Dhananjay: ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ 'ಬಡವ ರಾಸ್ಕಲ್' ಟೀಮ್; ಚಿತ್ರ ಘೋಷಣೆ ಯಾವಾಗ?
ನಟ ರಾಕ್ಷಸ ಎಂದೇ ಖ್ಯಾತಿಯನ್ನು ಪಡೆದಿರುವ ಡಾಲಿ ಧನಂಜಯ್‌ಗೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾವೆಂದರೆ ಅದು ಸೂರಿ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಶನ್‌ನ ಟಗರು ಸಿನಿಮಾ. ಇದೇ ಡಾಲಿ ಧನಂಜಯ್‌ಗೆ ಮತ್ತೊಮ್ಮೆ ಬ್ರೇಕ್ ಕೊಟ್ಟದ್ದು ಹಾಗೂ ಸ್ಟಾರ್ ಪಟ್ಟ ತಂದುಕೊಟ್ಟದ್ದು ಬಡವ ರಾಸ್ಕಲ್ ಸಿನಿಮಾ. ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಸಹ ಬಡ್ತಿ ಪಡೆದ ಧನಂಜಯ್ ಮೊದಲ ಹೂಡಿಕೆಯಲ್ಲಿಯೇ ಗೆದ್ದು ಬೀಗಿದ್ದರು.
ಹೌದು, 2021ರಲ್ಲಿ ತೆರೆಗೆ ಬಂದ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಬಡವ ರಾಸ್ಕಲ್ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿತ್ತು. ಮಿಡಲ್ ಕ್ಲಾಸ್ ಫ್ಯಾಮಿಲಿಯ ನಾಯಕ ಶ್ರೀಮಂತ ಕುಟುಂಬದ ನಾಯಕಿಯನ್ನು ಪ್ರೀತಿಸುವ ಸಾಮಾನ್ಯ ಕಥೆಯನ್ನು ಹೊಂದಿದ್ದ ಬಡವ ರಾಸ್ಕಲ್ ತನ್ನ ಎಂಟರ್‌ಟೈನಿಂಗ್ ಸ್ಕ್ರೀನ್‌ಪ್ಲೇನಿಂದಾಗಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತ್ತು.

ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಜತೆಗೆ ರಂಗಾಯಣ ರಘು ಹಾಗೂ ನಾಗಭೂಷಣ್ ನಟನೆ ಸಹ ಸಿನಿ ರಸಿಕರ ಮನ ಗೆದ್ದಿತ್ತು. ಲಾಕ್‌ಡೌನ್ ತೆರವುಗೊಂಡ ಬಳಿಕ ತೆರೆಕಂಡಿದ್ದ ಈ ಚಿತ್ರವನ್ನು ಸಿನಿ ರಸಿಕರು ಒಂದೊಳ್ಳೆ ಎಂಟರ್‌ಟೈನ್‌ಮೆಂಟ್ ಇರುವ ಚಿತ್ರ ಎಂದು ಮೆಚ್ಚಿಕೊಂಡಿದ್ದರು. ಇನ್ನು ನಟರುಗಳ ಜತೆಗೆ ಈ ಸಿನಿಮಾದಿಂದ ಹೆಚ್ಚಿನ ಹೆಸರು ಮಾಡಿದ್ದು ಚಿತ್ರದ ನಿರ್ದೇಶಕ ಶಂಕರ್ ಗುರು.
ಹೌದು, ಶಂಕರ್ ಗುರು ತಮ್ಮ ನಿರ್ದೇಶನಕ್ಕೆ ಸಿನಿ ಪ್ರೇಮಿಗಳಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದರು. ಹೀಗೆ ಬೃಹತ್ ಮಟ್ಟದಲ್ಲಿ ಗೆದ್ದಿದ್ದ ಬಡವ ರಾಸ್ಕಲ್ ತಂಡ ಇದೀಗ ಮತ್ತೊಮ್ಮೆ ಒಂದಾಗುತ್ತಿದೆ. ಹೌದು, ಹೊಸ ಸಿನಿಮಾವೊಂದನ್ನು ಮಾಡಲು ಶಂಕರ್ ಗುರು ಹಾಗೂ ಡಾಲಿ ಧನಂಜಯ್ ಮತ್ತೊಮ್ಮೆ ಜತೆಯಾಗಿದ್ದು, ಚಿತ್ರ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ನಾಳೆ ( ಆಗಸ್ಟ್ 23 ) ಘೋಷಣೆಯಾಗಲಿದೆ.
ಇನ್ನು ಮಾಧ್ಯಮದ ಜತೆ ಮಾತನಾಡಿರುವ ನಿರ್ದೇಶಕ ಶಂಕರ್ ಗುರು ಬಡವ ರಾಸ್ಕಲ್ ಚಿತ್ರದಲ್ಲಿ ಮಧ್ಯಮ ವರ್ಗದ ನಾಯಕನ ಲವ್ ಸ್ಟೋರಿ ಜತೆಗೆ ಫ್ಯಾಮಿಲಿ ಬಾಂಡಿಂಗ್ ಕುರಿತು ಕಥೆ ಬರೆಯಲಾಗಿತ್ತು. ಆದರೆ ಈ ಬಾರಿ ಅಜ್ಜಿ ಹಾಗೂ ಮೊಮ್ಮಗನ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ವಿದೇಶದಲ್ಲಿ ನೆಲೆಸಿರುವ ನಾಯಕ ಕಾರಣಾಂತರಗಳಿಂದ ನಾಡಿಗೆ ಮರಳಲಿದ್ದು, ನಾಯಕ ವಿದೇಶದಲ್ಲಿ ಏನು ಮಾಡುತ್ತಾ ಇರುತ್ತಾನೆ ಹಾಗೂ ಆತ ತಾಯ್ನಾಡಿಗೆ ಯಾಕೆ ಮರಳುತ್ತಾನೆ ಎಂಬುದೇ ಚಿತ್ರದ ಆಸಕ್ತಿಕರ ಪಾಯಿಂಟ್ ಎಂದು ಶಂಕರ್ ಗುರು ಹೇಳಿದ್ದಾರೆ.
ಇನ್ನು ನಟ ಧನಂಜಯ್‌ಗೆ ತಮ್ಮ ಎರಡನೇ ಸಿನಿಮಾ ಮಾಡುತ್ತಿರುವ ಶಂಕರ್ ಗುರು ಡಾಲಿ ನಟನೆ ಬಗ್ಗೆ ವಿಶೇಷವಾಗಿ ಮಾತನಾಡಿದ್ದು, ಈ ಬಾರಿ ಧನಂಜಯ್‌ಗೆ ಆಕ್ಷನ್ ಎಂಟರ್‌ಟೈನರ್ ಕಥೆ ಬರೆದಿದ್ದೇನೆ, ಧನಂಜಯ್ ಅವರಿಗೆ ಕಥೆ ಬರೆಯುವುದೆಂದರೆ ಖುಷಿ, ಏಕೆಂದರೆ ಅವರು ಯಾವುದೇ ಪಾತ್ರವನ್ನಾದರೂ ನೀರು ಕುಡಿಯುವ ಹಾಗೆ ಮಾಡಿಬಿಡ್ತಾರೆ ಎಂದು ಸಂತಸ ಹೊರಹಾಕಿದ್ದಾರೆ.


Click it and Unblock the Notifications











