»   » ವರ್ಷದಲ್ಲಿ ಕನಿಷ್ಠ 12ವಾರ ಕನ್ನಡ ಚಿತ್ರ ಪ್ರದರ್ಶಿಸಲು ಆಗ್ರಹ

ವರ್ಷದಲ್ಲಿ ಕನಿಷ್ಠ 12ವಾರ ಕನ್ನಡ ಚಿತ್ರ ಪ್ರದರ್ಶಿಸಲು ಆಗ್ರಹ

Posted By: Staff
Subscribe to Filmibeat Kannada

ಬೆಂಗಳೂರು : 2002ರ ಏಪ್ರಿಲ್‌ ಒಂದರಿಂದ ನಿರ್ಮಾಣಗೊಳ್ಳುವ ಎಲ್ಲ ಸ್ವಮೇಕ್‌ ಚಿತ್ರಗಳಿಗೆ ಸಬ್ಸಿಡಿ ನೀಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘವು, ವರ್ಷದಲ್ಲಿ ಕನಿಷ್ಠ 12 ವಾರಗಳ ಕಾಲ ಕನ್ನಡ ಚಿತ್ರ ಪ್ರದರ್ಶಿಸುವಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳ ಮಾಲಿಕರನ್ನು ಆಗ್ರಹಿಸಿದೆ.

ರಾಜ್ಯದಲ್ಲಿ ನಿರ್ಮಾಣವಾಗುವ ಎಲ್ಲ ಸ್ವಮೇಕ್‌ ಚಿತ್ರಗಳನ್ನೂ ಪರಿಗಣಿಸಿ, ಅಂತಹ ಚಿತ್ರಗಳಿಗೆ ಸಬ್ಸಿಡಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲ್‌ ಸುದ್ದಿಗಾರರಿಗೆ ತಿಳಿಸಿದರು.
ಈಹೊತ್ತು ರಾಜ್ಯದ ಎಲ್ಲ ಚಿತ್ರಮಂದಿರಗಳ ಮಾಲಿಕರು ತಮ್ಮ ಚಿತ್ರಮಂದಿರಗಳಿಗೆ ಪಡೆಯುತ್ತಿರುವ ಬಾಡಿಗೆ ದರವನ್ನು ಕಡ್ಡಾಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಾಯಿಸಿಕೊಳ್ಳಬೇಕು ಎಂದೂ ಅವರು ಹೇಳಿದರು.

ಚಲನಚಿತ್ರ ಮಂದಿರಗಳು ಎಷ್ಟು ಬಾಡಿಗೆ ಪಡೆಯುತ್ತಿವೆ ಎಂಬ ಬಗ್ಗೆ ಗೊಂದಲವಿದೆ. ಕೆಲವು ಚಿತ್ರಮಂದಿರ ಮಾಲಿಕರು ಹೆಚ್ಚು ಬಾಡಿಗೆಯ ಬೇಡಿಕೆ ಇಡುವ ಮೂಲಕ ನಿರ್ಮಾಪಕರು ಮತ್ತು ವಿತರಕರನ್ನು ಶೋಷಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ, ಅವರು ಕಡ್ಡಾಯವಾಗಿ ವಾಣಿಜ್ಯ ಮಂಡಳಿಯಲ್ಲಿ ತಮ್ಮ ದರವನ್ನು ನಮೂದಿಸಬೇಕು. ಫೆ. 10ನೇ ತಾರೀಖಿನೊಳಗೆ ಬಾಡಿಗೆ ದರ ನಮೂದಿಸದ ಮಾಲಿಕರ ವಿರುದ್ಧ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್‌ ಹೇಳಿದರು.

ಅನ್ಯ ಭಾಷೆಯ ಪ್ರಭಾವ ಇರುವ ಕೋಲಾರ, ಕೆ.ಜಿ.ಎಫ್‌.ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಚಿತ್ರಮಂದಿರ ಮಾಲಿಕರು ಕನ್ನಡ ಚಿತ್ರ ಪ್ರದರ್ಶಿಸಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ವರ್ಷದಲ್ಲಿ ಕನಿಷ್ಠ 12 ವಾರಗಳ ಕಾಲ ಕನ್ನಡ ಚಿತ್ರ ಪ್ರದರ್ಶಿಸಬೇಕು ಎಂದು ಸಂಘ ಒತ್ತಾಯಿಸುತ್ತದೆ ಎಂದರು.

English summary
Producer's association demands to exhibit kannada films atleast 12 weeks in an year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada