'ದೇವಕಿ' ಬಿಡುಗಡೆ ದಿನಾಂಕ ನಿಗದಿ : ಜುಲೈ 5ಕ್ಕೆ ಸಿನಿಮಾ ಬರೋದು ಪಕ್ಕಾ
ಪ್ರಿಯಾಂಕ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ ಯಾವಗ ಬಿಡುಗಡೆ ಎನ್ನುವ ಪ್ರಶ್ನೆಗೆ ನಿರ್ದೇಶಕ ಲೋಹಿತ್ ಉತ್ತರ ನೀಡಿದ್ದಾರೆ. ಜುಲೈ 5 ರಂದು ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ.
'ಕೆಜಿಎಫ್' ಖ್ಯಾತಿಯ ಕಾರ್ತಿಕ್ ಗೌಡ ಚಿತ್ರದ ಹಂಚಿಕೆ ಮಾಡುತ್ತಿದ್ದಾರೆ. ವಿಷಯ ಏನೆಂದರೆ, ಕಾರ್ತಿಕ್ ಗೌಡ ಎನ್ ಆರ್ ಐ (Non Refundable Amount) ನೀಡಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದರು. ಕನ್ನಡದಲ್ಲಿ ಒಂದು ಮಹಿಳಾ ಪ್ರಧಾನ ಸಿನಿಮಾಗೆ ಈ ರೀತಿ ಎನ್ ಆರ್ ಐ ನೀಡಿ ವಿತರಣೆ ಹಕ್ಕನ್ನು ಪಡೆದಿರುವುದು ಇದೇ ಮೊದಲು.
'ದೇವಕಿ' ಸಿನಿಮಾ ಅನೇಕ ವಿಶೇಷತೆಗಳನ್ನು ಹೊಂದಿದೆ. ಉಪೇಂದ್ರ ಪುತ್ರಿ ಐಶ್ವರ್ಯ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಬಾರಿಗೆ ಲೋಹಿತ್ ಹಾಗೂ ಪ್ರಿಯಾಂಕ ಒಂದಾಗಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸೇರಿದಂತೆ ಅನೇಕರು ಚಿತ್ರದ ಟೀಸರ್ ಅನ್ನು ಮೆಚ್ಚಿಕೊಂಡಿದ್ದರು. ಟೀಸರ್ ಕ್ವಾಲಿಟಿಗೆ ದೊಡ್ಡ ಪ್ರಶಂಸೆ ಸಿಕ್ಕಿತ್ತು.
ಇಡೀ ವಿಶ್ವದಲ್ಲಿಯೇ 'ಚಲ್ಡ್ ಟ್ರಾಕಿಂಗ್' ದೊಡ್ಡ ಮಾಫಿಯಾ ಆಗಿದ್ದು, ಆ ವಿಷಯದ ಮೇಲೆ ಸಿನಿಮಾದ ಕಥೆ ಹೆಣೆಯಲಾಗಿದೆ. ಸಿಕ್ಕಾಪಟ್ಟೆ ರಾ ಆಗಿ ಚಿತ್ರೀಕರಣ ಮಾಡಿದ್ದಾರೆ. ವೇಣು ಕ್ಯಾಮರಾ ವರ್ಕ್ ಮತ್ತು ನೊಬಿನ್ ಪೌಲ್ ಸಂಗೀತ ಹಾಗೂ ಸಿ ರವಿಚಂದ್ರನ್ ಸಂಕಲನ ಸಿನಿಮಾಗೆ ಶಕ್ತಿ ತುಂಬಿದೆ. ಪೊಲೀಸ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ.

ಇನ್ನು ಇತ್ತೀಚಿಗಷ್ಟೆ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಸದ್ಯದಲ್ಲಿಯೇ ಟ್ರೇಲರ್ ಬಿಡುಗಡೆ ಆಗಲಿದೆ. ಜುಲೈ 5ಕ್ಕೆ 'ದೇವಕಿ' ದರ್ಶನ ನೀಡಲಿದೆ.


Click it and Unblock the Notifications











