ಆಡಿಯೋ ಬಿಡುಗಡೆ ಸಜ್ಜಾದ ಅಜಯ್ ರಾವ್ 'ಧೈರ್ಯಂ'
ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಆಡಿಯೋ ಮುಂದಿನ ವಾರ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹಾಡುಗಳನ್ನ ಬಿಡುಗಡೆ ಮಾಡುವುದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದೆ.
'ಧೈರ್ಯಂ'.....ಕೃಷ್ಣ ಅಜಯ್ ರಾವ್ ನಟನೆಯ ಸಿನಿಮಾ. ಈ ಹಿಂದೆ 'ಮಳೆ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ಶಿವ ತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ.

ಒಬ್ಬ ಮಿಡಲ್ ಕ್ಲಾಸ್ ಹುಡುಗ ಏನಾದರು ಸಾಧಿಸುವುದಕ್ಕೆ ಹೊರಟಾಗ ಅವನಿಗೆ ಆಗುವ ತೊಂದರೆಗಳ ಮೇಲೆ ಸಿನಿಮಾದ ಕಥೆ ಸಾಗಿದೆ. ಜೊತೆಗೆ ಎಲ್ಲರ ಜೀವನದಲ್ಲಿ ಬರುವ ಸಮಸ್ಯೆಗಳನ್ನ ಚಿತ್ರದಲ್ಲಿ ತೋರಿಸಿದ್ದಾರೆ. 'ಧೈರ್ಯಂ' ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಕೂಡ ಇದ್ದು ಅಧಿತಿ ಎನ್ನುವ ಹೊಸ ಹುಡುಗಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

'ಜಿಂಕೆಮರಿ' ಖ್ಯಾತಿಯ ಎಮಿಲ್ 'ಧೈರ್ಯಂ' ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ವಿಜಯ ಪ್ರಕಾಶ್ ಒಂದು ಹಾಡನ್ನ ಹಾಡಿದ್ದಾರೆ. ಸದ್ಯ, ಸಿನಿಮಾದ ಆಡಿಯೋ ರಿಲೀಸ್ ಅದ್ದೂರಿಯಾಗಿ ಮಾಡಬೇಕೆಂದು ನಿರ್ಧರಿಸಿರುವ ಚಿತ್ರತಂಡ ಮುಂದಿನ ವಾರದಲ್ಲಿ ಹಾಡುಗಳನ್ನ ಎಲ್ಲರಿಗೂ ಕೇಳಿಸಲಿದೆ.


Click it and Unblock the Notifications











