twitter
    For Quick Alerts
    ALLOW NOTIFICATIONS  
    For Daily Alerts

    ಸಾರಸ್ವತ ಒಡಲಾಳದತ್ತ ಸಿನಿಮಾದ ಹೆಜ್ಜೆ

    By Super
    |

    ಇಂಥಾ ಜನ ಎಲ್ಲಾ ಕಡೆಯೂ ಇದ್ದೇ ಇರುತ್ತಾರೆ. ಚೆಲುವೆ ಹೆಂಡತಿ ಮನೆಯಲ್ಲಿದ್ದರೂ ಅಕ್ಕಪಕ್ಕದ ಮನೆಗಳತ್ತ ಕಣ್ಣುಹಾಯಿಸುವ ಮಂದಿ ಕೆಲವರಾದರೆ, ಕೆಮ್ಮೋಳಾದರೂ ನಮ್ಮೋಳೇ ವಾಸಿ ಅನ್ನುವವರೂ ಇದ್ದಾರೆ. ಇಂಥಾ ಮಂದಿಯಿಂದ ಸಿನಿಮಾರಂಗವೇನೂ ಹೊರತಲ್ಲ .

    ಕನ್ನಡದಲ್ಲಿ ಕಥೆಗಳಿಲ್ಲ ಎಂದು ರಿಮೇಕ್‌ಪ್ರಿಯ ನಿರ್ಮಾಪಕರು ಎಂದಿನಂತೆ ಅತ್ತಿತ್ತ ಕಣ್ಣು ಹೊರಳಿಸುತ್ತಿದ್ದರೆ, ಒಂದಷ್ಟು ಮಂದಿ ಮಾತ್ರ ಇರುವ ಕಾದಂಬರಿಗಳನ್ನೇ ತಿರುವಿ, ಮಗುಚಿ ಕಥೆ ಹುಡುಕುತ್ತಿದ್ದಾರೆ. ಒಂದಾನೊಂದು ಕಾಲವಿತ್ತು . ಆಗೆಲ್ಲ ಸಿನಿಮಾ ಅಂದರೆ, ಕಥೆಗೇ ಮೊದಲಸ್ಥಾನ, ಕಾದಂಬರಿಗಳಿಗೇ ಮಣೆ . ಅದಕ್ಕೇ ಏನೋ, ರಾಷ್ಟ್ರಪ್ರಶಸ್ತಿಗಳೆಲ್ಲ ಕನ್ನಡಕ್ಕೇ ಎಡರುತ್ತಿದ್ದವು. ಕನ್ನಡ ಸಿನಿಮಾವೆಂದರೆ ಬರಿ ಸಿನಿಮಾವಲ್ಲ ಎಂದು ಪರಭಾಷೆಗಳ ಮಂದಿಯೂ ನಂಬಿದ್ದರು.

    ಈಗ, ಕಲಬೆರಕೆಯ ಕಾಲ. ಕಥೆಗಳಲ್ಲೂ ಕಲಬೆರಕೆಯೇ. ಈ ನಡುವೆಯೂ, ಕೆಲವು ನಿರ್ಮಾಪಕರು ಕಾದಂಬರಿಗಳತ್ತ ಕಣ್ಣುನೆಟ್ಟಿರುವುದು, ಅದ್ದೂರಿಗಿಂತ ಅರ್ಥಪೂರ್ಣ ಸಿನಿಮಾಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದು ಚೇತೋಹಾರಿ ಸಂಗತಿ. ಈಚಿನ ದಿನಗಳಲ್ಲಂತೂ ಕಾದಂಬರಿ ಎಂದು ಓಡಾಡುವ ನಿರ್ಮಾಪಕ, ನಿರ್ದೇಶಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚುತ್ತಿದೆ. ಈ ಕ್ರೆಡಿಟ್‌ ನಮ್ಮ ಹೊಸ ಪೀಳಿಗೆಯ ನಿರ್ಮಾಪಕ ನಿರ್ದೇಶಕರಿಗೆ ಸಲ್ಲಬೇಕು.

    ಕುವೆಂಪು ಅವರು ಕಾನೂರು ಹೆಗ್ಗಡತಿಯನ್ನು ಬೆಳ್ಳಿತೆರೆಗೆ ತಂದ ಅನಿಕೇತನ ಲಾಂಛನದ ನಾರಾಯಣ್‌ (ಸಲಹೆಗಾರ - ಐ.ಎಂ. ವಿಠ್ಠಲಮೂರ್ತಿ) ಈ ನಿಟ್ಟಿನಲ್ಲಿ ಮೊದಲು ನೆನೆಯಬೇಕು. ಮೊನ್ನಿನ ಮತದಾನವೂ ಅವರದ್ದೇ. ಸಿನಿಮಾಕ್ಕೆ ಕಾದಂಬರಿ ನೀಡಲೊಲ್ಲೆ ಎಂದು ಗಾಂಧಿನಗರಕ್ಕೆ ಬೆನ್ನು ಮಾಡಿದ್ದ ಎಸ್‌.ಎಲ್‌.ಭೈರಪ್ಪನವರನ್ನು ಸಿನಿಮಾಕ್ಕೆ ಕರೆತಂದ ಅಗ್ಗಳಿಕೆ ಸೀತಾರಾಂ, ನಾರಾಯಣ್‌ ಹಾಗೂ ವಿಠ್ಠಲಮೂರ್ತಿಗೆ ಸಲ್ಲಬೇಕು. ಅನಿಕೇತನ ಲಾಂಛನ ಈಗ ಜುಗಾರಿಕ್ರಾಸ್‌ ಬಳಿ ನಿಂತಿದೆ.

    ದೇವೀರಿಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಕವಿತಾ ಲಂಕೇಶ್‌ ತಮ್ಮ ಸಿನಿಮಾಕ್ಕೆ ಆರಿಸಿಕೊಂಡಿದ್ದು , ಅಪ್ಪನ ಅಕ್ಕ ಕಾದಂಬರಿಯನ್ನು . ಬೋಳುವಾರರ ಮುನ್ನುಡಿಯನ್ನು ತೆರೆಗೆ ತಂದ ಪಿ. ಶೇಷಾದ್ರಿ ಗೆಳೆಯರು, ಸಾಸನೂರರ ಶಬ್ಧವೇಧಿಯನ್ನು ಸಿನಿಮಾ ಮಾಡಿದ ರಾಜ್‌ಕ್ಯಾಂಪ್‌ ಇವರೆಲ್ಲ ಸಿನಿಮಾ ಕಥೆಗಾಗಿ ಕಾದಂಬರಿಗಳನ್ನು ಆರಿಸಿಕೊಂಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ, ಸಾಕ್ಷಿ ಪ್ರಕರಣದಲ್ಲಿ ಸರಿಯಾದ ಸಾಕ್ಷಿ ಒದಗಿಸಲು ವಿಫಲರಾದ ಸಿ.ಪಿ. ಯೋಗೇಶ್ವರ್‌ ಹಾಗೂ ಚೈತ್ರದ ಚಿಗುರಿನ ಬಿ. ಶಿವರುದ್ರಯ್ಯ ಜೋಡಿ.

    ಈ ಬಾರಿ ಯೋಗೇಶ್ವರ್‌ ಅವರದ್ದು ಏಕಪಾತ್ರಾಭಿನಯ, ನಿರ್ಮಾಪಕರಾಗಿ ಮಾತ್ರ. ದೇವನೂರು ಮಹಾದೇವ ಅವರ ಕಥೆಯಾಂದನ್ನು ಸಿನಿಮಾ ಆಗಿಸಲು ಹೊರಟಿದ್ದಾರೆ, ಈ ಸಿನಿಮಾದ ಸೈನಿಕ. ದೇವನೂರು ನಿಮಗೆಲ್ಲಾ ಗೊತ್ತಲ್ಲ . ಅಪ್ಪಟ ಈ ನೆಲದ ಬರಹಗಾರರು. ಕಡಿಮೆ ಮಾತಿನ ಈ ಆಸಾಮಿ ಬರೆದದ್ದು 152 ಪುಟಗಳಷ್ಟು ಮಾತ್ರ. ಪಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯನ್ನ . ಅಂಥವರ ಕಥೆಯನ್ನ ಯೋಗೇಶ್ವರ್‌ ಆರಿಸಿದ್ದಾರೆ. ಅವರು ಅಭಿನಂದನೆಗೆ ಅರ್ಹರು.

    ಯೋಗೇಶ್ವರ್‌ ಸಾಹಸಕ್ಕೆ, 1999 ರ ಸಾಲಿನ 3 ನೇ ಅತ್ಯುತ್ತಮ ಸಿನಿಮಾ ರಾಜ್ಯಪ್ರಶಸ್ತಿ ಪಡೆದ ಚೈತ್ರದ ಚಿಗುರು ನಿರ್ದೇಶಕ ಶಿವರುದ್ರಯ್ಯ ಹೆಗಲು ಕೊಟ್ಟಿದ್ದಾರೆ. ಈಗ ಪೂರ್ಣಾವಧಿ ರಾಜಕಾರಣಿಯಾಗಿರುವ ಕುಮಾರ್‌ ಬಂಗಾರಪ್ಪ , ಉದಯ ಟೀವಿಯ ಪಾರ್ವತಿ ಧಾರಾವಾಹಿಯ ಶಿಲ್ಪಾ ಆ ಸಿನಿಮಾದಲ್ಲಿ ನಟಿಸಿದ್ದರು. ಸದಭಿರುಚಿಯ ಸಿನಿಮಾ ಎಂದು ಸಿನಿಮಾ ಪಂಡಿತರಿಂದ ಚೈತ್ರದ ಚಿಗುರು ಹೊಗಳಿಸಿಕೊಂಡಿತ್ತು . ಆ ಮಟ್ಟಿಗೆ ಶಿವರುದ್ರಯ್ಯ ದೇವನೂರರ ಕಥೆಗೆ ನ್ಯಾಯ ಸಲ್ಲಿಸುತ್ತಾರೆಂದು ನಿರೀಕ್ಷಿಸಬಹುದು.

    ಅಂದಹಾಗೆ, ಸಿನಿಮಾ ಆಗುತ್ತಿರುವ ದೇವನೂರರ ಕಥೆ ಯಾವುದು ಅನ್ನುವುದಾಗಲೀ, ತಾರಾಗಣದ ಬಗೆಗಾಗಲೀ ಈವರೆಗೂ ಅಧಿಕೃತ ಮಾಹಿತಿ ಸಿಕ್ಕಿಲ್ಲ . ನಮ್ಮ ಗುಮಾನಿಯ ಪ್ರಕಾರ, ದೇವನೂರರ ನೀಳ್ಗತೆ ಒಡಲಾಳ ಸಿನಿಮಾ ಆಗಲಿದೆ, ಸಾಕವ್ವ ತೆರೆಯ ಮೇಲೆ ತಿಪ್ಪೆ ಕೆದಕಲಿದ್ದಾಳೆ. ಒಡಲಾಳ ಈಗಾಗಲೇ ರಂಗಭೂಮಿಗೆ ಹಳತು . ಉಮಾಶ್ರೀಗೆ ಹೆಸರು ಬಂದದ್ದೇ ಒಡಲಾಳದ ಸಾಕವ್ವನ ಪಾತ್ರದಿಂದ. ಇದರಿಂದಾಗಿ, ಸಿನಿಮಾದಲ್ಲೂ ಉಮಾಶ್ರೀ ನಟಿಸುವರೇ ? ಸಾಧ್ಯತೆಗಳು ಹೆಚ್ಚಾಗಿವೆ.

    ಸಾರಸ್ವತಲೋಕದಿಂದ ಸ್ಯಾಂಡಲ್‌ವುಡ್‌ಗೆ ಬಲ್ಲಾಳರ ಹೆಜ್ಜೆ

    ವ್ಯಾಸರಾಯ ಬಲ್ಲಾಳರ ಜನಪ್ರಿಯ ಕಾದಂಬರಿ ಹೆಜ್ಜೆ , ಸಿನಿಮಾ ಆಗುವುದು ಈಗ ಹೆಚ್ಚೂ ಕಮ್ಮಿ ಖಚಿತವಾಗಿದೆ. ಅಲ್ಲಿಗೆ ಕನ್ನಡ ಸಿನಿಮಾ ಮತ್ತೊಮ್ಮೆ ಕಾದಂಬರಿಗಳತ್ತ ಹೊರಳುತ್ತಿದೆ ಎನ್ನಬಹುದು.

    ಹೆಜ್ಜೆಯನ್ನು ಸಿನಿಮಾಕ್ಕೆ ಅಳವಡಿಸುವ ಸಿದ್ಧೆಗಳು ಭರದಿಂದ ನಡೆಯುತ್ತಿವೆ. ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತೇನೆ, ಕೆರೆಗೆಹಾರವನ್ನು ತೆರೆಗೆ ತರುತ್ತೇನೆ ಎಂದು ಹೇಳುತ್ತಲೇ ಬಂದಿರುವ ಎಚ್‌.ಡಿ. ಕುಮಾರಸ್ವಾಮಿ, ಹೆಜ್ಜೆಯ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳುವ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕರು ಇನ್ನೂ ಪಕ್ಕಾ ಆಗಿಲ್ಲ . ಬಹುತೇಕ, ಕಲಾತ್ಮಕ ಹಾಗೂ ಕಮರ್ಷಿಯಲ್‌ ಎರಡೂ ಪ್ರಕಾರಗಳಲ್ಲಿ ಸೈ ಅನ್ನಿಸಿಕೊಂಡಿರುವ ಟಿ. ನಾಗಾಭರಣ ಹೆಜ್ಜೆಯನ್ನು ನಿರ್ದೇಶಿಸುವ ಸಾಧ್ಯತೆಯಿದೆ.

    ಬಹಳಷ್ಟು ವರ್ಷಗಳ ನಂತರ ಕನ್ನಡ ಚಿತ್ರೋದ್ಯಮ ಮತ್ತೆ ಕಾದಂಬರಿಗಳತ್ತ ಮುಖ ಮಾಡಿದೆ. ಒಳ್ಳೆಯ ಕಾದಂಬರಿಗಳಿಗೆ ಲಕ್ಷ ಸಂಭಾವನೆ ನೀಡಲೂ ನಿರ್ಮಾಪಕರು ಹಿಂಜರಿಯುತ್ತಿಲ್ಲ . ಇದರಿಂದಾಗಿ, ಎಪ್ಪತ್ತರ ದಶಕದ ಸಂಭ್ರಮ ಮರುಕಳಿಸೀತೆಂದು ನಂಬುವುದು ಕಷ್ಟವಾದರೂ, ರಾಡಿಯಾದ ಉದ್ಯಮದಲ್ಲಿ ಒಂದಷ್ಟು ಹೊಸತನ ಮೂಡೀತೆಂದು ಭಾವಿಸಬಹುದು. ಅಂದಹಾಗೆ, ಖ್ಯಾತನಾಮರ ಕಾದಂಬರಿಗಳೆಲ್ಲ ಸಿನಿಮಾ ಆಗುತ್ತಿದ್ದರೂ, ಬಹಳಷ್ಟು ವರ್ಷಗಳಿಂದ, ಇದೋ ಬಂತು ಎಂದು ಭೂತವಾಗಿರುವ ತರಾಸು ಅವರ ದುರ್ಗಾಸ್ತಮಾನಕ್ಕೆ ಮಾತ್ರ ಕಂಕಣ ಕೂಡಿ ಬಂದಿಲ್ಲ . ನಿರ್ಮಾಪಕರು ದುರ್ಗದತ್ತ ಗಮನ ಹರಿಸಬೇಕು.

    English summary
    Kannada film directors choose novels and short stories for the movie
    Thursday, July 4, 2013, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X