24 ಗಂಟೆಗಳಲ್ಲಿ 'ಕಾಟೇರ' ಟ್ರೈಲರ್ ದಾಖಲೆ: ವೀವ್ಸ್, ಲೈಕ್ಸ್ ವಿಚಾರದಲ್ಲಿ ಯಾವ ಸ್ಥಾನ ಸಿಕ್ತು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಸದ್ದು ಕನ್ನಡ ಚಿತ್ರರಂಗದಲ್ಲಿ ಜೋರಾಗಿದೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಬಿಡುಗಡೆಯಾದ ಟ್ರೈಲರ್ ಧೂಳೆಬ್ಬಿಸಿದೆ. ದರ್ಶನ್ ಆರ್ಭಟ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹವಾ ಮುಂದುವರೆದಿದೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ದರ್ಶನ್ ಬಹಳ ದಿನಗಳ ನಂತರ ಒಂದು ವಿಭಿನ್ನ ಕಥೆಯ ಚಿತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಟ್ಟಿರುವುದಾಗಿ ಚಿತ್ರತಂಡ ಹೇಳುತ್ತಾ ಬರ್ತಿದೆ. 70ರ ದಶಕದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ದರ್ಶನ್ ಅಬ್ಬರ, ಪಂಚ್ ಡೈಲಾಗ್ಸ್, ಜಬರ್ದಸ್ತ್ ಬಿಜಿಎಂ, ಅದ್ಧೂರಿ ವಿಷ್ಯುವಲ್ಸ್ ಇರುವ ಟ್ರೈಲರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಪದೇ ಪದೆ ಮುಗಿಬಿದ್ದು ಅಭಿಮಾನಿಗಳು ಟ್ರೈಲರ್ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಡಿಸೆಂಬರ್ 29ಕ್ಕೆ 'ಕಾಟೇರ' ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ 2 ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಚಿತ್ರತಂಡ ಪ್ರಮೋಷನ್ ಶುರು ಮಾಡಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಯಾವುದೇ ಬ್ಲಾಕ್‌ಬಸ್ಟರ್ ಸಿನಿಮಾ ಇಲ್ಲ. ಆ ಕೊರಗನ್ನು 'ಕಾಟೇರ' ತೀರಿಸುತ್ತಾನೆ ಎನ್ನುವ ನಿರೀಕ್ಷೆ ಚಿತ್ರರಂಗದಲ್ಲಿದೆ. ಧನಂಜಯ್, ನೀನಾಸಂ ಸತೀಶ್, ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಜನ 'ಕಾಟೇರ' ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡೊಕೆ ಕಾಯುತ್ತಿದ್ದಾರೆ.
24 ಗಂಟೆಗಳಲ್ಲಿ 'ಕಾಟೇರ' ಟ್ರೈಲರ್ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ಬರೋಬ್ಬರಿ 1 ಕೋಟಿ 20 ಲಕ್ಷಕ್ಕೂ ಹೆಚ್ಚು ವೀವ್ಸ್ ಸಾಧಿಸಿದೆ. ಈ ಮೂಲಕ 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಸಾಧಿಸಿದ ಕನ್ನಡ ಸಿನಿಮಾ ಟ್ರೈಲರ್‌ಗಳಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. 1 ಕೋಟಿ 80 ಲಕ್ಷ ವೀವ್ಸ್ ಸಾಧಿಸಿದ್ದ 'KGF-2' ಚಿತ್ರದ ಟ್ರೈಲರ್ ಮೊದಲ ಸ್ಥಾನದಲ್ಲಿದೆ. ಇನ್ನು 1 ಕೋಟಿ ವೀವ್ಸ್ ಸಾಧಿಸಿದ್ದ ದರ್ಶನ್ ನಟನೆಯ 'ಯಜಮಾನ' ಟ್ರೈಲರ್ 3ನೇ ಸ್ಥಾನದಲ್ಲಿದೆ.
ಇನ್ನು ಕಳೆದೆರಡು ದಿನಗಳಿಂದ ಯೂಟ್ಯೂಬ್ ಟ್ರೆಂಡಿಂಗ್‌ನ ಮೊದಲ ಸ್ಥಾನದಲ್ಲಿ 'ಕಾಟೇರ' ಟ್ರೈಲರ್ ಸದ್ದು ಮಾಡುತ್ತಲೇ ಇದೆ. ಪವರ್ ಪ್ಯಾಕ್ಡ್ ಟ್ರೈಲರ್‌ಗೆ ಪರಭಾಷಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾಗಳ ಟ್ರೈಲರ್‌ಗಳ ಪಟ್ಟಿಯಲ್ಲಿ 'ಕಾಟೇರ'ಗೆ 5ನೇ ಸ್ಥಾನ ಸಿಕ್ಕಿದೆ.

24 ಗಂಟೆಗಳಲ್ಲಿ 'KGF-2' ಚಿತ್ರದ ಟ್ರೈಲರ್ 7 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿತ್ತು. 'ಕ್ರಾಂತಿ' 3 ಲಕ್ಷದ 95 ಸಾವಿರ, (ಪುನೀತ್ ರಾಜ್‌ಕುಮಾರ್) 'ಗಂಧದಗುಡಿ' ಚಿತ್ರದ ಟ್ರೈಲರ್ 3 ಲಕ್ಷದ 94 ಸಾವಿರ, 'ವಿಕ್ರಾಂತ್ ರೋಣ' ಚಿತ್ರದ ಟ್ರೈಲರ್ 3 ಲಕ್ಷದ 83 ಸಾವಿರ ಲೈಕ್ಸ್ ಪಡೆದರೆ 'ಕಾಟೇರ' ಟ್ರೈಲರ್ 3 ಲಕ್ಷದ 77 ಸಾವಿರ ಲೈಕ್ಸ್ ಸಾಧಿಸಿದೆ.
ಶನಿವಾರ ರಾತ್ರಿ ತಡವಾಗಿ 'ಕಾಟೇರ' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಟ್ರೈಲರ್ ರಿಲೀಸ್ ಟೈಮ್ ಅನೌನ್ಸ್ ಮಾಡದೇ ಸಿಎಂ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡುತ್ತಿದ್ದಂತೆ ಯೂಟ್ಯೂಬ್‌ಗೂ ಅಪ್‌ಲೋಡ್ ಆಗಿತ್ತು. ಒಟ್ನಲ್ಲಿ 'ಕಾಟೇರ' ಟ್ರೈಲರ್ ಸಿನಿರಸಿಕರ ಗಮನ ಸೆಳೆದಿದೆ. ಸಿನಿಮಾ ನೋಡಬೇಕು ಎನ್ನುವ ಕಾತರತೆ ಹೆಚ್ಚಿಸಿದೆ.
ಚಿತ್ರದಲ್ಲಿ ದರ್ಶನ್ ಹಳ್ಳಿ ಹೈದನಾಗಿ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಪಾತ್ರದಲ್ಲಿ ನಟಿಸಿದ್ದಾರೆ. ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ಅಚ್ಯುತ್ ಕುಮಾರ್, ವಿನೋದ್ ಆಳ್ವ, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











