ದರ್ಶನ್ ಅಸಭ್ಯವಾಗಿ ಕೈ ಸನ್ನೆ ಮಾಡಲಿಲ್ಲವಂತೆ, ಅದು ಒಂದು ಮುದ್ರೆ ಅಂತೆ; ಡಿ ಕಂಪನಿ ಪ್ರತಿಕ್ರಿಯೆ
ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇದ್ದಾರೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದೆ. ಆರೋಪಿಗಳು ಇದೀಗ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಫಾಸ್ಟ್‌ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಪ್ರಕರಣದ ವಿಚಾರಣೆ ನಡೆಸುವ ಬಗ್ಗೆ ಚರ್ಚೆ ನಡೀತಿದೆ.
ಮೂರು ತಿಂಗಳ ಹಿಂದೆ ದರ್ಶನ್ ಸೇರಿ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಿತ್ತು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು. ಬಳಿಕ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿ ದರ್ಶನ್‌ನ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಕಳೆದ 15 ದಿನಗಳಿಂದ ದರ್ಶನ್ ಅಲ್ಲಿದ್ದಾರೆ. ನಿನ್ನೆ(ಸೆಪ್ಟೆಂಬರ್ 12) ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ವಕೀಲರ ಜೊತೆ ಹೋಗಿ ದರ್ಶನ್ ಭೇಟಿ ಮಾಡಿದ್ದರು. ಚಾರ್ಜ್‌ಶೀಟ್ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ದರ್ಶನ್ ಕೈಸನ್ನೆ ವೀಡಿಯೋ ವೈರಲ್ ಆಗಿತ್ತು.
ಪತ್ನಿ ಹಾಗೂ ಸಹೋದರನ ಭೇಟಿಗೆ ದರ್ಶನ್ ಸೆಲ್‌ನಿಂದ ಹೊರಗೆ ಬಂದಿದ್ದರು. ಈ ವೇಳೆ ಮಾಧ್ಯಮ ಛಾಯಾಗ್ರಾಹಕರು ವೀಡಿಯೋ ಚಿತ್ರೀಕರಣ ನಡೆಸಿದ್ದರು. ಈ ವೇಳೆ ದರ್ಶನ್ ತಮ್ಮ ಎರಡೂ ಕೈಗಳಲ್ಲಿ ಕೆಟ್ಟದಾಗಿ ಸನ್ನೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅವರ ಈ ನಡೆ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಡಿಕಂಪನಿಯಿಂದ ಪ್ರತಿಕ್ರಿಯೆ ನೀಡಲಾಗಿದೆ.
ನಟ ದರ್ಶನ್ ಅಧಿಕೃತ ಅಭಿಮಾನಿ ಸಂಘ ಡಿ ಕಂಪನಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ದರ್ಶನ್ ಅವರು ಮಾಧ್ಯಮಗಳಿಗೆ ಕೆಟ್ಟದಾಗಿ ಕೈ ಸನ್ನೆ ಮಾಡಲಿಲ್ಲ. ಬದಲಿಗೆ ವಿಘ್ನ ಹರ ಮುದ್ರಾ ಮಾಡಿಕೊಂಡು ಬಂದಿದ್ದಾರೆ ಅಷ್ಟೇ ಎಂದು ಬರೆದುಕೊಂಡಿದ್ದಾರೆ. ವಿಘ್ನ ಹರ ಮುದ್ರಾ ಅಂದರೆ ಏನು? ಎನ್ನುವ ಬಗ್ಗೆಯೂ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತಮ್ಮ ಸೆಲ್‌ನಲ್ಲಿ ಕೆಟ್ಟಿರುವ ಟಿವಿ ಬದಲಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಜೈಲು ಸಿಬ್ಬಂದಿ ಬಳಿ ಕೇಳಿದ್ದಾರೆ ಎಂದು ಸುದ್ದಿ ಆಗ್ತಿದೆ. ರೇಣುಕಾಸ್ವಾಮಿ ಅಪಹರಣ ಹಾಗೂ ಚಿತ್ರಹಿಂಸೆ ನೀಡಿ ಕೊಂದಿರುವ ಗಂಭೀರ ಆರೋಪ ದರ್ಶನ್ & ಗ್ಯಾಂಗ್ ಮೇಲಿದೆ. ಈಗಾಗಲೇ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಆಗಿರುವುದರಿಂದ ಈಗ ಜಾಮೀನು ಸಿಗುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿ ಆಗಿರುವುದರಿಂದ ಜಾಮೀನು ಸಿಗುವುದು ಕಷ್ಟಸಾಧ್ಯ ಎನ್ನುವ ವಾದವನ್ನು ಕೆಲ ವಕೀಲರು ಮುಂದಿಡುತ್ತಿದ್ದಾರೆ.ಅಭಿಮಾನಿಗಳು ನೆಚ್ಚಿನ ನಟ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪತಿಯನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಅಸ್ಸಾಂನಲ್ಲಿರುವ ಕಾಮಕ್ಯ ದೇವಿ ಆಲಯಕ್ಕೆ ಅವರು ಭೇಟಿ ನೀಡಿದ್ದರು.
ನಿನ್ನೆ(ಸೆಪ್ಟೆಬರ್ 12) ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿ ವೇಳೆ ದೇವರ ಪ್ರಸಾದವನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಡ್ರೈಫ್ರೂಟ್ಸ್, ಬಿಸ್ಕತ್, ಇರುವ ಬ್ಯಾಗ್ ಅನ್ನು ಕೂಡ ಕೊಟ್ಟು ಬಂದಿದ್ದಾರೆ.


Click it and Unblock the Notifications











