗಿ ವಿಚಾರಣೆ ಮುಗಿಯುವರೆಗೂ ಪ್ರಕರಣದ ಆರೋಪಿಗಳು ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದ ದರ್ಶನ್ ಜಾಮೀನು ಪಡೆಯಲು ಬಹಳ ಆತುರ ಪಟ್ಟರು. ಅನಾರೋಗ್ಯದ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದಿದ್ದರು. ಕೂಡಲೇ ಸರ್ಜರಿ ಮಾಡಿಸದೇ ಇದ್ದರೆ ಲಕ್ವ ಹೊಡೆಯುತ್ತದೆ ಎಂದು ಅವರ ಪರ ವಕೀಲರು ವಾದ ಮಾಡಿದ್ದರು. ಆದರೆ ಬಳಿಕ ಸರ್ಜರಿ ನಡೆಯಲಿಲ್ಲ, ಹಾಗಾಗಿ ಸುಳ್ಳು ಹೇಳಿ ಜಾಮೀನು ಪಡೆದಂತೆ ಆಗಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿರುವ ನಟ ಚಿಕ್ಕಣ್ಣನ ಜೊತೆ ದರ್ಶನ್ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಅತಿರೇಕಕ್ಕೆ ಬ್ರೇಕ್ ಹಾಕದೇ ಇದ್ದಿದ್ದು ಎಲ್ಲವೂ ಜಾಮೀನು ರದ್ದಾಗಲು ಕಾರಣವಾಗಿದೆ.
ಶೀಘ್ರದಲ್ಲೇ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ. ಆದಷ್ಟು ಬೇಗ ವಿಚಾರಣೆ ಆರಂಭವಾಗಲಿದೆ. ಆದರೂ ಎಷ್ಟು ಬೇಗ ಮುಗಿಯುತ್ತದೆ ಎನ್ನುವುದು ಗೊತ್ತಿಲ್ಲ. ಅಲ್ಲಿಯವರೆಗೂ ದರ್ಶನ್ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇನ್ನು ವಿಚಾರಣೆ ಮುಗಿದು ತೀರ್ಪು ಬಂದು ದರ್ಶನ್‌ಗೆ ಜೀವಾವಧಿ ಶಿಕ್ಷೆಯಾದರೆ ಚಿತ್ರರಂಗಕ್ಕೂ ನಷ್ಟ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್. ಆತನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಅದರಿಂದ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಅವರ ಸಿನಿಮಾಗಳಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಾಕಷ್ಟು ಕುಟುಂಬಗಳಿಗೆ ಊಟ ಮಾಡುತ್ತಾರೆ. ಅದೆಕ್ಕೆಲ್ಲಾ ಪೆಟ್ಟು ಬೀಳುತ್ತದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅಭಿಪ್ರಾಯಪಟ್ಟಿದ್ದಾರೆ.

ದರ್ಶನ್ ಕನ್ನಡ ಚಿತ್ರರಂಗದ ಗ್ಯಾರಂಟಿ ನಟ. ಅಂದರೆ ಅವರ ಸಿನಿಮಾಗಳು ಚೆನ್ನಾಗಿದ್ಯೋ ಇಲ್ಲವೋ ಅದು ನಂತರದ ಮಾತು. ಆದರೆ ಮೊದಲ ದಿನವೇ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಆ ರೀತಿ ಅಭಿಮಾನಿಗಳನ್ನು ಚಿತ್ರರಂಗಕ್ಕೆ ಸೆಳೆಯುವ ಶಕ್ತಿ ಅವರಿಗಿದೆ. ಅವರ ಸಿನಿಮಾಗಳೇ ಬರದೇ ಹೋದರೆ ಚಿತ್ರರಂಗಕ್ಕೆ ಸಹಜವಾಗಿಯೇ ನಷ್ಟವಾಗುತ್ತದೆ. ದರ್ಶನ್ ಇಲ್ಲದೇ ಇದ್ದರೆ ಏನು, 'ಸು ಫ್ರಮ್ ಸೋ' ರೀತಿಯ ಸಿನಿಮಾಗಳು ಗೆಲ್ಲಲಿಲ್ಲವೇ? ಎಂದು ಕೆಲವರು ಹೇಳಬಹುದು. ಆದರೆ ಎಲ್ಲಾ ಸಿನಿಮಾಗಳು ಇದೇ ರೀತಿ ಸದ್ದು ಮಾಡಲ್ಲ. ದರ್ಶನ್ ರೀತಿಯ ಸ್ಟಾರ್ ನಟರ ಸಿನಿಮಾಗಳೇ ಚಿತ್ರರಂಗಕ್ಕೆ ಬಲ ಎಂದು ಫಿಲ್ಮಿಬೀಟ್ ಜೊತೆ ಉಮೇಶ್ ಬಣಕಾರ್ ಮಾತನಾಡಿದ್ದಾರೆ.
ಏಳೆಂಟು ಸಿನಿಮಾಗಳನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ಈಗಾಗಲೇ 'ಡೆವಿಲ್' ಸಿನಿಮಾ ಚಿತ್ರೀಕರಣ, ಡಬ್ಬಿಂಗ್ ಎಲ್ಲವನ್ನು ಮುಗಿಸಿದ್ದಾರೆ. ನಿರ್ಮಾಪಕರಿಗೆ ಸಮಸ್ಯೆ ಆಗಬಾರದು ಎಂದು ತಡ ಮಾಡದೇ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗಿದ್ದರು. 'ಡೆವಿಲ್' ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ. 'ಸಾರಥಿ' ರೀತಿಯಲ್ಲೇ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ ಎನ್ನುವುದರಲ್ಲಿ ಎರಡೂ ಮಾತಿಲ್ಲ ಎಂದು ಬಣಕಾರ್ ಹೇಳುತ್ತಾರೆ.
"ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳಿಗೆ ಸೀಮಿತ ಮಾರ್ಕೆಟ್ ಇದೆ ನಿಜ, ಆದರೆ ಅದು ಬಹಳ ಬಲಿಷ್ಠವಾಗಿದೆ. ಅವರು ಪ್ಯಾನ್ ಇಂಡಿಯಾ ಸಿನಿಮಾ ಹುಚ್ಚಿಗೆ ಬೀಳಲ್ಲ. ಕನ್ನಡದಲ್ಲಿ ಮಾತ್ರ ಸಿನಿಮಾಗಳನ್ನು ಮಾಡ್ತಿದ್ದಾರೆ. ಟಿವಿ ಕಾರ್ಯಕ್ರಮಗಳಿಂದ ದೂರವೇ ಉಳಿದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದ್ದಾರೆ. ಒಂದ್ಕಡೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚುವಂತಾಗಿದೆ. ದರ್ಶನ್ ಸಿನಿಮಾಗಳು ಬಂದು ಗೆದ್ದರೆ ಅದಕ್ಕೆಲ್ಲಾ ಮರುಜೀವ ಸಿಗುತ್ತದೆ. ಸಿನಿಮಾ ಹಬ್ಬ ಶುರುವಾಗುತ್ತದೆ. 'ಸು ಫ್ರಂ ಸೋ' ರೀತಿಯ ಮ್ಯಾಜಿಕ್ ಪದೇ ಪದೆ ಆಗಲ್ಲ, ಆದರೆ ದರ್ಶನ್ ಸಿನಿಮಾಗಳಿಗೆ 3 ದಿನಗಳ ಮಿನಿಮಮ್ ಗ್ಯಾರಂಟಿ ಪ್ರೇಕ್ಷಕರಿದ್ದಾರೆ. ಎಲ್ಲಾ ಚಿತ್ರಗಳಿಗೂ ಇದು ಸಾಧ್ಯವಿಲ್ಲ. ಇದು ಆಗಬಾರದಿತ್ತು, ಆಗಿ ಹೋಗಿದೆ, ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಆದರೆ ಜಿಎಸ್‌ಟಿ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರುವ ಆದಾಯಕ್ಕೆ ಹೊಡೆತಬಿದ್ದು ಬೊಕ್ಕಸಕ್ಕೆ ನಷ್ಟವಾಗುತ್ತದೆ" ಎಂದು ಬಣಕಾರ್ ತಿಳಿಸಿದ್ದಾರೆ.
ಮೊದಲಿನಿಂದಲೂ ದರ್ಶನ್ ಅಭಿಮಾನಿಗಳ ಅಂಧಾಭಿಮಾನ, ಅತಿರೇಕದ ವರ್ತನೆ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ದರ್ಶನ್ ಮನಸ್ಸು ಮಾಡಿದ್ದರೆ ಅಭಿಮಾನಿಗಳಿಗೆ ತಿಳಿ ಹೇಳಬಹುದಿತ್ತು. "ದರ್ಶನ್ ಅವರು ಅಭಿಮಾನಿಗಳ ಅತಿರೇಕವನ್ನು ಖಂಡಿಸಬೇಕಿತ್ತು. ಅದು ಅವರ ಜವಾಬ್ದಾರಿ. ಈ ಹಿಂದೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಇದೇ ರೀತಿ ಅತಿರೇಕದ ವರ್ತನೆ ತೋರಿದ್ದಾಗ ಅಣ್ಣಾವ್ರು ಮಾತನಾಡಿದ್ದರು. ನನಗೂ ಈ ಅಭಿಮಾನಿ ಸಂಘಕ್ಕೂ ಸಂಬಂಧ ಇಲ್ಲ ಎಂದಿದ್ರು. ಅಂದರೆ ಅತಿರೇಕದ ವರ್ತನೆಯನ್ನು ತಡೆಯುವ ಅವಕಾಶ ದರ್ಶನ್ ಅವರಿಗಿತ್ತು. ಒಮ್ಮೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ನಟ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ, ಧಮ್ಕಿ ಹಾಕಿದ್ದರು. ಆಗ ದರ್ಶನ್ ಅವ್ರು ಈ ಬಗ್ಗೆ ಮಾತನಾಡಬಹುದಿತ್ತು. ಬಹಳ ತಡವಾಗಿ ಕ್ಷಮೆ ಕೇಳಿ ಸುಮ್ಮನಾಗಿದ್ದರು. ಇದೆಲ್ಲಾ ತಪ್ಪು ಅಲ್ಲವೇ?" ಎಂದು ಬಣಕಾರ್ ಪ್ರಶ್ನಿಸಿದ್ದಾರೆ.
ನಟ ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳ ಬಗ್ಗೆ ಬಣಕಾರ್ ಮಾತನಾಡಿ "ಈಗಾಗಲೇ ಸೂರಪ್ಪ ಬಾಬು ಹೊರ ಬಂದಿದ್ದಾರೆ. ಕೊಟ್ಟಿದ್ದ 1 ಕೋಟಿ ರೂ. ಅಡ್ವಾನ್ಸ್ ಕೂಡ ವಾಪಸ್ ಪಡೆದಿದ್ದಾರೆ. ಇನ್ನು ಯಾರಿಗೆಲ್ಲಾ ಅಡ್ವಾನ್ಸ್ ಮರಳಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ನಿರ್ದೇಶಕ ಎಂ. ಡಿ ಶ್ರೀಧರ್ ಕೂಡ ಒಂದು ಸಿನಿಮಾ ನಿರ್ಮಾಣ ಮಾಡಲು ಮಾತುಕತೆ ನಡೆಸಿದ್ದರಂತೆ. ಆ ವಿಚಾರ ಏನಾಯ್ತು ಗೊತ್ತಿಲ್ಲ. ದರ್ಶನ್ ಅವರು ಶಿಕ್ಷೆ ಮುಗಿಸಿ ಮರಳಿ ಬಂದರೂ ಹಿಂದಿನ ಫಿಟ್‌ನೆಸ್ ಇರಲ್ಲ, ಸರ್ಜರಿ ಮಾಡದೇ ಬೇರೆ ವಿಧಿಯಿಲ್ಲ, ಸರ್ಜರಿ ಮಾಡಿದರೆ ಭವಿಷ್ಯ ಇಲ್ಲ ಎನ್ನುವಂತಾಗಿದೆ" ಎಂದು ಬಣಕಾರ್ ಹೇಳಿದ್ದಾರೆ.


Click it and Unblock the Notifications











