'KGF'-2 ಹಿಂದಿಕ್ಕಿ ಬೆಂಗಳೂರಿನಲ್ಲಿ 'ದೇವರ' ಹೊಸ ದಾಖಲೆ.. ಆದ್ರೂ...
ಜ್ಯೂ. ಎನ್‌ಟಿಆರ್ ನಟನೆಯ ಆಕ್ಷನ್ ಥ್ರಿಲ್ಲರ್ 'ದೇವರ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಹಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದೆ. ಬೆಂಗಳೂರಿನಲ್ಲೂ ಕೆಲವೆಡೆ ರಾತ್ರಿ 1 ಗಂಟೆಗೆ ಮೊದಲ ಶೋ ಏರ್ಪಡಿಸಲಾಗಿದೆ. ಸಿನಿರಸಿಕರು ಟಿಕೆಟ್ ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ.
ದೊಡ್ಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರ ಸದಾ ಕಾತರಾಗಿರುತ್ತಾರೆ. ಕೊರಟಾಲ ಶಿವ ನಿರ್ದೇಶನದ 'ದೇವರ' ದೊಡ್ಡಮಟ್ಟದಲ್ಲಿ ನಿರೀಕ್ಷೆ ಮೂಡಿಸಿಲ್ಲ. ಆದರೂ ಸಿನಿಮಾ ನೋಡುವ ಕ್ರೇಜ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನೋಡಿದರೆ ಅದು ಅರ್ಥವಾಗುತ್ತದೆ. ಕರ್ನಾಟಕದಲ್ಲೂ ತಾರಕ್ ಕ್ರೇಜ್ ಜೋರಾಗಿದೆ. ಈ ಹಿಂದೆ ಕೂಡ ಯಂಗ್ ಟೈಗರ್ ಚಿತ್ರಗಳು ಇಲ್ಲಿ ಸದ್ದು ಮಾಡಿವೆ.

'RRR' ಬಿಟ್ರೆ ಜ್ಯೂ. ಎನ್‌ಟಿಆರ್ ಸೋಲೊ ಹೀರೊ ಆಗಿ ನಟಿಸಿದ ಸಿನಿಮಾ ಬಂದು 6 ವರ್ಷ ಕಳೆದಿದೆ. ಅದೇ ಕಾರಣಕ್ಕೆ 'ದೇವರ' ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ತಾರಕ್ ಡಬಲ್ ಧಮಾಕ ಎಂಟರ್‌ಟೈನ್‌ಮೆಂಟ್ ಕೊಡಲು ಬರ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಬೆಂಗಳೂರಿನಲ್ಲಿ ಫಸ್ಟ್ ಮಾರ್ನಿಂಗ್ ಶೋ ಟಿಕೆಟ್ ದರ ಕೂಡ ಹೆಚ್ಚಾಗಿದೆ.
ನಾಲ್ಕು ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟ್ ಬುಕ್ ಮಾಡಿಕೊಂಡಿರುವವರು ಇದ್ದಾರೆ. ಬೆಂಗಳೂರಿನಲ್ಲಿ 'ದೇವರ' ಚಿತ್ರದ ಅರ್ಲಿ ಮಾರ್ನಿಂಗ್ ಶೋಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವಿಚಾರದಲ್ಲಿ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿದೆ. ಸೂರ್ಯ ಹುಟ್ಟುವುದಕ್ಕೂ ಮುನ್ನ ಅತಿಹೆಚ್ಚು ಶೋಗಳಲ್ಲಿ ಪ್ರದರ್ಶನ ಕಂಡ ಕನ್ನಡ ಸಿನಿಮಾ ಅಂದ್ರೆ ಅದು 'KGF'-2. ಆದರೆ ಕೆಲ ಪರಭಾಷಾ ಚಿತ್ರಗಳು ಈ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿವೆ.
ಯಶ್ ನಟನೆಯ 'KGF'-2 ಸಿನಿಮಾ ಬೆಂಗಳೂರಿನಲ್ಲಿ 180ಕ್ಕೂ ಅಧಿಕ ಅರ್ಲಿ ಮಾರ್ನಿಂಗ್ ಶೋಗಳಲ್ಲಿ ಪ್ರದರ್ಶನ ಕಂಡಿತ್ತು. ಕಳೆದ ವರ್ಷ ಬಂದ ದಳಪತಿ ವಿಜಯ್ ನಟನೆಯ 'ಲಿಯೋ' ಈ ದಾಖಲೆ ಮುರಿದಿತ್ತು. ಬರೋಬ್ಬರಿ 220 ಶೋಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ದೇವರ ಈ ದಾಖಲೆಯನ್ನು ಮುರಿದು ಮುನ್ನುತ್ತಿದೆ. ಈಗಾಗಲೇ 'ದೇವರ' ಚಿತ್ರದ 230 ಅರ್ಲಿ ಮಾರ್ನಿಂಗ್ ಶೋಗಳು ನಿಗದಿಯಾಗಿದೆ. ಇದರಲ್ಲಿ ಸಾಕಷ್ಟು ಶೋಗಳ ಟಿಕೆಟ್ ಸೋಲ್ಡ್‌ಔಟ್ ಆಗಿದೆ.
ಪೀಣ್ಯದ ಭಾರತಿ, ಸಂಜಯ ನಗರದ ವೈಭವ್, ಉತ್ತರಹಳ್ಳಿಯ ವೈಷ್ಣವಿ ಸೇರಿದಂತೆ ಕೆಲವೆಡೆ ಮಧ್ಯರಾfರಿ 1 ಗಂಟೆಗೆ 'ದೇವರ' ಮೊದಲ ಪ್ರದರ್ಶನ ಶುರುವಾಗುತ್ತಿದೆ. ಇನ್ನುಳಿದಂತೆ ಬೆಳ್ಳಂಬೆಳಗೆ 4 ಗಂಟೆಗೆ ಸಾಕಷ್ಟು ಕಡೆಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಬಹುದು. 230 ಅರ್ಲಿ ಮಾರ್ನಿಂಗ್ ಶೋ ಪ್ರದರ್ಶನ ಕಂಡು 'ದೇವರ' ಸದ್ದು ಮಾಡುತ್ತಿದೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ತಮಿಳಿನ 'ಗೋಟ್' ಚಿತ್ರ 270 ಶೋಗಳಲ್ಲಿ ಅಭಿಮಾನಿಗಳನ್ನು ರಂಜಿಸಿತ್ತು. ಹಾಗಾಗಿ ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಸಿನಿಮಾ ಇದೆ.
ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಲ್ಲಿ 'ದೇವರ' ಸಿನಿಮಾ ನಿರ್ಮಾಣವಾಗಿದೆ. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಎರಡು ಭಾಗಗಳಾಗಿ 'ದೇವರ' ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮೊದಲ ಭಾಗ ಈ ವಾರ ತೆರೆಗೆ ಬರಲಿದೆ.
ರಾಜಮೌಳಿ ನಿರ್ದೇಶನದಲ್ಲಿ ನಟಿಸಿದ ಹೀರೊಗಳ ಮುಂದಿನ ಸಿನಿಮಾ ಸೋಲುತ್ತದೆ ಎನ್ನುವ ಒಂದು ವಿಚಿತ್ರ ನಂಬಿಕೆ ತೆಲುಗು ಚಿತ್ರರಂಗದಲ್ಲಿದೆ. ಅದನ್ನು ಮೀರಿ 'ದೇವರ' ಸಿನಿಮಾ ಗೆಲ್ಲುತ್ತಾ? ಎನ್ನುವ ಚರ್ಚೆ ಕೂಡ ಶುರುವಾಗಿದೆ. ಇಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











