ಸಲಗ ವಿಜಯ್ ಕುಮಾರ್ ''ಲ್ಯಾಂಡ್ ಲಾರ್ಡ್''ನಲ್ಲಿ ದರ್ಶನ್ ಸದ್ದು, ಅರ್ಧಕ್ಕೆ ಮಾತು ನಿಲ್ಲಿಸಿದ ರಚಿತಾ ರಾಮ್
ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ...
ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ. ಆದರೂ ಕೂಡ ರಚಿತಾ ರಾಮ್ ಅವರನ್ನು ಜನ ಪ್ರೀತಿಯಿಂದ ಇವತ್ತು ಕೂಡ ''ಬುಲ್ ಬುಲ್'' ಎಂದೇ ಕರೆಯುತ್ತಾರೆ. ವಿಶೇಷ ಅಂದರೆ ಚಿತ್ರ ಬಂದು ಹೋಗಿ ಇಷ್ಟು ವರ್ಷಗಳಾದರೂ ಕೂಡ ಯಾರಾದರೂ ''ಬುಲ್ ಬುಲ್'' ಎಂದು ಕರೆದರೆ ರಚಿತಾ ರಾಮ್ ಹಿರಿಹಿರಿ ಹಿಗ್ಗುತ್ತಾರೆ.

ಇಷ್ಟೇ ಅಲ್ಲ ಸಮಯಾವಕಾಶ ಸಂದರ್ಭ ಸಿಕ್ಕರೆ ಸಾಕು ತಮ್ಮನ್ನು ತಾವು ದರ್ಶನ್ ಅವರ ಶಿಷ್ಯೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವಶ್ಯಕತೆ ಇರಲಿ.. ಇಲ್ಲದಿರಲಿ.. ದರ್ಶನ್ ಹೆಸರನ್ನು ವೇದಿಕೆಯ ಮೇಲೆ ಹೇಳಿ ನೆರೆದ ಅಪಾರ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಇದಕ್ಕೆ ''ಲ್ಯಾಂಡ್ ಲಾರ್ಡ್'' ಟೀಸರ್ ಬಿಡುಗಡೆ ಸಮಾರಂಭ ಮತ್ತೊಂದು ಉದಾಹರಣೆ.
ಹೌದು, ''ಲ್ಯಾಂಡ್ ಲಾರ್ಡ್''.. ಕನ್ನಡದ ಕರಿಚಿರತೆ, ಸಲಗ ವಿಜಯ್ ಕುಮಾರ್ ಅಭಿನಯದ ಚಿತ್ರ. ಎರಡು ದಶಕದ ಹಿಂದೆ ಸಾರಥಿ ಚಿತ್ರದ ಮೂಲಕ ಚಿನ್ನದ ಬೆಳೆಯನ್ನ ಬೆಳೆದ ಕೆ ವಿ ಸತ್ಯಪ್ರಕಾಶ್ ಅವರು ಈ ಬಾರಿ ತಮ್ಮ ಪುತ್ರ ಸೂರಜ್ ಜೊತೆಗೆ ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವನ್ನು ''ಜಂಟಲ್ ಮನ್''.. ''ಗುರು ಶಿಷ್ಯರು'' ಚಿತ್ರದ ನಿರ್ದೇಶಕ ಮತ್ತು ''ಕಾಟೇರ''ದ ''ಬರಹಗಾರ'' ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ.
ವಿಶೇಷ ಅಂದರೆ ''ಲ್ಯಾಂಡ್ ಲಾರ್ಡ್'' ದುನಿಯಾ ವಿಜಯ್ ಅವರ ಮಗಳು ಮೋನಿಕಾ ಅಭಿನಯದ ಚೊಚ್ಚಲ ಚಿತ್ರ. ಇನ್ನೂ ವಿಶೇಷ ಅಂದರೆ ಮಗಳ ಈ ಮೊದಲ ಚಿತ್ರದಲ್ಲಿ ದುನಿಯಾ ವಿಜಯ್ ತಮ್ಮ ಮುದ್ದಿನ ಮಗಳು ಮೋನಿಕಾ ಅವರ ತಂದೆಯ ಪಾತ್ರವನ್ನೇ ನಿರ್ವಹಿಸಿದ್ದಾರೆ. ಹಿಂದೆ ''ಪತ್ರಿಕೆ''ಯೊಂದಕ್ಕೆ ನೀಡಿದ ''ಸಂದರ್ಶನ''ದಲ್ಲಿ ದುನಿಯಾ ವಿಜಯ್ ಈ ಮಾತನ್ನ ಖುದ್ದು ತಾವೇ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಸ್ಟಾರ್ ಡೈಲಾಗ್ ರೈಟರ್ ಮಾಸ್ತಿ ಅವರ ಸಂಭಾಷಣೆ ಇದೆ. ಶ್ರೀಕಂಠ ಬರವಣಿಗೆಯಲ್ಲಿ ಕೈ ಜೋಡಿಸಿದ್ದಾರೆ.
ಹೀಗೆ ನಾನಾ ರೀತಿಯಲ್ಲಿ ಸದ್ದು ಮಾಡುತ್ತಾ ಸದ್ದು ಮಾಡುತ್ತಾ ಸುದ್ದಿಯಾಗುತ್ತಾ ಬಂದ ಈ ಚಿತ್ರದ ಟೀಸರ್ ಇಂದು (ನವೆಂಬರ್ 1) ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಇದೇ ಟೀಸರ್ ಬಿಡುಗಡೆ ಸಮಾರಂಭದಲ್ಲಿ ರಚಿತಾ ರಾಮ್ ತಮ್ಮ ಗುರು ದರ್ಶನ್ ಅವರ ಕುರಿತು ಮಾತನಾಡಿದ್ದಾರೆ. ''ಲ್ಯಾಂಡ್ ಲಾರ್ಡ್'' ಚಿತ್ರದ ಕುರಿತು ದರ್ಶನ್ ಸರ್ ಜೊತೆ ನಾನು ಚರ್ಚೆ ಮಾಡಿದ್ದೇ ಎಂದು ಹೇಳಿದ್ಧಾರೆ.

ಈ ಕುರಿತು ಮಾತನಾಡಿರುವ ರಚಿತಾ ರಾಮ್ ''ಲ್ಯಾಂಡ್ ಲಾರ್ಡ್'' ಚಿತ್ರ ಮತ್ತು ಈ ಪಾತ್ರ ನನ್ನನ್ನು ಹುಡುಕಿಕೊಂಡು ಬಂದಾಗ ನನಗೆ ಖುಷಿಯಾಗಿತ್ತು ಎಂದು ಹೇಳಿದ್ದಾರೆ. 18 ವರ್ಷದ ಹುಡುಗಿಯ ತಾಯಿಯ ಪಾತ್ರ ನಿಮ್ಮದು ಎಂದಾಗ ನನಗೆ ಅಚ್ಚರಿ ಆಯ್ತು ಜೊತೆಯಲ್ಲಿ ಕಥೆ ಕೇಳುವಾಗ ಮೈ ಜುಮ್ಮೆಂದಿತು ಎಂದು ಹೇಳಿದ್ದಾರೆ.
ಮುಂದುವರೆದು ಈ ಕಥೆ ಕೇಳಿದ ನಂತರ ನಾನು ದರ್ಶನ್ ಸರ್ ಮತ್ತು ಲೊಕೇಶ್ ಕನಗರಾಜ್ ಅವರ ಜೊತೆ ಈ ಕುರಿತು ಚರ್ಚೆ ಮಾಡಿದ್ದೇ, ತುಂಬಾ ಕುತೂಹಲಕಾರಿ, ಆಕರ್ಷಕ ಪಾತ್ರ ಬಂದಿದೆ ಎಂದು ಹೇಳಿದ್ದೇ, ಆಗ ಅವರು ದಯವಿಟ್ಟು ಮಾಡಿ ಎಂದು ಹೇಳಿದರು ಎಂದು ಹೇಳಿರುವ ರಚಿತಾ ರಾಮ್ ಹೀಗಾಗಿ ಈ ಪಾತ್ರ ನನಗೆ ತುಂಬಾ ಸವಾಲಿನದ್ದಾಗಿತ್ತು. ಜವಾಬ್ಧಾರಿಯನ್ನು ಹೆಚ್ಚಿಸಿತ್ತು ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಯಾವತ್ತು ಹೊರ ಬರುತ್ತಾರೆ ಎನ್ನುವುದು ಆ ಕೃಷ್ಣ ಪರಮಾತ್ಮನೆ ಬಲ್ಲ. ಆದರೇನಂತೆ.. ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ರಚಿತಾ ರಾಮ್ ಅವರು ದರ್ಶನ್ ಹೆಸರು ಹೇಳಿದ ತಕ್ಷಣ ಟೀಸರ್ ಬಿಡುಗಡೆ ಸಮಾರಂಭ ನಡೆಯುವ ಸ್ಥಳದಲ್ಲಿ ದರ್ಶನ್ ಘೋಷಣೆ ಮೊಳಗಿತು. ರಚಿತಾ ರಾಮ್ ಅವರ ತಾಳ್ಮೆಯ ಪರೀಕ್ಷೆ ಕೂಡ ಇದೇ ಸಮಯದಲ್ಲಿ ನಡೆಯಿತು. ಕೆಲ ಹೊತ್ತು ತಮ್ಮ ಭಾಷಣಕ್ಕೆ ರಚಿತಾ ರಾಮ್ ಅರ್ಧ ವಿರಾಮ ಕೂಡ ಹಾಕಬೇಕಾಗಿ ಬಂತು. ಆ ನಂತರ ತಮಗೆ ತಾವೇ ಸಮಾಧಾನ ಮಾಡಿಕೊಂಡು ಮಾತನಾಡಬೇಕಾಯ್ತು. ''ಲ್ಯಾಂಡ್‌ಲಾರ್ಡ್'' ಸಮಾರಂಭದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ರಚಿತಾ ರಾಮ್ ಮಾತನಾಡಿದ ವಿಡಿಯೋ ಇಲ್ಲಿ ಕೆಳಗಿದೆ. ಆಸಕ್ತರು ಗಮನಿಸಬಹುದು.


Click it and Unblock the Notifications











