ಗೂಗ್ಲಿಗೆ ದಶಕ, ಯಶ್ ಸ್ಟಾರ್‌ಡಂಗೂ ದಶಕ; ಯಶ್ ರೋಲ್ ಮಾಡೆಲ್, GOAT ಎಂದ ಪವನ್ ಒಡೆಯರ್!
ನಿನ್ನೆಯಷ್ಟೇ ( ಜುಲೈ 18 ) ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 15 ವರ್ಷಗಳು ತುಂಬಿತು. ಹೌದು, ಯಶ್ ನಟನೆಯ ಚೊಚ್ಚಲ ಚಿತ್ರ 'ಮೊಗ್ಗಿನ ಮನಸು' ಬಿಡುಗಡೆಯಾಗಿ 15 ವರ್ಷಗಳು ತುಂಬಿದ್ದವು. ಈ ವಿಶೇಷ ದಿನವನ್ನು ಯಶ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ #15GloriousYearsOfYash ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದರು.
ಹೀಗೆ ನಿನ್ನೆ ಯಶ್ ಚಿತ್ರರಂಗಕ್ಕೆ ಕಾಲಿಟ್ಟ ದಿನವನ್ನು ಸಂಭ್ರಮಿಸಿದ್ದ ಯಶ್ ಅಭಿಮಾನಿಗಳು ಇಂದು ( ಜುಲೈ 19 ) ಯಶ್‌ಗೆ ಸ್ಟಾರ್‌ಗಿರಿಯನ್ನು ತಂದುಕೊಟ್ಟ ಚಿತ್ರ ಬಿಡುಗಡೆಯಾದ ದಿನದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಹೌದು, ಇಂದು ಯಶ್ ಅವರಿಗೆ ಸ್ಟಾರ್ ಪಟ್ಟ ತಂದುಕೊಡುವಷ್ಟು ಯಶಸ್ಸನ್ನು ಸಾಧಿಸಿದ್ದ ಗೂಗ್ಲಿ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದಿವೆ. ಈ ವಿಶೇಷ ದಿನವನ್ನು ಯಶ್ ಅಭಿಮಾನಿಗಳು #DecadeForCultClassicGoogly ಹ್ಯಾಷ್‌ಟ್ಯಾಗ್ ಬಳಸಿ ಸಂಭ್ರಮಿಸುತ್ತಿದ್ದಾರೆ.

ಗೂಗ್ಲಿ ಚಿತ್ರ ಮಾಡಿದ್ದ ಗಳಿಕೆ, ದಾಖಲೆಗಳ ಕುರಿತು ಬರೆದುಕೊಳ್ಳುತ್ತಿರುವ ಯಶ್ ಅಭಿಮಾನಿಗಳು ಈ ಚಿತ್ರದ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡು ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಇನ್ನು ಈ ಚಿತ್ರದ ಚಿತ್ರದ ಫೈಟ್ ದೃಶ್ಯವೊಂದಕ್ಕಾಗಿ ಯಶ್ ನಿಜವಾಗಿ ಸ್ಟಂಟ್ ಮಾಡಿದ್ದರು. ನೈಸ್ ರಸ್ತೆಯಲ್ಲಿ ನಡೆದಿದ್ದ ಈ ಫೈಟ್ ದೃಶ್ಯದ ಚಿತ್ರೀಕರಣ ತುಂಬಾ ಕಠಿಣವಾಗಿತ್ತು. ಈ ಫೈಟ್ ದೃಶ್ಯದ ಚಿತ್ರೀಕರಣದ ವಿಡಿಯೊ ಕ್ಲಿಪ್‌ಗಳು ಆಗ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.
ವಿಶೇಷವಾಗಿ ಕಾರಿನ ಗ್ಲಾಸ್ ಹೊಡೆದು ಹಾಕುವ ಅಪಾಯಕಾರಿ ದೃಶ್ಯದಲ್ಲಿ ಯಶ್ ಯಾವುದೇ ಡ್ಯೂಪ್ ಬಳಸದೇ ಭಾಗವಹಿಸಿದ್ದರು. ಇಷ್ಟೊಂದು ರಿಸ್ಕಿ ಸ್ಟಂಟ್ ಮಾಡಿದ್ದ ಯಶ್ ಡೆಡಿಕೇಷನ್ ಕಂಡು ಸಿನಿ ರಸಿಕರು ಹೀರೊ ಎಂದರೆ ಹೀಗಿರಬೇಕಪ್ಪ ಎಂದು ಯಶ್ ಶ್ರಮವನ್ನು ಶ್ಲಾಘಿಸಿದ್ದರು.
ಹೀಗೆ ವೀಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದ ಈ ಫೈಟ್ ದೃಶ್ಯದ ಚಿತ್ರೀಕರಣದ ತುಣುಕನ್ನು ಇದೀಗ ಯಶ್ ಅಭಿಮಾನಿಯೊಬ್ಬರು ಗೂಗ್ಲಿ ದಶಕದ ಸಂಭ್ರಮದ ದಿನನದ ಅಂಗವಾಗಿ ಟ್ವೀಟ್ ಮಾಡಿ ಹಂಚಿಕೊಂಡಿದ್ದು "ಗೂಗ್ಲಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಯಶ್ ಅವರ ಡೆಡಿಕೇಷನ್ ನೋಡಿ. ಯಶ್ ಅಂದು ಹಾಕಿದ್ದ ಪರಿಶ್ರಮ, ಚಿತ್ರದ ಕಡೆ ಇದ್ದ ಪ್ರೀತಿ, ತಾಳ್ಮೆ ಹಾಗೂ ಒಳ್ಳೆಯ ಮತ್ತು ಕೆಟ್ಟ ಅನುಭವಗಳು ಇಂದು ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿವೆ. ಇಂತಹ ಚಿತ್ರವನ್ನು ಕಟ್ಟಿಕೊಟ್ಟ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್‌ಗೆ ಪವನ್ ಒಡೆಯರ್ ಸ್ಪಂದಿಸಿದ್ದಾರೆ. "ಡೆಡಿಕೇಷನ್, ಹಾರ್ಡ್ ವರ್ಕ್, ಪರಿಶ್ರಮ, ನಿರ್ಣಯಕ್ಕೆ ಮತ್ತೊಂದು ಹೆಸರೇ ಯಶ್. ಒಟ್ಟಾರೆಯಾಗಿ ಯಶ್ ರೋಲ್ ಮಾಡೆಲ್, ಗೋಟ್ (G.O.A.T)" ಎಂದು ಪವನ್ ಒಡೆಯರ್ ಬರೆದುಕೊಂಡಿದ್ದಾರೆ.
ಹೀಗೆ ಪವನ್ ಒಡೆಯರ್ ಮಾಡಿರುವ ಟ್ವೀಟ್‌ಗೆ ಯಶ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಗೂಗ್ಲಿ ಮುಂದುವರೆದ ಭಾಗ 'ಗೂಗ್ಲಿ 2' ಚಿತ್ರ ಮಾಡಿ ಎಂದು ಪವನ್ ಒಡೆಯರ್‌ಗೆ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಕೆಲವರು ಈ ವಿಶೇಷ ದಿನದಂದು ಗೂಗ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಬಹುದಿತ್ತು ಎಂದು ಸಲಹೆಗಳನ್ನು ನೀಡಿದ್ದಾರೆ.


Click it and Unblock the Notifications











