»   » ವಿಜಯದಶಮಿಯಂದು ಮುಹೂರ್ತಗಳ ಸುಗ್ಗಿ

ವಿಜಯದಶಮಿಯಂದು ಮುಹೂರ್ತಗಳ ಸುಗ್ಗಿ

Posted By: Super
Subscribe to Filmibeat Kannada

ವಿಜಯದಶಮಿ, ಅಕ್ಷಯ ತದಿಗೆ ಹಾಗೂ ಅನಂತ ಚತುರ್ದಶಿಯಂದು ಪಂಚಾಂಗ ನೋಡದೆ, ಪುರೋಹಿತರ ಕೇಳದೆ, ಯಾವುದೇ ಶುಭಕಾರ್ಯವನ್ನಾದರೂ ಮಾಡಬಹುದು ಎಂಬ ನಂಬಿಕೆ ನಮ್ಮಲ್ಲಿದೆ. ಇದನ್ನು ಹಲವರು ಹತ್ತಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

ಇದಕ್ಕೆ ಕನ್ನಡ ಚಿತ್ರೋದ್ಯಮವೂ ಹೊರತಾಗಿಲ್ಲ. ಪ್ರತಿವರ್ಷ ವಿಜಯದಶಮಿಯಂದು ಹತ್ತಾರು ಚಿತ್ರಗಳು ಸೆಟ್ಟೇರುತ್ತವೆ. ಈ ವರ್ಷವೂ ಹೆಚ್ಚೂ ಕಡಿಮೆ ಹತ್ತು ಹನ್ನೆರಡು ಚಿತ್ರಗಳ ಮುಹೂರ್ತ ವಿಜಯದಶಮಿಯಂದೇ ನಡೆಯುತ್ತಿದೆ.

ಶುಕ್ರವಾರದ ದಿನ ವಿಜಯದಶಮಿ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ನಾಡಹಬ್ಬ ದಸರೆಯ ಕೊಡುಗೆಯಾಗಿ ಶಿವರಾಜ್‌ಕುಮಾರ್‌ ಅಭಿನಯದ 'ಯುವರಾಜ" ಹಾಗೂ ಉಪೇಂದ್ರಾಭಿನಯದ 'ಎಚ್‌2ಓ" ಬಿಡುಗಡೆಯಾಗುತ್ತಿದೆ. ಇದರೊಂದಿಗೆ ಹಲವು ಚಿತ್ರಗಳ ಹಾಡುಗಳ ರಿಕಾರ್ಡಿಂಗ್‌ಗೂ ಮುಹೂರ್ತ ಫಿಕ್ಸ್‌ ಆಗಿದೆ.

ಯುವನಟರ ಆಗಮನದ ನಡುವೆಯೂ ನಂ.1 ಸ್ಥಾನ ಉಳಿಸಿಕೊಂಡಿರುವ ಕನ್ನಡ ಚಿತ್ರರಂಗದ 'ಯಜಮಾನ" ವಿಷ್ಣುವರ್ಧನ್‌ ಅಭಿನಯದ ಎರಡು ಚಿತ್ರಗಳೂ ವಿಜಯದಶಮಿಯಂದೇ ಸೆಟ್ಟೇರುತ್ತಿವೆ. ಅಂದು ಸಾಹಸಸಿಂಹ ವಿಷ್ಣು 'ಸಿಂಹಾದ್ರಿಯ ಸಿಂಹ" ಹಾಗೂ 'ಜಮೀನ್ದಾರ್ರು" ಆಗುತ್ತಿದ್ದಾರೆ.

ಸಿಂಹಾದ್ರಿಯ ಸಿಂಹವನ್ನು ಎಸ್‌. ನಾರಾಯಣ್‌ ನಿರ್ದೇಶಿಸುತ್ತಿದ್ದರೆ, ಜಮೀನ್ದಾರ್ರು ಚಿತ್ರವನ್ನು ಕೆ. ಮಂಜು ನಿರ್ಮಿಸುತ್ತಿದ್ದಾರೆ. ಈ ಮಧ್ಯೆ ವಿಷ್ಣುವರ್ಧನ್‌ ಅಭಿನಯದ ಹಾಗೂ ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶನದ 'ಪರ್ವ" ಮತ್ತು 'ಕೋಟಿಗೊಬ್ಬ" ಬಿಡುಗಡೆಗೆ ಸಿದ್ಧವಾಗುತ್ತಿವೆ.

ತೆಲುಗಿನಲ್ಲಿ ಭಾರಿ ಯಶಸ್ಸು ಕಂಡ ನುವ್ವೇ ಕಾವಾಲಿ ಚಿತ್ರದ ಕನ್ನಡ ರಿಮೇಕ್‌ ಚಿತ್ರ, ಮುನಿರತ್ನ ಅವರ 'ಕೊತ್ವಾಲ", ಕೇಸರಿ ಹರವೂ ಅವರ ನಿರ್ದೇಶನದ 'ಗಾಳಿಪಟ" ವಾಲಿ ಚಿತ್ರದ ಚಿತ್ರದ ನಂತರ ಬಿಡುವಾಗಿರುವ ಸುದೀಪ್‌ ಅಭಿನಯದ ಎರಡು ಚಿತ್ರಗಳು, ಶಿವರಾಜ್‌ಕುಮಾರ್‌ ಅಭಿನಯದ ಎರಡು ಚಿತ್ರಗಳು, ಸಂಕಲನಕಾರ ಪ್ರಸಾದ್‌ ತಯಾರಿಸುತ್ತಿರುವ 'ಪೊಲೀಸ್‌ ಡಾಗ್‌" ಚಿತ್ರಗಳ ಮುಹೂರ್ತವೂ ವಿಜಯದಶಮಿಯಂದೇ ನಡೆಯುತ್ತಿದೆ.

ಕೊಲ್ಲೂರು ಮೂಕಾಂಬಿಕೆ ಚಿತ್ರದಲ್ಲಿ ಬಾಲ ಶಂಕರಾಚಾರ್ಯರ ಪಾತ್ರದಲ್ಲಿ, ಚಿನ್ನಾರಿಮುತ್ತ ಚಿತ್ರದ ಪ್ರಧಾನಪಾತ್ರದಲ್ಲಿ ಮಿಂಚಿ, ಪ್ರಶಸ್ತಿಗಳನ್ನೂ ಬಾಚಿಕೊಂಡ ಚಿನ್ನೇಗೌಡರ ಪುತ್ರ ವಿಜಯರಾಘವೇಂದ್ರ ಮೊಟ್ಟ ಮೊದಲ ಬಾರಿಗೆ ನಾಯಕನಟನಾಗಿ ನಟಿಸುತ್ತಿರುವ 'ಹಾಯ್‌" ಚಿತ್ರವೂ ವಿಜಯದಶಮಿಯಂದೇ ಸೆಟ್ಟೇರುತ್ತಿದೆ. ಈ ಚಿತ್ರವನ್ನು ವಿ. ಮನೋಹರ್‌ ನಿರ್ದೇಶಿಸುತ್ತಿದ್ದಾರೆ.

ಈ ಮಧ್ಯೆ, ವಿಷ್ಣುವರ್ಧನ್‌ 'ಕೋಟಿಗೊಬ್ಬ' ಆದ ಮೇಲೆ ಜಗ್ಗೇಶ್‌ ಏನಾದರೊಂದು ಆಗಬೇಕಲ್ಲ. ವಿಜಯದಶಮಿಯಂದು ಜಗ್ಗಿ 'ವಂಶಕ್ಕೊಬ್ಬ" ಆಗುತ್ತಿದ್ದಾರೆ. ಈ ಚಿತ್ರವನ್ನು ಮಾಣಿಕ್‌ ಚಂದ್‌ ನಿರ್ಮಿಸುತ್ತಿದ್ದಾರೆ. ವಿಜಯೋತ್ಸವದ ಸಂಕೇತವಾದ ದಶಮಿಯಂದು ಸೆಟ್ಟೇರುತ್ತಿರುವ ಈ ಚಿತ್ರಗಳಲ್ಲಿ ಎಷ್ಟು ವಿಜಯೋತ್ಸವ ಆಚರಿಸುತ್ತವೆ ಎಂಬುದನ್ನು ತಿಳಿಯಲು ಚಿತ್ರ ಬಿಡುಗಡೆ ಆಗುವವರೆಗೆ ಕಾಯಬೇಕು.

English summary
All most one dozen kannada films to go on set on 26 October 2001 - vijayadashami day

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada