ಬೇರೆ ಭಾಷೆಗಳು ಮತ್ತು ವಿದೇಶದಲ್ಲಿ ಭಾರೀ ಸದ್ದು ಮಾಡಲು ಸಿದ್ಧವಾಗಿದೆ ದರ್ಶನ್ ನಟನೆಯ 'ಕಾಟೇರ'
ಕಳೆದ ವರ್ಷದ ಕೊನೆಯಲ್ಲಿ ಡಿಸೆಂಬರ್ 29 ರಂದು ಬಿಡುಗಡೆಯಾದ ದರ್ಶನ್ ನಟನೆಯ 'ಕಾಟೇರ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಗೋವಾ, ತಮಿಳುನಾಡು, ತೆಲುಗು ರಾಜ್ಯಗಳಲ್ಲಿಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. 'ಕಾಟೇರ' 2023 ರಲ್ಲಿ ಕನ್ನಡದಲ್ಲಿ ಅತಿದೊಡ್ಡ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ.
ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿರುವ 'ಕಾಟೇರ' ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಒಟ್ಟು ಕಲೆಕ್ಷನ್ ಮತ್ತು ಬೇಡಿಕೆಯಲ್ಲಿ ಮೇಲೇರುತ್ತಲೇ ಇದೆ. ರಾಜ್ಯದ ಹಲವು ಭಾಗಗಳಲ್ಲಿ ಕಾಟೇರ ತನ್ನ ಶೋಗಳನ್ನು ಹೆಚ್ಚು ಮಾಡಿಕೊಳ್ಳುತ್ತಲೆ ಇದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಇನ್ನು ತುಂಬಾ ದಿನ ಉಳಿಯುವ ಲಕ್ಷಣಗಳು ಕಾಣಿಸುತ್ತಿವೆ.

ವಿದೇಶದಲ್ಲಿ ಶುರುವಾಗಲಿದೆ 'ಕಾಟೇರ' ಅಬ್ಬರ
ಇನ್ನು, ಪ್ರೊಡಕ್ಷನ್ ಹೌಸ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ 'ಕಾಟೇರ'ವನ್ನು ವಿದೇಶಗಳಲ್ಲಿಯೂ ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದೆ. ದುಬೈನಿಂದ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. "ಕಾಟೇರಾ ಜನವರಿ 6 ರಂದು ದುಬೈನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಅದ್ಧೂರಿ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದೊಂದಿಗೆ ದೊಡ್ಡ 'ಕಾಟೆರಾ ಉತ್ಸವ' ನಡೆಯಲಿದೆ" ಎಂದು ಮಾಹಿತಿ ನೀಡಿದ್ದಾರೆ.
"ಇದರ ಜೊತೆಗೆ ಹೆಚ್ಚುವರಿಯಾಗಿ, ಜರ್ಮನಿ, ಯುಕೆ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಸೇರಿದಂತೆ ಸುಮಾರು 9 ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಸಿನಿಮಾವನ್ನು ಪ್ರಪಂಚದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಓಡಲು ಸಿದ್ಧವಾಗಿದೆ. ಈ ಬಗ್ಗೆ ಅಧಿಕೃತ ಬಿಡುಗಡೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದಿದ್ದಾರೆ.
ಕಾಂತಾರದಂತೆ ಕಾಟೇರವೂ ಭಾಷೆಯ ಅಡೆತಡೆ ಮೀಡಿದೆ!
ಕಾಟೇರ ಸಿನಿಮಾದ ಆರಂಭಿಕ ಬಿಡುಗಡೆಯು ಉತ್ತರ ಭಾರತದಲ್ಲಿ ಸೀಮಿತವಾಗಿದ್ದರೂ, ರಾಕ್‌ಲೈನ್ ವೆಂಕಟೇಶ್ ಕಾಟೇರಾವನ್ನು ಡಬ್ ಮಾಡಿ ಶೀಘ್ರದಲ್ಲೇ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

"ಕಾಂತಾರ ಇತ್ತೀಚಿನ ಉದಾಹರಣೆ. ಕಾಂತಾರ ಕನ್ನಡ ಚಲನಚಿತ್ರವು ನಂತರ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಹಾಗೆಯೇ ಬೃಹತ್ ಯಶಸ್ಸನ್ನು ಸಾಧಿಸಿತು. ಅದರಂತೇಯೇ ಕಾಟೇರ ಕೂಡ ತನ್ನ ಕಂಟೆಂಟ್ ಕಾರಣದಿಂದ ವಿವಿಧ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿದ್ದು, ಭಾಷೆಯ ಅಡೆತಡೆಗಳನ್ನು ಮೀರಿದೆ. ರೈತ ಕೇಂದ್ರಿತ ನೈಜ ಘಟನೆಗಳನ್ನು ಹೈಲೈಟ್ ಮಾಡಿರುವುದರಿಂದ, ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ" ಎಂದಿದ್ದಾರೆ ರಾಕ್‌ಲೈನ್ ವೆಂಕಟೇಶ್.
ಮೂರೇ ದಿನದಲ್ಲಿ 58.8 ಕೋಟಿ ಕಲೆಕ್ಷನ್
ಕಾಟೇರ ಸಿನಿಮಾ ಬಿಡುಗಡೆಯಾದ ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ, ಎರಡನೇ ದಿನ 17.35 ಕೋಟಿ ಗಳಿಸಿತ್ತು. ಡಿಸೆಂಬರ್ 31 ಭಾನುವಾರ ಮೂರನೇ ದಿನ ಕಾಟೇರ 20.94 ಕೋಟಿ ಗಳಿಸಿದೆ. ಎಲ್ಲವೂ ಸೇರಿ ಮೂರೇ ದಿನದಲ್ಲಿ 58.8 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸಿನಿಮಾ ಸಕ್ಸಸ್‌ಗೆ ನಟ ದರ್ಶನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
"ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. Speechless" ಎಂದು ದರ್ಶನ್ ತೂಗುದೀಪ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಈ ಚಿತ್ರದಲ್ಲಿ ಜಡೇಶಾ ಕೆ ಹಂಪಿ ಕತೆ, ಮಾಸ್ತಿ ಅವರ ಸಂಭಾಷಣೆ, ಆರಾಧನಾ, ಶೃತಿ, ವಿನೋದ್ ಆಳ್ವ, ಕುಮಾರ್ ಗೋವಿಂದ್, ಜಗಪತಿ ಬಾಬು, ಬಾಲ ಕಲಾವಿದ ರೋಹಿತ್ ಪಿವಿ, ವೈಜನಾಥ್ ಬಿರಾದಾರ್ ಅಂತಹ ಕಲಾವಿದರು ಸಿನಿಮಾವನ್ನು ಮತ್ತಷ್ಟು ಮೇಲಕ್ಕೆ ಎತ್ತಿದ್ದಾರೆ. ಇದಕ್ಕೆ ವಿ ಹರಿಕೃಷ್ಣ ಸಂಗೀತ ಸಾಥ್ ನೀಡಿದೆ.


Click it and Unblock the Notifications










