ದೊಡ್ಡದಾಗಿ ಸಿಗ್ನಲ್ ಕೊಟ್ಟ 'ಡೆವಿಲ್' ಟೀಂ; ಏನಿದೆ ಹೊಸ ಅಪ್‌ಡೇಟ್
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಕೌಂಟ್‌ಡೌನ್ ಶುರು ಮಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಬಹುತೇಕ ಖಚಿತವಾಗಿದೆ.
ಡಿಸೆಂಬರ್ 12ಕ್ಕೆ ಆಕ್ಷನ್ ಥ್ರಿಲ್ಲರ್ 'ಡೆವಿಲ್' ಸಿನಿಮಾ ತೆರೆಗೆ ತರಲು ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ 2 ಸಾಂಗ್ ಬಂದು ಅಭಿಮಾನಿಗಳ ಮನಗೆದ್ದಿದೆ. ಪ್ರಕಾಶ್ ವೀರ್ ನಿರ್ದೇಶಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ದರ್ಶನ್ ಜೊತೆ 'ತಾರಕ್' ಚಿತ್ರವನ್ನು ಅವರು ತೆರೆಗೆ ತಂದಿದ್ದರು.

'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಅವಿನಾಶ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಲು ಅಭಿಮಾನಿಗಳು ಮುಂದಾಗಿದ್ದಾರೆ.
13 ವರ್ಷಗಳ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ಬಿಡುಗಡೆಯಾಗಿ ಗೆದ್ದಿತ್ತು. ಅದೇ ಈಗ ರಿಪೀಟ್ ಆಗುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. 'ಕಾಟೇರ' ಸಕ್ಸಸ್ ಬಳಿಕ ಸಹಜವಾಗಿಯೇ 'ಡೆವಿಲ್' ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ದೇಶ ವಿದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
ಚಿತ್ರದಲ್ಲಿ ವಿಭಿನ್ನ ಗೆಟಪ್‌ಗಳಿರೋ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ರಾಜ್ಯದ ಸಿಎಂ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. 'ಡೆವಿಲ್' ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿದ ಬಳಿಕ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. ನಾಲ್ಕೈದು ತಿಂಗಳು ವಿಚಾರಣಧೀನ ಕೈದಿಯಾಗಿ ಜೈಲಿನಲ್ಲಿದ್ದ ದರ್ಶನ್ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಬೆನ್ನು ನೋವಿನ ನಡುವೆಯೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಆದರೆ ಚಿತ್ರೀಕರಣ ಮುಗಿದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಗಿತ್ತು.
ಈ ಪ್ರಕರಣದಲ್ಲಿ ದರ್ಶನ್ 2ನೇ ಬಾರಿ ಜೈಲು ಸೇರಿ 3 ತಿಂಗಳಾಗುತ್ತಾ ಬಂತು. ಸದ್ಯಕ್ಕೆ ಜಾಮೀನು ಸಿಗುವುದು ಅನುಮಾನ. ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣ ವಿಚಾರಣೆ ಶುರುವಾಗಿದೆ. ಆರೋಪಿಗಳ ಮೇಲೆ ಈಗಾಗಲೇ ದೋಷಾರೋಪ ಹೊರಿಸಲಾಗಿದ್ದು ಅದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಮುಂದಿ ಸಾಕ್ಷಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಬೇಕಿದೆ. ವಕೀಲರ ಮನವಿ ಮೇರೆಗೆ ನವಂಬರ್ 19ಕ್ಕೆ ವಿಚಾರಣೆ ಮುಂದೂಡಲಾಗಿದೆ.
'ಡೆವಿಲ್' ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಾಗ ಹೊಸ ಸಾಂಗ್ ಬಿಡುಗಡೆ ಚಿತ್ರತಂಡ ಮುಂದಾಗಿದೆ. 3ನೇ ಸಾಂಗ್ ರಿಲೀಸ್ ದಿನಾಂಕ, ಸಮಯ ಘೋಷಣೆ ಮಾಡಿದ್ದಾರೆ. ನವೆಂಬರ್ 16 ಅಂದರೆ ಇದೇ ಭಾನುವಾರ ಮಧ್ಯಾಹ್ನ 12 ಗಂಟೆ 3 ನಿಮಿಷಕ್ಕೆ ಹೊಸ ಸಾಂಗ್ ರಿಲೀಸ್ ಆಗಲಿದೆ. ಇದಕ್ಕೂ ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.
ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುವಂತಾಗಿದೆ. ಶೀಘ್ರದಲ್ಲೇ 'ಡೆವಿಲ್' ಟ್ರೈಲರ್ ಲಾಂಚ್ ಕಾರ್ಯಕ್ರಮ ಕೂಡ ನಡೆಯಲಿದೆ. ನಿರ್ಮಾಪಕರು ಹಾಗೂ ತಂಡಕ್ಕೆ ಯಾವುದೇ ಸಮಸ್ಯೆ ಆಗುವುದು ಬೇಡ ಎನ್ನುವ ಕಾರಣಕ್ಕೆ ಜೈಲಿನಲ್ಲಿ ಇದ್ದರೂ ಸಿನಿಮಾ ಬಿಡುಗಡೆ, ಪ್ರಚಾರಕ್ಕೆ ನಟ ದರ್ಶನ್ ಸಲಹೆ ನೀಡಿದ್ದಾರೆ. ಆಪ್ತರ ಮೂಲಕ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.


Click it and Unblock the Notifications











