»   » ಮಧ್ಯಂತರದಲ್ಲಿ ದೇಸಾಯಿ!

ಮಧ್ಯಂತರದಲ್ಲಿ ದೇಸಾಯಿ!

Posted By: Staff
Subscribe to Filmibeat Kannada

ನಾನು ಸತ್ತರೂ ರೀಮೇಕ್‌ ಮಾಡೋದಿಲ್ಲ- ಸುನೀಲ್‌ ಕುಮಾರ್‌ ದೇಸಾಯಿ.
ಹಾಗಾದರೆ ನೀವು ಕನ ್ನಡ ಚಿತ್ರೋದ್ಯಮದಲ್ಲಿರುವುದಕ್ಕೆ ನಾಲಾಯಕ್ಕು - ನಿರ್ಮಾಪಕರು.

ನನಗೆ ಸಿನಿಮಾ ಚೆನ್ನಾಗಿ ಬರೋದು ಮುಖ್ಯ, ನಿರ್ಮಾಪಕರ ಹಿತಾಸಕ್ತಿ ಆಮೇಲೆ - ದೇಸಾಯಿ
ನಮಗೆ ನಿರ್ಮಾಪಕರ ಹಿತಾಸಕ್ತಿ ಕಾಯುವ ನಿರ್ದೇಶಕ ಬೇಕು - ನಿರ್ಮಾಪಕ

ದೇಸಾಯಿ ಅವರಿಗೆ ಎಲ್ಲವನ್ನೂ ತಾನೇ ಮಾಡುವ ಹಠ. ಹಾಗಾದಾಗ ಉಳಿದವರಿಗೆ ಹಿಂಸೆಯಾಗುತ್ತದೆ- ವಿಷ್ಣುವರ್ಧನ್‌
ನಿರ್ದೇಶಕ ಅಂದಮೇಲೆ ಚಿತ್ರದ ಸಕಲ ವಿಭಾಗಗಳಲ್ಲೂ ಇನ್‌ವಾಲ್ವ್‌ ಆಗಲೇ ಬೇಕು. ಉಳಿದವರು ಆತನ ಮಾತನ್ನು ಪಾಲಿಸಬೇಕು - ದೇಸಾಯಿ


ಇಂಥಾ ವಿರೋಧಗಳ ನಡುವೆಯೂ ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಂಡು ಬಂದಿದ್ದ ದೇಸಾಯಿಯವರ ಪರವಾಗಿದ್ದವರು ಕನ್ನಡ ಪ್ರೇಕ್ಷಕರು ಮಾತ್ರ. ಅವರ ಶೈಲಿಯನ್ನು ಮೆಚ್ಚುವ ಒಂದು ವರ್ಗವೇ ಕರ್ನಾಟಕದಲ್ಲಿದೆ. ದೇಸಾಯಿ ಚಿತ್ರಕ್ಕಾದರೆ ಮಾತ್ರ ಥಿಯೇಟರ್‌ಗೆ ಹೋಗುತ್ತೇನೆ ಅನ್ನುವ ಕಟ್ಟಾ ಅಭಿಮಾನಿಗಳಿದ್ದಾರೆ. ಈಗ ಅವರೆಲ್ಲರಿಗೂ ಅಘಾತ ನೀಡುವಂಥ ನಿರ್ಧಾರವನ್ನು ದೇಸಾಯಿ ತೆಗೆದುಕೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ವಲಸೆ ಹೋಗಲಿದ್ದಾರೆ. ಅಲ್ಲಿಗೆ, ವ್ಯವಸ್ಥೆಯ ವಿರುದ್ಧ ಈಜುತ್ತಿದ್ದ ರೆಬೆಲ್‌ ನಿರ್ದೇಶಕನೊಬ್ಬನ ಹೋರಾಟಕ್ಕೆ ಮಧ್ಯಂತರ ಸಿಕ್ಕಂತಾಗಿದೆ.

ತೆಲುಗಿನತ್ತ ದೇಸಾಯಿ ಗಮನ

ಸದ್ಯಕ್ಕೆ ಪರ್ವ ಚಿತ್ರದ ಚಿತ್ರೀಕರಣದಲ್ಲಿ ತನ್ಮಯರಾಗಿರುವ ದೇಸಾಯಿ ಡಿಸೆಂಬರ್‌ ಹೊತ್ತಿಗೆ ಇದನ್ನು ಪೂರ್ಣಗೊಳಿಸಲಿದ್ದಾರೆ. ಅನಂತರ ಹೈದರಾಬಾದ್‌ ಪಯಣ. ಅಲ್ಲಿ ಶಿವರಾಮ ಕೃಷ್ಣ ಮತ್ತು ಮುರಳಿ ಕೃಷ್ಣ ಎಂಬ ಇಬ್ಬರು ನಿರ್ಮಾಪಕರು ದೇಸಾಯಿ ಅವರಿಗಾಗಿ ಕಾಯುತ್ತಿದ್ದಾರೆ. ದೇಸಾಯಿ ಹೆಸರ ಮೇಲೆಯೇ ಲಕ್ಷಗಟ್ಟಲೆ ಸುರಿಯುವುದಕ್ಕೆ ಸಿದ್ಧರಾಗಿದ್ದಾರೆ. ತೆಲುಗಿನಿಂದಲೇ ಸತ್ಯನಾರಾಯಣ ಪೂಜೆ ಪ್ರಸಾದದ ಥರ ರಿಮೇಕ್‌ ರೈಟ್ಸ್‌ ಹೊತ್ತು ತರುವ ಕನ್ನಡ ನಿರ್ಮಾಪಕರು ನಾಳೆ ದೇಸಾಯಿ ಮಾಡಿದ ಚಿತ್ರವನ್ನೇ ರೀಮೇಕ್‌ ಮಾಡಿದರೆ ಅಚ್ಚರಿಯಿಲ್ಲ. ಆದರೆ ಕನ್ನಡದಲ್ಲಿ ದೇಸಾಯಿ ಒರಿಜಿನಲ್‌ ಚಿತ್ರ ಮಾಡುತ್ತೇನೆ ಅಂದರೆ ಇವರ್ಯಾರು ಬೆಂಬಲಿಸುವುದಿಲ್ಲ.

ದೇಸಾಯಿ ಈಗಾಗಲೇ ಸುಸ್ತಾಗಿದ್ದಾರೆ. ಅವರ ಟೆನ್ಶನ್‌ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ. ಒಂದು ಬಾರಿ ಅವರ ಹೃದಯ ಕಂಪಿಸಿದ್ದಾಗಿದೆ. ಹಾಗಿದ್ದೂ ಸೆಟ್‌ನಲ್ಲಿ ಅವರ ಮೈಮೇಲೆ ದೇವರು ಬರ್ತಾರೆ, ಅವರು ನಟನಾಗುತ್ತಾರೆ, ಡ್ಯಾನ್ಸರ್‌ ಆಗುತ್ತಾರೆ, ಕ್ಯಾಮರಾ ಮನ್‌ ಆಗುತ್ತಾರೆ... ಏನೇನೋ ಆಗುತ್ತಾರೆ. ತಮ್ಮ ಇಷ್ಟಕ್ಕೆ ಅನುಗುಣವಾಗಿ ದೃಶ್ಯ ಮೂಡಿ ಬರದೇ ಇದ್ದರೆ ಅವರು ವಿಶ್ವಾಮಿತ್ರನಾಗುತ್ತಾರೆ. ಆದರೆ ಪುಟ್ಟಣ್ಣ ಥರ ಕಲಾವಿದರ ಮೇಲೆ ರೇಗುವುದಿಲ್ಲ. ಬೇರೆಯವರ ಮೇಲಿನ ಸಿಟ್ಟನ್ನು ತಮ್ಮ ಮೇಲೆಯೇ ತೋರಿಸಿಕೊಳ್ಳುತ್ತಾರೆ, ತಮಗೆ ತಾವೇ ಚಪ್ಪಲಿ ಸೇವೆ ಮಾಡೋದೂ ಉಂಟು. ಇಂಥಾ ಅತಿರೇಕಗಳನ್ನು ಕಂಡ ದೇಸಾಯಿ ಅವರನ್ನು ಹುಚ್ಚ ಅಂತಾರೆ. ಆದರೆ, ಅದೇ ಮಂದಿ ದೇಸಾಯಿ ಚಿತ್ರ ನೋಡಿ ಮಹಾನ್‌ ಹುಚ್ಚ ಅಂತ ಹೊಗಳುತ್ತಾರೆ.

ಇಂಥಾ ನಿಷ್ಪಾಪಿ ಹುಚ್ಚನ ಮೇಲೆ ಇತ್ತೀಚೆಗೆ ಮಾತಿನ ಹಲ್ಲೆ ನಡೆಸಿದವರು ವಿಷ್ಣುವರ್ಧನ್‌. ಪರ್ವ ಸೆಟ್‌ನಲ್ಲಿ ದೇಸಾಯಿ ವರ್ತನೆ ಬಗ್ಗೆ ವಿಷ್ಣು ಗೇಲಿ ಮಾಡಿದ್ದುಂಟು, ಕುಹಕವಾಡಿದ್ದುಂಟು, ಸಿಟ್ಟಾಗಿದ್ದುಂಟು.... ಯಜಮಾನರ ಈ ಕಾಮೆಂಟುಗಳು ರಂಗುರಂಗಾಗಿ ಪತ್ರಿಕೆಗಳಲ್ಲಿ ವರದಿಯಾದವು. ಆದರೆ ದೇಸಾಯಿ ಸುಮ್ಮನೇ ಇದ್ದರು. ಮೊನ್ನೆ ಮಾತ್ರ ಅಪರೂಪಕ್ಕೋ ಎಂಬಂತೆ ದೇಸಾಯಿ ಮಾತನಾಡಿದರು. ದೇಸಾಯಿ ಕತೆ ಹೇಳೊಲ್ಲ, ಸೀನ್‌ ಹೇಳೋಲ್ಲ ಅನ್ನುವ ವಿಷ್ಣು ಆರೋಪವನ್ನು ತೀರಾ ಬಾಲಿಶ ಎನ್ನುವಂತೆ ತಳ್ಳಿ ಹಾಕಿದರು. ಇಮೇಜ್‌ ಇರುವ ಸ್ಟಾರ್‌ಗಳಿಗೆ ಮುಂಚಿತವಾಗಿ ಕತೆ ಅಥವಾ ಸೀನ್‌ ಹೇಳಿದರೆ, ಅವರು ಅದನ್ನು ಕುಲಗೆಡಿಸುತ್ತಾರೆ ಅಂದರು.

ಕಮಲಹಾಸನ್‌ ಅಂಥ ನಟರು ಕನ್ನಡದಲ್ಲೆಲ್ಲಿ?

ಕಮಲಹಾಸನ್‌ ಥರದ ನಟನ ಜೊತೆಗಾದರೆ ಕತೆ ಬಗ್ಗೆ ಚರ್ಚೆ ಮಾಡಬಹುದು. ಆತನಿಗೆ ಕತೆಯನ್ನು ಗ್ರಹಿಸುವ ಮತ್ತು ಸೆಟ್‌ ಮೇಲೆ ಅದನ್ನು ಇಂಪ್ರೂವ್‌ ಮಾಡುವ ಸಾಮರ್ಥ್ಯವಿದೆ. ಕನ್ನಡದಲ್ಲಿ ಸ್ವಲ್ಪ ಮಟ್ಟಿಗೆ ಅನಂತ್‌ನಾಗ್‌ ಈ ರೇಂಜ್‌ಗೆ ಬರ್ತಾರೆ, ಮಿಕ್ಕವರಿಗೆ ಕತೆ ಹೇಳಿದರೆ ತೊಂದರೆಯೇ ಜಾಸ್ತಿ. ಅವರು ತಮ್ಮ ಪೂರ್ವ ಸಿದ್ಧ ಇಮೇಜ್‌ನೊಂದಿಗೇ ಸೆಟ್‌ಗೆ ಹಾಜರಾಗುತ್ತಾರೆ. ಆಗ ನನ್ನ ಕಲ್ಪನೆ ಸಾಕಾರವಾಗುವುದಿಲ್ಲ. ಅಷ್ಟಕ್ಕೂ ನಿರ್ದೇಶಕ ಒಬ್ಬ ನಟನಿಂದ ಬಯಸುವುದೇನು... ಒಳ್ಳೇ ಎಕ್ಸ್‌ಪ್ರೆಷನ್‌.... ಕತೆಯನ್ನು ಕಟ್ಟಿಕೊಂಡು ಅವರಿಗೇನಾಗಬೇಕು ?

ಹಾಗಿದ್ದರೆ ವಿಷ್ಟು ಅವರಿಗೆ ಇರಿಸುಮುರಿಸಾದದ್ದೇಕೆ?

'ಅವರಿಗೆ ರೀಮೇಕ್‌ ಚಿತ್ರಗಳಲ್ಲಿ ಮಾಡಿ ಅಭ್ಯಾಸ ಆಗಿ ಹೋಗಿದೆ. ಅದೇ ಪಂಚೆ ಮೀಸೆ ಬೇಕು. ಆದರೆ ನನ್ನ ಚಿತ್ರದಲ್ಲಿ ಪ್ಯಾಂಟ್‌ ಶರ್ಟ್‌ ಹಾಕೋಬೇಕು. ಇನ್ನೊಂದೆಡೆ ಅವರೀಗ ಯಶಸ್ಸಿನ ಉತ್ತುಂಗದಲ್ಲಿರುವುದರಿಂದ ಅವರೊಳಗೆ ಕಳಕೊಳ್ಳುವ ಭಯ ಇರಬಹುದು".

ಒಬ್ಬ ಯಶಸ್ವಿ ನಟ ಮತ್ತು ಒಬ್ಬ ಶ್ರೇಷ್ಠ ನಿರ್ದೇಶಕನ ನಡುವಣ ಸಂಘರ್ಷ ಚಿತ್ರದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು ಕುತೂಹಲಕಾರಿ. ಪರ್ವ ಗೆದ್ದರೆ ಇದೇ ವಿಷ್ಣು ಮತ್ತೆ ದೇಸಾಯಿ ಬಗ್ಗೆ ಪ್ರಶಂಸೆಯ ಮಳೆಗರೆಯಬಹುದು. ಸೋತರೆ ದೇಸಾಯಿ ಮತ್ತೆ ಸರ್ವರ ಟೀಕೆಗೆ ಗುರಿಯಾಗುತ್ತಾರೆ.

ದೇಸಾಯಿ ಅವರನ್ನು ತೆಲುಗಿಗೆ ಹೋಗದಂತೆ ತಡೆಯುವ ಪ್ರಯತ್ನವೂ ಸಾಗಿದೆ. ಯುವರಾಜ ಚಿತ್ರ ನಿರ್ಮಿಸಿರುವ ಕನಕಪುರ ಶ್ರೀನಿವಾಸ್‌ , ದೇಸಾಯಿ ಪ್ರೇಮಿ. ಮುಂದಿನ ಜನವರಿಯಲ್ಲಿ ಉಪೇಂದ್ರ ನಾಯಕತ್ವದ ಚಿತ್ರವನ್ನು ದೇಸಾಯಿ ಅವರಿಂದಾನೇ ನಿರ್ದೇಶಿಸಬೇಕು ಅನ್ನೋದು ಅವರ ಹಠ. ಉಪೇಂದ್ರನಿಗೆ ಹೊಸ ಇಮೇಜ್‌ ಕೊಡಬೇಕಾದರೆ ಸಾಕಷ್ಟು ಕಾಲಾವಕಾಶ ಬೇಕು. ಇಷ್ಟೊಂದು ಅವಸರ ಮಾಡಿದರೆ ಸಾಧ್ಯ ಇಲ್ಲ ಅನ್ನೋದು ದೇಸಾಯಿ ಪ್ರತಿಕ್ರಿಯೆ .

ಉಪೇಂದ್ರರಂಥಾ ಜನಪ್ರಿಯ ನಟನ ಚಿತ್ರ ಸಿಕ್ಕಿದರೆ ಸಾಕು ಎಂದು ಹಾತೊರೆಯುವ ನಿರ್ದೇಶಕರೆಲ್ಲಿ....ಉಪೇಂದ್ರನಾದರೆ ಏನಂತೆ, ಕತೆ ರೆಡಿಯಾಗಬೇಕು ಎಂದು ರೇಗುವ ದೇಸಾಯಿ ಎಲ್ಲಿ ......

Read more about: sandalwood, kannada cinema
English summary
Sandalwood : Sunil kumar desai decides to move towards Telugu film industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada