»   » ನಾಗತಿಹಳ್ಳಿಯ ನನ್ನ ಪ್ರೀತಿಯ ಹುಡುಗಿ ದೀಪಾಲಿ

ನಾಗತಿಹಳ್ಳಿಯ ನನ್ನ ಪ್ರೀತಿಯ ಹುಡುಗಿ ದೀಪಾಲಿ

Posted By: Staff
Subscribe to Filmibeat Kannada

ಅಪಾ-ರ ನಿರೀ-ಕ್ಷೆ ಹುಟ್ಟಿ-ಸಿ-ದ್ದ ಹುಡುಗಿಯ ಪ್ರೀತಿ ಯಶ-ಸ್ವಿ-ಯಾ-ಗಿ-ದೆ. ಜೀವನದ ಬಹುತೇಕ ಕ್ಷಣಗಳನ್ನು ಅಮೆರಿಕೆಯಲ್ಲೇ ಕಳೆದಿದ್ದರೂ ಅರಳು ಹುರಿದಂತೆ ಕನ್ನಡದಲ್ಲಿ ಮಾತಾಡುವ ಗ್ಲಾಮರಸ್‌ ಹುಡುಗಿ ದೀಪಾಲಿ ಈಗ ಸ್ಯಾಂಡಲ್‌ವುಡ್‌ನ ಹೊಸ ಅಲೆ. ಡೆಬ್ಯೂನಲ್ಲೇ ಮಿಂಚಿರುವ ಈಕೆಯ ಮನೆಯ ಫೋನು ರಿಂಗಿಸುತ್ತದೆ. ಕೇಳುತ್ತದೆ- ನಮ್ಮ ಸಿನಿಮಾದಲ್ಲಿ ಆ್ಯಕ್ಟ್‌ ಮಾಡುತ್ತೀರಾ? ನೋ, ನಾಟ್‌ ನೌ. ಈಗ ನಾನು ಪರೀಕ್ಷೆಯಲ್ಲಿ ಬಿಸಿ ಅನ್ನುತ್ತಾರೆ ದೀಪಾಲಿ. ತಮ್ಮ ಪರೀಕ್ಷೆಯ ಒತ್ತಡದಲ್ಲಿಯೂ ದೀಪಾಲಿ ಇ- ಮೇಲ್‌ನಲ್ಲಿ ನಮ್ಮೊಡನೆ ಮಾತಾಡಿದ್ದಾರೆ.

 • ಚಾಮರಾಜಪೇಟೆ ಟು ಕ್ಯಾಲಿಫೋರ್ನಿಯಾ- ನಿಮ್ಮ ಕುಟುಂಬದ ಹಿನ್ನೆಲೆ ಹೇಳಿ?
  ನಾನು ಹುಟ್ಟಿದ್ದು ಬೆಂಗಳೂರಲ್ಲಿ . ಅಪ್ಪ- ಅಮ್ಮನ ಜೊತೆ ಅಮೆರಿಕಕ್ಕೆ ಹಾರಿದಾಗ ನನಗೆ ಎರಡೇ ವರ್ಷ. ಕ್ಯಾಲಿಫೋರ್ನಿಯಾದಲ್ಲಿ ಬೆಳೆದೆ. ಅಪ್ಪ ವೆಂಕಟ್‌ ಪ್ರಸಾದ್‌, ಅಮ್ಮ ಪುಷ್ಪ , ಸೋದರಿ ಪೂಜಾ, ಸಹೋದರ ದರ್ಶನ್‌ ಇದು ಇಲ್ಲಿನ ನಮ್ಮ ಕುಟುಂಬ. ನನ್ನ ಚೊಚ್ಚಿಲ ಸಿನಿಮಾ ನಟನೆಗೆ ಇವರೆಲ್ಲರೂ ಬೆಂಬಲ ಕೊಟ್ಟರು
 • ಇನ್ನು ಮುಂದೆ, ಸಿನೆಮಾನೇ ನಿಮ್ಮ ಕೆರಿಯರ್ರ? ... ಹುಡುಗಿ ಬಿಡುಗಡೆ ನಂತರ ಯಾವುದಾದರೂ ಆಫರ್‌ ಬಂದಿದೆಯಾ?
  ಸದ್ಯಕ್ಕೆ ನನ್ನ ಕಣ್ತುಂಬ ಪರೀಕ್ಷೆಯೇ ತುಂಬಿ ಬಿಟ್ಟಿದೆ. ಕೆಲವು ಮಂದಿ ಆ್ಯಕ್ಟ್‌ ಮಾಡುವಂತೆ ನನ್ನನ್ನು ಭೆಟ್ಟಿಯಾಗಿದ್ದಾರೆ. ಆದರೆ, ಸದ್ಯಕ್ಕೆ ಮುಂದೇನು ಎಂದು ಹೇಳಲಾರೆ.
 • ನೀವು ಯಾವ ಕ್ಲಾಸಲ್ಲಿ ಓದುತ್ತಿದ್ದೀರಿ?
  ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹಾಸ್‌ ಸ್ಕೂಲ್‌ ಆಫ್‌ ಬಿಸಿನೆಸ್ಸಲ್ಲಿ ನಾನು ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಕೊನೆ ವರ್ಷದ ಪರೀಕ್ಷೆ ಬರೆಯುತ್ತಿದ್ದೇನೆ.
 • ನನ್ನ ಪ್ರೀತಿಯ... ಗೆ ನೀವು ಆಯ್ಕೆಯಾದದ್ದು ಹೇಗೆ?
  ಸಂಗೀತ ನಿರ್ದೇಶಕ ಮನೋಮೂರ್ತಿ ಅಪ್ಪನಿಗೆ ಗೊತ್ತು. ಹಿನ್ನೆಲೆ ಗಾಯಕ ರಾಂಪ್ರಸಾದ್‌ ಕೂಡ ಅಪ್ಪನ ಸ್ನೇಹಿತರು. ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ಸಿನಿಮಾಗೆ ನಾಯಕಿಯ ಹುಡುಕುತ್ತಿದ್ದಾರೆ ಅಂತ ಈ ಇಬ್ಬರೂ ಅಪ್ಪನಿಗೆ ಹೇಳಿದರು. ಮನೋಮೂರ್ತಿ ಬೆಂಗಳೂರಿಗೆ ಹೊರಟಾಗ, ಅಪ್ಪ ನನ್ನ ಫೋಟೋಗಳನ್ನು ಕಳುಹಿಸಿಕೊಟ್ಟರು. ನನ್ನ ಫೋಟೋ ನೋಡಿದ ಮೇಲೆ ಚಂದ್ರಶೇಖರ್‌ ಸ್ಕಿೃೕನ್‌ ಟೆಸ್ಟ್‌ಗೆ ಕರೆದರು. ಆಮೇಲೆ ಏನಾಯ್ತು ಅಂತ ನಿಮಗೆ ಗೊತ್ತೇ ಇದೆ.
 • ಮೊದಲು ಕೆಮೆರಾ ಎದುರಿಸಿದಾಗ ಏನನ್ನಿಸಿತು?
  ಅಬ್ಬಾ ! ಕುತೂಹಲ, ತವಕ, ಹುಮ್ಮಸ್ಸು ಇವೆಲ್ಲದರ ಸಮಾಗಮ ಆ ಕ್ಷಣ
 • ಕನ್ನಡ ಮಾತಾಡುವುದರಲ್ಲಿ ನೀವು ಎಷ್ಟು ಕಂಫರ್ಟಬಲ್‌?
  ಕೊಂಚವೂ ತಡಬಡಾಯಿಸದೆ ನಿರರ್ಗಳವಾಗಿ ಮಾತಾಡಬಲ್ಲೆ
 • ನಿಮ್ಮ ಹವ್ಯಾಸ ಮತ್ತು ಇತರೆ ಚಟುವಟಿಕೆಗಳು?
  ಪುಸ್ತಕ ಓದುತ್ತೀನಿ. ಸಿನಿಮಾ ನೋಡ್ತೀನಿ. ಸಿನಿಮಾ ಹಾಡುಗಳಿಗೆ ಕಾಲೇಜಲ್ಲಿ ನೃತ್ಯ ಸಂಯೋಜನೆ ಮಾಡ್ತೀನಿ. ಮನೆಯವರೊಟ್ಟಿಗೆ ಕಾಲ ಕಳೆಯೋದು, ಸ್ನೇಹಿತರೊಟ್ಟಿಗೆ ಹರಟೋದು ಮಜಾ ಕೊಡುತ್ತೆ. ಅಮೆರಿಕದ ಫುಟ್‌ಬಾಲ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ ನನ್ನ ನೆಚ್ಚು.
 • ಕನ್ನಡದ ಯಾವ ನಟ- ನಟಿ, ಸಿನಿಮಾ ನಿಮಗಿಷ್ಟ ?
  ಅಮೆರಿಕದಲ್ಲಿ ಕನ್ನಡ ಸಿನಿಮಾಗಳು ಇತ್ತೀಚೆಗಷ್ಟೇ ತೆರೆಕಾಣುತ್ತಿವೆ. ಈಚೆಗೆ ನಾನು ನೋಡಿದ ಚಿತ್ರಗಳ ಪೈಕಿ ಅಮೆರಿಕಾ ಅಮೆರಿಕಾ ಇಷ್ಟವಾಗಿತ್ತು. ನನಗೆ ನೆಪ್ಪಿದೆ- ಚಿಕ್ಕವಳಾಗಿದ್ದಾಗ ಅಮ್ಮ ಸತ್ಯ ಹರಿಶ್ಚಂದ್ರ ನೋಡು ಅಂತಿದ್ದರು. ಆ ಸಿನಿಮಾ ಹಾಗೂ ಅದರಲ್ಲಿನ ಡಾ.ರಾಜ್‌ರ ಅದ್ಭುತ ಅಭಿನಯ ನಂಗಿಷ್ಟ.
 • ನೀವು ಮತ್ತೆ ಬೆಂಗಳೂರಿಗೆ ಬಂದು ನೆಲೆಸಲು ಇಷ್ಟಪಡುತ್ತೀರಾ? ಇಲ್ಲವಾದರೆ ಯಾಕೆ?
  ಬರೋದೇನೋ ಇಷ್ಟ . ಆದರೆ ನಾನಿನ್ನೂ ಓದು ಮುಗಿಸಬೇಕಲ್ಲ ?
 • ನನ್ನ ಪ್ರೀತಿಯ ಹುಡುಗಿ ಕಟ್ಟಿಕೊಟ್ಟ ಅನುಭವ ಹೇಗಿತ್ತು?
  ನಾನೆಂದೂ ಮರೆಯಲಾಗದ ಕ್ಷಣಗಳನ್ನು ಚಿತ್ರ ಕಟ್ಟಿಕೊಟ್ಟಿದೆ. ನಿರ್ದೇಶಕರು, ಸಹ ಕಲಾವಿದರು ಹಾಗೂ ಒಟ್ಟಾರೆ ತಂಡದಿಂದ ನನಗೆ ಸಾಕಷ್ಟು ಸಪೋರ್ಟ್‌ ಸಿಕ್ಕಿತು.
 • ನಿಮಗಿಷ್ಟವಾದ ನಿಮ್ಮ ಮೊದಲ ಚಿತ್ರದ ಹಾಡು ?
  ಕಾರ್‌ ಕಾರ್‌..., ಬಾ ಬಾರೋ... ಹಾಗೂ ಮೂಡಲ್‌ ಕುಣಿಗಲ್‌ ಕೆರೆ
 • ...ಹುಡುಗಿ ಈಗ ತೆರೆ ಮೇಲಿದ್ದಾಳೆ ? ಪ್ರತಿಕ್ರಿಯೆ ಹೇಗಿದೆ?
  ಸಿನಿಮಾ ಹಾಗೂ ನನ್ನ ನಟನೆ ಬಗ್ಗೆ ಮೆಚ್ಚಿ ಆನ್‌ಲೈನ್‌ ಪತ್ರಿಕೆಗಳು ವಿಮರ್ಶೆ ಬರೆದಿವೆ. ನಿರ್ದೇಶಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿರುವ ಬೆಂಗಳೂರು ಹಾಗೂ ಮೈಸೂರಿನ ಜನ, ನಿನ್ನ ಮೊದಲ ಚಿತ್ರದಲ್ಲೇ ಸಾಕಷ್ಟು ಅನುಭವ ಇರುವ ನಟಿಯಂತೆ ಅಭಿನಯಿಸಿದ್ದೀಯೆ ಅಂದಿದ್ದಾರೆ!! ಯಾವಾಗ ಸಿನಿಮಾ ನೋಡ್ತೀನೋ ಅನ್ನಿಸಿಬಿಟ್ಟಿದೆ.
 • ನನ್ನ ಪ್ರೀತಿಯ ಹುಡುಗಿಯಲ್ಲಿ ನಟಿಸುವ ಮೊದಲು ಏನಾದರೂ ಕಲಿತಿದ್ದಿರಾ?
  ಸಾಕಷ್ಟು ನೃತ್ಯ ರೂಪಕಗಳಲ್ಲಿ ಅಭಿನಯಿಸಿದ್ದೆ. ಭರತನಾಟ್ಯ ಅರಾಂಗೇಟ್ರಂನಲ್ಲಿ ಪ್ರದರ್ಶನ ಕೊಟ್ಟಿದ್ದೆ.
 • ಮೊದಲ ಚಿತ್ರದಲ್ಲಿನ ಅಭಿನಯ ವೈಯಕ್ತಿಕವಾಗಿ ನಿಮಗೆ ತೃಪ್ತಿ ತಂದಿದೆಯಾ ?
  ನಾನಿನ್ನೂ ಚಿತ್ರ ನೋಡಿಲ್ಲ. ಇಲ್ಲಿ ರಿಲೀಸ್‌ ಆಗೋದನ್ನೇ ಕಾಯ್ತಿದೀನಿ. ಜನ ನನ್ನ ಆ್ಯಕ್ಟಿಂಗ್‌ ಚೆನ್ನಾಗಿದೆ ಅನ್ನೋದು ಖುಷಿ ತಂದಿದೆ.
 • ಛಾನ್ಸ್‌ ಸಿಕ್ಕರೆ ಬಾಲಿವುಡ್‌ಗೆ ಹೋಗುತ್ತೀರಾ?
  ಊಂ... ಹೋಗ್ತೀನೇನೋ ?
 • ನಿಜನಾಮ?
  ದೀಪಾ ಪ್ರಸಾದ್‌
 • ಕನಸು?
  Be a wonderful person and be happy

ದೀಪಾಲಿ ಈಗ ಪರೀಕ್ಷೆಯಲ್ಲೇ ಮುಳುಗಿ ಹೋಗಿದ್ದಾರೆ. ಮೇ. 15ರವರೆಗೆ ಅವರಿಗೆ ಬೇರೆಯದನ್ನ ಯೋಚಿಸೋಕೆ ಬಿಡುವಿಲ್ಲ. ಕನ್ನಡ ಚಿತ್ರರಂಗ ಈ ಹೊಸ ಪ್ರತಿಭೆಯ ಬೆನ್ನು ತಟ್ಟಿ, ಮನೆಗೆ ಕರೆಸಿಕೊಳ್ಳುತ್ತದೋ, ಇಲ್ಲ ಸುಖಾಸುಮ್ಮನಾಗುತ್ತದೋ ಕಾದು ನೋಡಬೇಕಷ್ಟೆ.

Read more about: sandalwood, kannada cinema
English summary
deepa prasad is busy with her exams

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada