ದರ್ಶನ್ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದ ಸಿನಿಮಾ ಈ ವಾರ ರೀ-ರಿಲೀಸ್; ಟಿಕೆಟ್ಸ್ ಸೋಲ್ಡ್‌ಔಟ್
ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರಮಂದಿರಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇಂತಹ ಸಮಯದಲ್ಲಿ ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇದು ಹೊಸದೇನು ಅಲ್ಲ. ಈ ಹಿಂದೆ ಕೂಡ ಸಾಕಷ್ಟು ಕನ್ನಡ ಸಿನಿಮಾಗಳು ಮತ್ತೆ ಮತ್ತೆ ತೆರೆಗೆ ಬಂದಿವೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ 'ಶಾಸ್ತ್ರಿ', 'ನಮ್ಮ ಪ್ರೀತಿಯ ರಾಮು' ಹಾಗೂ 'ನವಗ್ರಹ' ರೀತಿಯ ಸಿನಿಮಾಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದವು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು. ದೊಡ್ಡದಾಗಿ ಸಂಭ್ರಮಾಚರಣೆ ಮಾಡಿದ್ದರು. ಈಗ ಮತ್ತೊಂದು ಹಿಟ್ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಇದು ದರ್ಶನ್ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟಿದ್ದ ಸಿನಿಮಾ.

ಬೇರೆ ಭಾಷೆಯ 7 ಸಿನಿಮಾಗಳ ದೃಶ್ಯಗಳನ್ನು ಕಾಪಿ ಪೇಸ್ಟ್ ಮಾಡಿ ಓಂ ಪ್ರಕಾಶ್ ರಾವ್ ಕಟ್ಟಿಕೊಟ್ಟಿದ್ದ ಸಿನಿಮಾ ಇದು. ಸ್ವತಃ ನಿರ್ದೇಶಕರು ಹೇಳುವಂತೆ ಇದು ರೀ-ಮಿಕ್ಸ್ ಸಿನಿಮಾ. ನಾಯಕಿಯಾಗಿ ರಕ್ಷಿತಾ ಸಾಥ್ ಕೊಟ್ಟಿದ್ದರು. ನಿರ್ಮಾಪಕ ರಾಮು ಹಣ ಹೂಡಿದ್ದರು. ಇಷ್ಟು ಹೇಳಿದ ಮೇಲೆ ಬಿಡಿಸಿ ಹೇಳುವುದು ಬೇಕಿಲ್ಲ. ಹೌದು, ಸೂಪರ್ ಹಿಟ್ 'ಕಲಾಸಿಪಾಳ್ಯ' ಸಿನಿಮಾ ಈ ವಾರ ರಾಜ್ಯದ ಆಯ್ದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಈಗಾಗಲೇ ಬುಕ್‌ಮೈಶೋನದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
ಹೊಸದಾಗಿ ಬಿಡುಗಡೆ ಆಗುವ ಸ್ಟಾರ್‌ಗಳ ಚಿತ್ರಕ್ಕೆ ಬೆಳ್ಳಂಬೆಳಗ್ಗೆ ಫ್ಯಾನ್ಸ್ ಶೋ ಹಾಕುವುದು ನೋಡಿದ್ದೇವೆ. ಆದರೆ ರೀ-ರಿಲೀಸ್ ಆಗುತ್ತಿರುವ 'ಕಲಾಸಿಪಾಳ್ಯ' ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಶುರುವಾಗುತ್ತಿದೆ. ಮಾಗಡಿ ರಸ್ತೆಯ ಪ್ರಸನ್ನ, ಜೆಪಿ ನಗರದ ಸಿದ್ದೇಶ್ವರ ಹಾಗೂ ಕೆಜಿ ರಸ್ತೆಯ ದರ್ಶನ್ ಫೇವರಿಟ್ ಥಿಯೇಟರ್ ನರ್ತಕಿಯಲ್ಲಿ ಸಿನಿಮಾ ಪ್ರದರ್ಶನವಾಗುವುದು ಖಚಿತವಾಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆ ಶೋ ಟಿಕೆಟ್ಸ್ 4 ದಿನ ಮುನ್ನ ಸೋಲ್ಡ್‌ಔಟ್ ಆಗೋಗಿದೆ.

ಜೂನ್ 19ರ ಶುಕ್ರವಾರ ಪ್ರಸನ್ನ ಚಿತ್ರಮಂದಿರದಲ್ಲಿ 'ಕಲಾಸಿಪಾಳ್ಯ' ಚಿತ್ರದ 6 ಶೋಗಳನ್ನು ಏರ್ಪಡಿಸಲಾಗಿದೆ. ಈ ಹಿಂದೆ 'ಮೆಜೆಸ್ಟಿಕ್', 'ಶಾಸ್ತ್ರಿ' ಹಾಗೂ 'ನವಗ್ರಹ' ಸಿನಿಮಾಗಳು ಮರು-ಬಿಡುಗಡೆ ಆಗಿದ್ದಾಗಲೂ ಪ್ರಸನ್ನ ಚಿತ್ರಮಂದಿರದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 22 ವರ್ಷಗಳ ಹಿಂದೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದು ಸಖತ್ ಸದ್ದು ಮಾಡಿತ್ತು. 'ಕಲಾಸಿಪಾಳ್ಯ' ಲೋಕಲ್ ಹೈದ ಕೆಂಚನಾಗಿ ದರ್ಶನ್ ನಟಿಸಿ ಗೆದ್ದಿದ್ದರು.
ಆಕ್ಷನ್ ಜೊತೆಗೆ ಫ್ಯಾಮಿಲಿ ಎಮೋಷನ್ಸ್, ಕಾಮಿಡಿ ಮಿಕ್ಸ್ ಮಾಡಿ ಓಂ ಪ್ರಕಾಶ್ ರಾವ್ ಸಿನಿಮಾ ನಿರ್ದೇಶಿಸಿದ್ದರು. ಅಲ್ಲಿಯವರೆಗೂ ದರ್ಶನ್ ವೃತ್ತಿ ಜೀವನ ಸೋಲು ಗೆಲುವಿನ ನಡುವೆ ಡೋಲಾಯಮಾನವಾಗಿಯೇ ಇತ್ತು. ಆದರೆ 'ಕಲಾಸಿಪಾಳ್ಯ' ಚಿತ್ರದಿಂದ ದೊಡ್ಡ ತಿರುವು ಸಿಕ್ಕಿತ್ತು. ಮತ್ತೆ ಅವರು ಹಿಂತಿರುಗಿ ನೋಡಲೇ ಇಲ್ಲ. ಚಿತ್ರದಿಂದ ಚಿತ್ರಕ್ಕೆ ತಮ್ಮ ಕ್ರೇಜ್, ಸಂಭಾವನೆ ಎಲ್ಲವನ್ನು ಹೆಚ್ಚಿಸಿಕೊಳ್ಳುತ್ತಾ ಬಂದರು. ಇದೇ ಚಿತ್ರದಿಂದ ದರ್ಶನ್ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹಿಗ್ಗಿಸಿಕೊಂಡಿದ್ದರು.
'ಕಲಾಸಿಪಾಳ್ಯ' ಸಿನಿಮಾ 35 ವಾರ ಯಶಸ್ವಿ ಪ್ರದರ್ಶನ ಕಂಡು ಹಿಟ್ ಆಗಿತ್ತು. ಅವತ್ತಿನ ಕಾಲಕ್ಕೆ ಸಿನಿಮಾ 18ರಿಂದ 22 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಸಂದರ್ಶನವೊಂದರಲ್ಲಿ ನಿರ್ದೇಶಕ ಓಂಪ್ರಕಾಶ್ ರಾವ್ ಮಾಹಿತಿ ನೀಡಿದ್ದರು. ರಾಮ್‌ನಾರಾಯಣ್ ಹಾಗೂ ಸಾಧುಕೋಕಿಲ ಸಂಗೀತ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು. ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಒಟ್ಟಾರೆ ಇಂತಹ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಮತ್ತೆ ತೆರೆಗೆ ಬರುತ್ತಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.


Click it and Unblock the Notifications