ಚಕ್ಕಡಿ ಬಂಡಿ ಸವಾರಿ, ಕೆರೆ ಪಕ್ಕ ಊಟ, ನಿದ್ದೆ; ದರ್ಶನ್ ನೈಟ್ ಔಟ್ ಸಿಂಪ್ಲಿ ಸೂಪರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಮಾತ್ರ ಹೀರೊ, ಸೂಪರ್ ಸ್ಟಾರ್ ಎಲ್ಲಾ. ತೆರೆ ಹಿಂದೆ ಸಿಕ್ಕಾಪಟ್ಟೆ ಸಿಂಪಲ್. ತಮ್ಮದೇ ಸ್ನೇಹಿತರ ಬಳಗದಲ್ಲಿ ಕಳೆದು ಹೋಗುತ್ತಾರೆ. ಪ್ರಾಣಿ- ಪಕ್ಷಿ, ಪರಿಸರ ಅಂತ ಕಾಲ ಕಳೆಯುತ್ತಾರೆ. ಮೈಸೂರಿನಲ್ಲಿ ಫಾರ್ಮ್‌ಹೌಸ್ ಹೊಂದಿರುವ ದರ್ಶನ್ ತಮ್ಮ ಬಹುತೇಕ ಸಮಯವನ್ನು ಅಲ್ಲೇ ಕಳೆಯಲು ಬಯಸುತ್ತಾರೆ.
ಕರ್ನಾಟಕ ಅರಣ್ಯ ಇಲಾಖೆ, ಕೃಷಿ ಇಲಾಖೆ ರಾಯಭಾರಿ ಕೂಡ ನಟ ದರ್ಶನ್ ಪ್ರಾಣಿ-ಪಕ್ಷಿ ಕಾಳಜಿ ಎಂಥದ್ದು ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಯಾವುದೇ ಊರಿಗೆ ಹೋದರೂ ಅಲ್ಲಿರು ವಿಶೇಷ ತಳಿ ಜಾರುವಾರು, ಪ್ರಾಣಿ- ಪಕ್ಷಿಗಳನ್ನು ನೋಡಲು ಬಯಸುತ್ತಾರೆ. ಸಾಧ್ಯವಾದರೆ ಕೊಂಡು ತಂದು ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಾರೆ. ಕೆಲ ದಿನಗಳ ಹಿಂದೆ ಕಾಂಕ್ರೀಜ್ ತಳಿಯ ಎತ್ತುಗಳನ್ನು ದರ್ಶನ್ ಕೊಂಡು ತಂದಿದ್ದರು.

ನಟ ದರ್ಶನ್‌ಗೆ ಎಲ್ಲಾ ಹಬ್ಬಗಳಿಗಿಂತ ಸಂಕ್ರಾಂತಿ ಬಹಳ ಅಚ್ಚುಮೆಚ್ಚು. ಕಾರಣ ತಾವು ಸಾಕಿ ಸಲಹುತ್ತಿರುವ ಜಾನುವಾರುಗಳನ್ನು ವಿಶೇಷವಾಗಿ ಸಿಂಗರಿಸಿ, ಪೂಜೆ ಮಾಡಿ ನೋಡುವ ದಿನ ಅದು. ಪ್ರತಿವರ್ಷ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಸುಗ್ಗಿ ಹಬ್ಬ ಜೋರಾಗಿರುತ್ತದೆ. ಇನ್ನು ಈ ವರ್ಷ ಸ್ನೇಹಿತರ ಜೊತೆ ಸೇರಿ ಸಂಕ್ರಾಂತಿ ಹಬ್ಬ ಜೋರಾಗಿ ಆಚರಿಸಿದ್ದರು. ಹಬ್ಬದಲ್ಲಿ ಕಾಂಕ್ರೀಜ್ ತಳಿಯ ಎತ್ತುಗಳು ಹೈಲೆಟ್ ಆಗಿದ್ದವು.
ಕೆಲ ದಿನಗಳ ಹಿಂದೆ ನಟ ದರ್ಶನ್ ಪತ್ನಿ, ಮಗ ಹಾಗೂ ಸ್ನೇಹಿತರ ಜೊತೆ ಎತ್ತಿನ ಬಂಡಿಗಳಲ್ಲಿ ತಮ್ಮ ಫಾರ್ಮ್‌ಹೌಸ್‌ನಿಂದ ಮೈಸೂರು ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ತಾವೇ ಚಕ್ಕಡಿ ಬಂಡಿಯಲ್ಲಿ ಆಪ್ತರನ್ನು ಕರೆದೊಯ್ದಿದ್ದರು. ಅಲ್ಲಿ ತಾವು ದತ್ತು ಪಡೆದ ಮಾದೇಶ ಎನ್ನುವ ಆನೆಯನ್ನು ನೋಡಿ ಖುಷಿಪಟ್ಟಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದೀಗ ಮತ್ತೊಮ್ಮೆ ನಟ ದರ್ಶನ್ ಸ್ನೇಹಿತರ ಜೊತೆ ಚಕ್ಕಡಿ ಬಂಡಿಯಲ್ಲಿ ಸವಾರಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ತಮ್ಮ ಫಾರ್ಮ್‌ಹೌಸ್‌ನಿಂದ ಮಗ ವಿನೀಶ್ ಹಾಗೂ ಸ್ನೇಹಿತರ ಸವಾರಿ ಪಕ್ಕದ ಊರಿನ ಕಡೆಗೆ ಸಾಗಿದೆ. ಸ್ವತಃ ದರ್ಶನ್ ಎತ್ತುಗಳ ಭುಜದ ಮೇಲೆ ನೊಗ ಏರಿಸಿ ಚಕ್ಕಡಿ ಬಂಡಿ ಕಟ್ಟಿದ್ದಾರೆ. ಸಂಜೆ ಊಟಕ್ಕೆ ಬುತ್ತಿಕಟ್ಟಿಕೊಂಡು ಹೊರಟಿದ್ದಾರೆ.
ನಾಲ್ಕೈದು ಬಂಡಿಗಳಲ್ಲಿ ಸವಾರಿ ಸಾಗಿದೆ. ದರ್ಶನ್ ತಮ್ಮ ಪುತ್ರನ ಜೊತೆ ಸಾಗಿ ಹೊರಟಿದ್ದಾರೆ. ಪಕ್ಕದ ಊರಿನ ಕೆರೆಯ ಬಳಿ ಬಿಡಾರ ಹೂಡಿದ್ದಾರೆ. ಅಲ್ಲೇ ಫೈಯರ್ ಕ್ಯಾಂಪ್ ಹಾಕಿ ಊಟ ಮಾಡಿ ಅಲ್ಲೇ ಹಾಸಿಗೆ ಸಿದ್ಧಪಡಿಸಿ ನಿದ್ರೆ ಹೋಗಿದ್ದಾರೆ. ಸ್ಟಾರ್ ನಟನಾದರೂ ಹಳ್ಳಿಯ ಕೆರೆ ದಂಡೆ ಮೇಲೆ ಹೀಗೆ ಸರಳವಾಗಿ ರಾತ್ರಿ ಕಳೆದಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ನೈಟ್ ಔಟ್ ಅಂದ್ರೆ ಬೈಕು, ಕಾರು ಏರಿ ಜನ ಹೊರಟುಬಿಡುತ್ತಾರೆ. ಪಬ್ಬು, ರೆಸ್ಟೋರೆಂಟ್ ಎಂದು ಸುತ್ತಾಡುತ್ತಾರೆ. ಆದರೆ ನಟ ದರ್ಶನ್ ನೈಟ್‌ಔಟ್ ರೀತಿಯೇ ಬೇರೆ. ಸ್ಟಾರ್ ನಟನಾಗಿದ್ದರೂ ದರ್ಶನ್ ಇಷ್ಟು ಸರಳವಾಗಿರುವುದು ಮೆಚ್ಚುವಂಥದ್ದು. ಇನ್ನು ನಟ ದರ್ಶನ್ ಸದ್ಯ 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ರಾಕ್‌ಲೈನ್ ಸ್ಟುಡಿಯೋದಲ್ಲಿ 'ಡೆವಿಲ್' ಶೂಟಿಂಗ್ ಶುರುವಾಗಿದೆ. ಪ್ರಕಾಶ್ ವೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಾವೇ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದ್ದು ಅಕ್ಟೋಬರ್ ವೇಳೆಗೆ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











