ಧನಂಜಯ್ ವೇದಿಕೆ ಹತ್ತಿದ ಕೂಡಲೇ 'ಜೈ ಡಿಬಾಸ್' ಎಂದವರಿಗೆ ಡಾಲಿ ಕೊಟ್ರು ಅದ್ಭುತ ರಿಪ್ಲೈ!
ನಟ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬೇರೆ ನಟರ ಕಾರ್ಯಕ್ರಮದಲ್ಲಿ ಜೈಕಾರ ಹಾಕುವುದು ಹೊಸತೇನಲ್ಲ. ಚಿತ್ರರಂಗದ ಇತರೆ ಹಲವು ನಟರ ಕಾರ್ಯಕ್ರಮಗಳಲ್ಲಿ ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿದ ಸಾಕಷ್ಟು ಉದಾಹರಣೆಗಳಿವೆ. ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‌ಕುಮಾರ್ ರೀತಿಯ ದೊಡ್ಡ ಸ್ಟಾರ್ ನಟರ ಚಿತ್ರಗಳ ಆಡಿಯೊ ಬಿಡುಗಡೆ ಹಾಗೂ ಚಿತ್ರೀಕರಣದ ಸ್ಥಳಗಳಲ್ಲೂ ಜೈ ಡಿ ಬಾಸ್ ಎಂದು ಡಿ ಫ್ಯಾನ್ಸ್ ಕೂಗಿದ್ದೂ ಉಂಟು.
ಇದೇ ಮಾದರಿಯಲ್ಲಿ ಇತ್ತೀಚೆಗಷ್ಟೆ ನಡೆದ ಡಾಲಿ ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲೂ ಸಹ ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ಡಿಬಾಸ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ಚಂದನವನದಲ್ಲಿ ಫ್ಯಾನ್ ವಾರ್ ಅತಿರೇಕಕ್ಕೆ ತಲುಪಿರುವ ಸಂದರ್ಭದಲ್ಲಿ ಬೇರೆ ನಟನ ಕಾರ್ಯಕ್ರಮದಲ್ಲಿ ಈ ರೀತಿ ದರ್ಶನ್‌ಗೆ ಅವರ ಅಭಿಮಾನಿಗಳು ಜೈಕಾರ ಹಾಕಿದ್ದಕ್ಕೆ ಧನಂಜಯ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ನೆರೆದಿದ್ದವರಲ್ಲಿ ಇತ್ತು.
ಧನಂಜಯ್ ವೇದಿಕೆ ಏರುತ್ತಿದ್ದಂತೆ ದರ್ಶನ್ ಅಭಿಮಾನಿಗಳು 'ಡಿ ಬಾಸ್ ಡಿ ಬಾಸ್' ಎಂದು ಘೋಷಣೆ ಕೂಗಿದರು. ವೇದಿಕೆ ಏರಿ ಮೈಕ್ ಕೈಗೆತ್ತಿಕೊಂಡ ಕೂಡಲೇ ಈ ಘೋಷಣೆ ಬಗ್ಗೆಯೇ ಪ್ರತಿಕ್ರಿಯಿಸಿದ ಧನಂಜಯ್ ನೀಡಿದ ಉತ್ತರ ಇದೀಗ ಎಲ್ಲರ ಮನಗೆದ್ದಿದೆ. ಧನಂಜಯ್ ನೀಡಿದ ಉತ್ತರಕ್ಕೆ ಸಿನಿ ರಸಿಕರು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾಲಿ ಕೊಟ್ಟ ಅದ್ಭುತ ಉತ್ತರವಿದು
ವೇದಿಕೆ ಏರಿದ ಕೂಡಲೇ ಬಾಸ್ ಬಾಸ್ ಡಿ ಬಾಸ್ ಎಂಬ ಘೋಷಣೆ ಹೆಚ್ಚಾಗಿ ಕೇಳಿ ಬಂದಿದ್ದನ್ನು ಕಂಡ ಕೂಡಲೇ ಮಾತು ಆರಂಭಿಸಿದ ಧನಂಜಯ್ "ಸೂಪರ್ ಅಣ್ಣ. ಇನ್ನೂ ಜೋರಾಗಿ ಕೂಗಿ. ಎಲ್ಲಾ ಕಲಾವಿದರ ಹೆಸರನ್ನೂ ಕೂಗಿ. ನಾವು ಯಾರ್ ಯಾರನ್ನು ನೋಡ್ಕೊಂಡು ಬೆಳೆದಿದ್ದೀವಿ, ಯಾರ್ ಯಾರನ್ನು ನೋಡ್ಕೊಂಡು ಕಲಿತಿದ್ದೀವಿ ಎಲ್ಲಾ ಕಲಾವಿದರ ಹೆಸರೂ ಜೋರಾಗಿ ಬರಲಿ. ಎಲ್ರುನೂ ಪ್ರೀತಿಸಿ, ಎಲ್ಲರೂ ಚೆನ್ನಾಗಿರೋಣ. ಕನ್ನಡ ಚಿತ್ರರಂಗ ಒಂದು ಅದ್ಭುತವಾದ ಕುಟುಂಬವಾಗಿ ಬೆಳೆಯಲಿ ಯಾವಾಗಲೂ" ಎಂದು ಉತ್ತರಿಸಿ ಒಂದೊಳ್ಳೆ ಖಡಕ್ ಸಂದೇಶ ನೀಡಿದರು.

ಮದುವೆ ಬಗ್ಗೆ ಧನಂಜಯ್ ಹೇಳಿದ್ದಿಷ್ಟು
ಇನ್ನು ಧನಂಜಯ್ ಕುಚಿಕು ಗೆಳೆಯ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಷಯದ ಕುರಿತಾಗಿ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಮಾತನಾಡಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಇಟ್ಟರು. ಇದಕ್ಕೆ ಉತ್ತರಿಸಿದ ನಟ ಧನಂಜಯ್ ನಾನು ಮದುವೆ ಆಗ್ಬೇಕಾ? ಎಂದು ಅಭಿಮಾನಿಗಳನ್ನೇ ಕೇಳಿದರು. ಅಭಿಮಾನಿಗಳಲ್ಲಿ ಕೆಲವರು ಮದುವೆ ಆಗಿ ಎಂದರೆ ಕೆಲವರು ಬೇಡ ಎಂದರು. ಕೊನೆಗೆ ಡಾಲಿ, ''ಅನುಶ್ರೀ ಅವರು ಮದುವೆ ಆದ ಬಳಿಕ ನಾನು ಮದುವೆ ಆಗ್ತೀನಿ ಎಂದರು. ಅನುಶ್ರೀ ತಮ್ಮ ಮದುವೆ ಘೋಷಿಸಿದ ಕೂಡಲೇ ನಾನು ನನ್ನ ಮದುವೆ ಯಾವಾಗ ಎಂಬುದನ್ನು ಹೇಳ್ತೀನಿ'' ಎಂದರು.

ವರ್ಷಾಂತ್ಯಕ್ಕೆ ಜಮಾಲಿಗುಡ್ಡ
1990ರ ಕಾಲದ ಕಥೆಯಾದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ಧನಂಜಯ್, ಅದಿತಿ ಪ್ರಭುದೇವ, ಯಶ್ ಶೆಟ್ಟಿ, ಭಾವನಾ ಹಾಗೂ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದು, ಕುಶಾಲ್ ಗೌಡ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 30ರ ಶುಕ್ರವಾರದಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಿನಿ ರಸಿಕರ ಗಮನ ಸೆಳೆದಿದ್ದು ಈ ಚಿತ್ರ ಇಯರ್ ಎಂಡ್ ಬ್ಲಾಕ್ ಬಸ್ಟರ್ ಆಗುತ್ತಾ ಕಾದುನೋಡಬೇಕಿದೆ.


Click it and Unblock the Notifications











