"ಜೋಗಿ ಬಳಿಕ ಕಾಟೇರ.. ರಜನಿ- ಧನುಷ್ ಬಿಟ್ರೆ ದರ್ಶನ್ ಇತ್ತೀಚೆಗೆ ಇಂತಹ ಪ್ರಯತ್ನ ಮಾಡಿದ್ದು": ದಯಾಳ್
ಥಿಯೇಟರ್‌ಗಳಲ್ಲಿ 'ಕಾಟೇರ' ಕಾರುಬಾರು ಮುಂದುವರೆದಿದೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 6 ದಿನಕ್ಕೆ ಸಿನಿಮಾ 95.36 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. 6ನೇ ದಿನವೂ ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಎರಡನೇ ವಾರವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸುಳಿವು ಸಿಗುತ್ತಿದೆ.
ಒರಾಯನ್ ಮಾಲ್‌ನಲ್ಲಿ ನಡೆದ 'ಕಾಟೇರ' ಚಿತ್ರದ ಸೆಲೆಬ್ರೆಟಿ ಶೋಗೆ ಹಲವರು ಹಾಜರಾಗಿದ್ದರು. ಉಪೇಂದ್ರ, ಶ್ರೀಮುರಳಿ, ಡಾಲಿ ಧನಂಜಯ್, ನೀನಾಸಂ ಸತೀಶ್, ವಸಿಷ್ಠ ಸಿಂಹ, ರಕ್ಷಿತಾ ಪ್ರೇಮ್, ಸುಮಲತಾ ಅಂಬರೀಶ್ ಸೇರಿದಂತೆ ಸಾಕಷ್ಟು ಜನ ಭಾಗಿ ಆಗಿ ಸಿನಿಮಾ ವೀಕ್ಷಿಸಿದರು. ಚಿತ್ರತಂಡದ ಶ್ರಮಕ್ಕೆ ಬಹುಪರಾಕ್ ಎಂದಿದ್ದಾರೆ. ನಿರ್ದೇಶಕ ದಯಾಳ್ ಪದ್ಮನಾಭನ್ ಇದನ್ನು ಮುನ್ನ ಸಿನಿಮಾ ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಬರೆದುಕೊಂಡಿದ್ದಾರೆ.

"ಕಾಟೇರ: ಜೋಗಿ ನಂತರ ಕನ್ನಡದ ಅತ್ಯುತ್ತಮ ಕಂಟೆಂಟ್ ಓರಿಯೆಂಟೆಡ್ ಕಮರ್ಷಿಯಲ್ ಸಿನಿಮಾಗಳಲ್ಲಿ ಒಂದು. ಕಮರ್ಷಿಯಲ್ ಸಿನಿಮಾಗಳನ್ನೂ ಸಹ ಸಂವೇದನಾಶೀಲ ಮತ್ತು ಗುಣಮಟ್ಟದ ವಿಷಯಗಳೊಂದಿಗೆ ಮಾಡಬಹುದೆಂದು ನಾನು ಪದೇ ಪದೆ ಹೇಳುತ್ತಿರುತ್ತೇನೆ. ವಾಸ್ತವವಾಗಿ, ಅಂತಹ ವಿಷಯಗಳು ಸ್ಟಾರ್‌ಗಳಿಲ್ಲದ ಕಲಾತ್ಮಕ ಸಿನಿಮಾಗಳಿಗಿಂತ ಸ್ಟಾರ್‌ಗಳಿರುವ ಕಮರ್ಷಿಯಲ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸುಲಭವಾಗಿ ತಲುಪುತ್ತವೆ"
"ಸಮಾನತೆ ಮತ್ತು ತುಳಿತಕ್ಕೊಳಗಾದ ಜಾತಿಯ ಪರವಾಗಿ ದೌರ್ಜನ್ಯದ ವಿರುದ್ಧ ಮಾತನಾಡುವಂತಹ ಸೂಕ್ಷ್ಮ ವಿಷಯವನ್ನು ಆಯ್ಕೆ ಮಾಡಿದ್ದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್‌ಗೆ ಹ್ಯಾಟ್ಸ್ ಆಫ್. ಇದು ಎಲ್ಲಾ ಸ್ಟಾರ್‌ಗಳು ತೆಗೆದುಕೊಳ್ಳುವಂತಹ ಸುಲಭ ನಿರ್ಧಾರವಲ್ಲ..! ತಾನೊಬ್ಬ ಹೀರೋ ಅಷ್ಟೇ ಅಲ್ಲ ಅದ್ಭುತ ನಟ ಕೂಡ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ"
"ನಾನು ಹೇಳುವುದೇನೆಂದರೆ, ಸೂಪರ್ ಸ್ಟಾರ್ ರಜನಿಕಾಂತ್ ಸರ್ (ಕಪಾಲಿ) ಮತ್ತು ಧನುಷ್ (ಅಸುರನ್ ಮತ್ತು ಕರ್ಣನ್) ಹೊರತುಪಡಿಸಿ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಕಮರ್ಷಿಯಲ್ ಹೀರೋ ಇತ್ತೀಚಿನ ದಿನಗಳಲ್ಲಿ ತುಳಿತಕ್ಕೊಳಗಾದ ಜಾತಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿಲ್ಲ. ಹಾಗೂ ತನ್ನ ಸಮುದಾಯದ ಪರ ನಾಯಕನಾಗಿ ಹೋರಾಡುವ ಪ್ರಯತ್ನ ಮಾಡಿಲ್ಲ. ಅದಕ್ಕೆ ದರ್ಶನ್ ಸರ್‌ಗೆ ಬಿಗ್ ಸೆಲ್ಯೂಟ್..!
ಜಡೇಶ್ ಮತ್ತು ಮಾಸ್ತಿ ಚೆನ್ನಾಗಿ ಬರೆದಿದ್ದಾರೆ..! ಭೂಸುಧಾರಣಾ ಕಾಯಿದೆಯನ್ನೇ ಕಥೆಯ ತಿರುಳಾಗಿ ಇಟ್ಟುಕೊಂಡು ಸಿನಿಮಾದುದ್ದಕ್ಕೂ ಎಲ್ಲ ಭಾವನೆಗಳೂ ಸರಿಯಾಗಿ ಬೆರೆಸಿ ಸಿನಿಮಾ ಮಾಡಲಾಗಿದೆ"
"ಕ್ಲೈಮ್ಯಾಕ್ಸ್‌ನಲ್ಲಿ ವೃತ್ತಿ ಮತ್ತು ಜಾತಿಗೆ ಸಂಬಂಧಿಸಿದ ಡೈಲಾಗ್‌ಗಳು ಅದ್ಭುತವಾಗಿವೆ. ನನ್ನ ಸಹೋದ್ಯೋಗಿ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರ ಅದ್ಭುತವಾದ ಶಾಟ್‌ಗಳು ಮತ್ತು ನಿರೂಪಣೆ ಉತ್ತಮವಾಗಿದೆ. ಎಮ್ಮೆಯ ಕಣ್ಣಲ್ಲಿ ತೋರಿಸಿದ ಪದ್ದುನ ಕೊಲ್ಲುವ ಶಾಟ್ ಇಷ್ಟವಾಯಿತು. ನನ್ನ ಗಾಡ್ ಫಾದರ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸರ್ ಮತ್ತು ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಛಾಯಾಗ್ರಾಹಕ ಸುಧಾಕರ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಚಿತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

"ಬಾಕ್ಸ್ ಆಫೀಸ್‌ನಲ್ಲಿ ಬೆಂಚ್ ಮಾರ್ಕ್ ಸ್ಥಾಪಿಸಲಿರುವ ಅದ್ಭುತ ಚಿತ್ರ ಕಾಟೇರ. ಇನ್ನುಳಿದಂತೆ ಈ ಚಿತ್ರದಲ್ಲಿ ಸಹಜವಾಗಿ, ನಾನು ಇಷ್ಟಪಡದ ಕೆಲವು ವಿಷಯಗಳಿವೆ. ಆದರೆ ಅವು ತುಂಬಾ ಸಣ್ಣವು. ಎಲ್ಲರೂ ತಪ್ಪದೇ ಸಿನಿಮಾ ನೋಡಿ" ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಪರಭಾಷೆಗಳಿಂದಲೂ 'ಕಾಟೇರ' ಡಬ್ಬಿಂಗ್‌ಗೆ ಬೇಡಿಕೆ ಶುರುವಾಗಿದೆ. ಶೀಘ್ರದಲ್ಲೇ ವಿದೇಶಗಳಲ್ಲೂ ಸಿನಿಮಾ ತೆರೆಗೆ ಬರಲಿದೆ. ಇನ್ನು ತಮಿಳು, ತೆಲುಗಿಗೆ ಡಬ್ ಮಾಡುವ ಬಗ್ಗೆಯೂ ಚಿತ್ರತಂಡ ಚಿಂತಿಸುತ್ತಿದೆ. ಶೀಘ್ರದಲ್ಲೇ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಲಿದೆ.


Click it and Unblock the Notifications











