ವಿನಯ್ 'ಗ್ರಾಮಾಯಣ'ಕ್ಕೆ ಮರುಜೀವ: ಚಿತ್ರಕ್ಕೆ ಡಿಸಿಎಂ ಡಿಕೆಶಿ ಸಾಥ್ ಕೊಡ್ತಿರೋದ್ಯಾಕೆ?
ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. 25 ದಿನಗಳ ಚಿತ್ರೀಕರಣದ ನಂತರ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಹೊಸ ನಿರ್ಮಾಪಕರು ಈ ಸಿನಿಮಾ ಕೈಗೆತ್ತಿಕೊಂಡಿದ್ದು ಮತ್ತೊಮ್ಮೆ ಮುಹೂರ್ತ ಆಚರಿಸಿ ಚಾಲನೆ ಕೊಡಲಾಗುತ್ತಿದೆ. ಮುಹೂರ್ತ ಸಮಾರಂಭಕ್ಕೆ ಡಿಸಿಎಂ ಡಿ. ಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಲಿದ್ದಾರೆ.
2018ರಲ್ಲಿ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಆ ನಂತರ ಕೊರೋನಾ ಹಾವಳಿಯಿಂದ ಶೂಟಿಂಗ್ ಸ್ಥಗಿತವಾಗಿ ಹಿನ್ನಡೆಯಾಗಿತ್ತು. ಇದೆಲ್ಲರ ನಡುವೆ ಚಿತ್ರದ ನಿರ್ಮಾಪಕರಾದ ಎನ್. ಎಲ್. ಎನ್ ಮೂರ್ತಿ 2020ರ ಜುಲೈನಲ್ಲಿ ಕೊನೆಯುಸಿರೆಳೆಸಿದ್ದರು. ಹಾಗಾಗಿ ಸಿನಿಮಾ ನಿಂತೇ ಹೋಗಿತ್ತು. ಇನ್ನೇನು ಸಿನಿಮಾ ಕಥೆ ಮುಗಿದೇ ಹೋಯ್ತು ಅಂತ ಎಲ್ಲರೂ ಸುಮ್ಮನಾಗಿದ್ದರು. ನಿರ್ಮಾಪಕರಾದ ಮನೋಹರ್ ನಾಯ್ಡು ಹಾಗೂ ಕೆ.ಪಿ. ಶ್ರೀಕಾಂತ್ ಸೇರಿ ಚಿತ್ರಕ್ಕೆ ಮರುಜೀವ ಕೊಡುತ್ತಿದ್ದಾರೆ.

ಇದೇ ನಿರ್ಮಾಪಕರು ತಮ್ಮ ವೀನಸ್ ಎಂಟರ್‌ಟೇನರ್ಸ್ ಮತ್ತು ಲಹರಿ ಫಿಲ್ಮ್ಸ್ ಅಡಿಯಲ್ಲಿ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ 'ಯುಐ' ಸಿನಿಮಾ ನಿರ್ಮಿಸುತ್ತಿದ್ದಾರೆ. ಇದೀಗ ನಿಂತು ಹೋಗಿದ್ದ 'ಗ್ರಾಮಾಯಣ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೂನ್ 8 ಗುರುವಾರ ಬೆಳಿಗ್ಗೆ 9:30ಕ್ಕೆ ನಗರದ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಹಾಜರಾಗುತ್ತಿದ್ದಾರೆ.
ಹೊಸ ಕಥೆ, ಹೊಸ ನಿರ್ಮಾಪಕರು
ಈಗಾಗಲೇ 25 ದಿನ ಚಿತ್ರೀಕರಣ ನಡೆದಿದ್ದರೂ ಅದನ್ನೆಲ್ಲಾ ಬಿಟ್ಟು ಸಂಪೂರ್ಣ ಹೊಸದಾಗಿ ಈ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಅದೇ ಟೈಟಲ್‌ನಲ್ಲಿ ಹೊಸ ಕಥೆ ಸಿದ್ಧಪಡಿಸಲಾಗಿದೆ. ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ, ಬರಹಗಾರರಾಗಿ ಗುರ್ತಿಸಿಕೊಂಡಿದ್ದ ದೇವನೂರು ಚಂದ್ರು ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚೊಚ್ಚಲ ಚಿತ್ರಕ್ಕೆ ಒಂದಷ್ಟು ವಿಘ್ನಗಳು ಎದುರಾದರೂ ಬಿಡದೇ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಮುಹೂರ್ತಕ್ಕೆ ಡಿಸಿಎಂ ಡಿಕೆಶಿ
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರುವ 'ಗ್ರಾಮಾಯಣ' ಚಿತ್ರದ ಮುಹೂರ್ತ ಸಮಾರಂಭಕ್ಕೆ ನೂತನ ಡಿಸಿಎಂ ಡಿ. ಕೆ ಶಿವಕುಮಾರ್ ಹಾಜರಾಗಲಿದ್ದಾರೆ. ಚಿತ್ರರಂಗದವರೊಟ್ಟಿಗೆ ಡಿಕೆಶಿ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ತಮ್ಮದೇ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಇವೆ. ಈ ಹಿಂದೆ ಕೂಡ ಕೆಲ ಸಿನಿಮಾ ಕಾರ್ಯಕ್ರಮಗಳಿಗೆ ಅವರು ಹಾಜರಾಗಿದ್ದರು. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮಕ್ಕೆ ಬರ್ತಿದ್ದಾರೆ.

ದೊಡ್ಮನೆಗೆ, ನಿರ್ಮಾಪಕರಿಗೆ ಆಪ್ತರು
ನಿರ್ಮಾಪಕ ಕೆ. ಪಿ ಶ್ರೀಕಾಂತ್ ಕನಕಪುರ ಮೂಲದವರು. ಡಿಕೆಶಿ ಕೂಡ ಕನಕಪುರದಲ್ಲಿ ಹುಟ್ಟಿ ಬೆಳೆದವರು. ಹಾಗಾಗಿ ತಮ್ಮೂರಿನ ನಿರ್ಮಾಪಕನ ಚಿತ್ರಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಇನ್ನು ದೊಡ್ಮನೆ ಜೊತೆಗೂ ಆತ್ಮೀಯ ಒಡನಾಟವಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ್‌ಕುಮಾರ್ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೂಡ ನಡೆಸಿದ್ದರು.
ದೊಡ್ಮನೆ ಸದಸ್ಯರು ಭಾಗಿ
ವಿನಯ್ ಹೊಸ ಚಿತ್ರಕ್ಕೆ ಹರಸಲು ದೊಡ್ಮನೆ ಸದಸ್ಯರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್, ದೊಡ್ಡಪ್ಪ ಶಿವಣ್ಣ, ದೊಡ್ಡಮ್ಮ ಗೀತಾ, ತಂದೆ ರಾಘಣ್ಣ ಗ್ರಾಮಾಯಣ ಮುಹೂರ್ತ ಸಮಾರಂಭಕ್ಕೆ ಹಾಜರಾಗುವುದು ಖಚಿತವಾಗಿದೆ. ಇನ್ನು ವಿಜಯ್ ರಾಘವೇಂದ್ರ, ಶ್ರೀಮುರಳಿ ಕೂಡ ಬರಲಿದ್ದಾರೆ.
ತಾರೆಯರ ಸಮಾಗಮ
'ಗ್ರಾಮಾಯಣ' ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ತಾರೆಯರ ಸಾಥ್ ಕೂಡ ಸಿಗುತ್ತಿದೆ. ಉಪೇಂದ್ರ, ಧನಂಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ ಸೇರಿದಂತೆ ಸಾಕಷ್ಟು ನಟರು ಕೂಡ ಈ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications











