ಮಾನನಷ್ಟ ಮೊಕದ್ದಮೆ: ಶ್ರುತಿ ಹರಿಹರನ್ ಗೆ ನೋಟೀಸ್ ಜಾರಿ ಮಾಡಿದ ಕೋರ್ಟ್
ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಅಭಿಯಾನ ಕೋರ್ಟ್ ಮೆಟ್ಟಿಲೇರಿದೆ. ಶ್ರುತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸದ್ಯ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಸಿವಿಲ್ ಕೋರ್ಟ್ ನಲ್ಲಿ ಅರ್ಜುನ್ ಸರ್ಜಾ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಶ್ರುತಿ ಹರಿಹರನ್ ಪರ ವಕೀಲರ ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ನೀಡಲು ಕೋರ್ಟ್ ತೀರ್ಮಾನಿಸಿದೆ.

''ಮಧ್ಯಂತರ ಆದೇಶ ನೀಡುವ ಮುನ್ನ ನಮಗೂ ವಾದ ಮಂಡಿಸಲು ಅವಕಾಶ ಕೊಡಿ'' ಎಂದು ಶ್ರುತಿ ಹರಿಹರನ್ ಪರ ವಕೀಲೆ ಜೈನಾ ಕೊಠಾರಿ ಕೋರ್ಟ್ ನಲ್ಲಿ ಮನವಿ ಮಾಡಿದರು. ಇದಕ್ಕೆ ಕೋರ್ಟ್ ಮನ್ನಣೆ ನೀಡಿದೆ. ಅಕ್ಟೋಬರ್ 29ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
#ಮೀಟೂ ಅಭಿಯಾನದ ಅಡಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಕುರಿತು ತಮ್ಮ ವ್ಯಕ್ತಿತ್ವ ಹಾಗೂ ಘನತೆಗೆ ಶ್ರುತಿ ಹರಿಹರನ್ ಚ್ಯುತಿ ತಂದಿದ್ದಾರೆ ಎಂದು ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.


Click it and Unblock the Notifications











