'ನವಗ್ರಹ' ಚಿತ್ರಕ್ಕಾಗಿ ಮತ್ತೆ ಒಂದಾಗ್ತಿದ್ದಾರೆ ಟೋನಿ, ಕುಂಬಿ, ಗೆಂಡೆ, ನಾಗಿ, ಶೆಟ್ಟಿ
ದಿನಕರ್ ತೂಗುದೀಪ್ ನಿರ್ದೇಶನದ 'ನವಗ್ರಹ' ಸಿನಿಮಾ 16 ವರ್ಷಗಳ ಹಿಂದೆ ಯಶಸ್ಸು ಕಂಡಿತ್ತು. ಇದೀಗ ಚಿತ್ರವನ್ನು ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಆದರೆ ಈಗ ನಟ ದರ್ಶನ್ ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲೇ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ.
ಸ್ವತಃ ದರ್ಶನ್ 'ನವಗ್ರಹ' ಚಿತ್ರ ನಿರ್ಮಿಸಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳನ್ನು ಒಟ್ಟಿಗೆ ಸೇರಿಸಿ ವಿಭಿನ್ನ ಪ್ರಯತ್ನ ಮಾಡಿದ್ದರು. ಇದರಲ್ಲಿ ಗೆದ್ದಿದ್ದರು. ಆದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಲಿಲ್ಲ. ಅಭಿಮಾನಿಗಳು ಬಹಳ ದಿನದಿಂದ ಈ ಚಿತ್ರವನ್ನು ರೀ- ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಇದೀಗ ಆ ಸಮಯ ಹತ್ತಿರ ಬರ್ತಿದೆ.

ನವೆಂಬರ್ 8ಕ್ಕೆ 'ನವಗ್ರಹ' ಚಿತ್ರ ಮರು ಬಿಡುಗಡೆ ಆಗುತ್ತಿದೆ. ಅಂದಹಾಗೆ ಸರಿಯಾಗಿ 16 ವರ್ಷಗಳ ಹಿಂದೆ ನವೆಂಬರ್ 7ಕ್ಕೆ ಸಿನಿಮಾ ತೆರೆಗೆ ಬಂದಿತ್ತು ಎನ್ನುವುದು ವಿಶೇಷ. ಚಿತ್ರದಲ್ಲಿ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಜೊತೆಗೆ ಟೈಗರ್ ಪ್ರಭಾಕರ್ ಪುತ್ರ ವಿನೋದ್, ಲೋಕೇಶ್ ಪುತ್ರ ಸೃಜನ್, ಸುಧೀರ್ ಪುತ್ರ ತರುಣ್, ದಿನೇಶ್ ಪುತ್ರ ಗಿರಿ, ಸುಂದರ್ ಕೃಷ್ಣ ಅರಸ್ ಪುತ್ರ ನಾಗೇಂದ್ರ ಹಾಗೂ ಕೀರ್ತಿರಾಜ್ ಪುತ್ರ ಧರ್ಮ ಬಣ್ಣ ಹಚ್ಚಿದ್ದರು.
ಶರ್ಮಿಳಾ ಮಾಂಡ್ರೆ ಹಾಗೂ ವರ್ಷಾ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಪೊಲೀಸ್ ಆಫೀಸರ್ ಪಾತ್ರದಲ್ಲಿ ಸೌರವ್ ಮಿಂಚಿದ್ದರು. ಈ ಒಂಭತ್ತು ಜನರ ತಂಡ ಮೈಸೂರು ದಸರಾ ಅಂಬಾರಿ ಕದ್ದು ಶ್ರೀಮಂತರಾಗುವ ಕನಸು ಕಾಣುವ ಕಥೆಯೇ 'ನವಗ್ರಹ'. ಕೃಷ್ಣ ಕುಮಾರ್ ಛಾಯಾಗ್ರಹಣ ಹಾಗೂ ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಇವತ್ತಿಗೂ ಅಭಿಮಾನಿಗಳ ಫೇವರಿಟ್ ಆಲ್ಬಮ್ ಎನಿಸಿಕೊಂಡಿದೆ.
'ನವಗ್ರಹ' ಚಿತ್ರವನ್ನು ದೊಡ್ಡಮಟ್ಟದಲ್ಲೇ ರೀ-ರಿಲೀಸ್ ಮಾಡುವ ತಯಾರಿ ನಡೀತಿದೆ. ಅದೇ ಕಾರಣಕ್ಕೆ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಕಲಾವಿದರೆಲ್ಲಾ ಕೈ ಜೋಡಿಸುತ್ತಿದ್ದಾರೆ. ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಅಭಿಮಾನಿಗಳು, ಆಪ್ತರು ಪ್ರಾರ್ಥಿಸುತ್ತಿದ್ದಾರೆ. ವಕೀಲರು ಆದಷ್ಟು ಬೇಗ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅಕ್ಟೋಬರ್ 28ಕ್ಕೆ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. 'ನವಗ್ರಹ' ಸಿನಿಮಾ ರೀ-ರಿಲೀಸ್ ವೇಳೆಗೆ ದರ್ಶನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ. ಮತ್ತೊಂದು ಕಡೆ ಚಿತ್ರದ ಪ್ರಚಾರಕ್ಕೆ ವಿನೋದ್, ಸೃಜನ್, ತರುಣ್ ಹೀಗೆ ಎಲ್ಲರೂ ಜೊತೆಯಾಗುತ್ತಿದ್ದಾರೆ. ಈಗಾಗಲೇ ಸೃಜನ್ ಲೋಕೇಶ್ ಸ್ಪೆಷಲ್ ವೀಡಿಯೋ ಮಾಡಿ ಸಿನಿಮಾ ರೀ-ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೃಜನ್ ರೀತಿಯಲ್ಲೇ ಮುಂದೆ ಗಿರಿ, ನಾಗೇಂದ್ರ, ತರುಣ್, ವಿನೋದ್ ಸಿನಿಮಾ ರೀ-ರಿಲೀಸ್ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇರುವ ಧರ್ಮ ಕೀರ್ತಿರಾಜ್‌ಗೆ 'ನವಗ್ರಹ' ಸಿನಿಮಾ ರೀ-ರಿಲೀಸ್ ಬಗ್ಗೆ ಮಾಹಿತಿ ಇಲ್ಲ. ಸಣ್ಣ ಮಟ್ಟದಲ್ಲಿ ಅಲ್ಲ, ದೊಡ್ಡದಾಗಿಯೇ ಸಿನಿಮಾ ಮತ್ತೆ ತೆರೆಗೆ ಬರಲಿದೆ. ಮೊದಲ ದಿನ ಅಂದಾಜು 60 ಶೋಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಇನ್ನು ಅಭಿಮಾನಿಗಳು ಕೇಳುತ್ತಿದ್ದ 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗ್ತಿದೆ. ಅಂದಮೇಲೆ ಸೆಲಬ್ರೇಷನ್ ಜೋರಾಗಿಯೇ ಇರುತ್ತದೆ. ಇನ್ನು ನವೆಂಬರ್ 8ಕ್ಕೆ ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಕೂಡ ತೆರೆಗೆ ಬರ್ತಿದೆ. ಇದು ಕೊಂಚ ಗೊಂದಲಕ್ಕೆ ಕಾರಣವಾಗಿದೆ. ಒಮ್ಮೆಲೆ ಎರಡು ಸಿನಿಮಾ ಬಂದ್ರೆ ಹೇಗೆ? ಎನ್ನುವುದು ಕೆಲವರ ಪ್ರಶ್ನೆ.


Click it and Unblock the Notifications











