ಒಳ್ಳೆ ಸಿನಿಮಾ ಕೈ ಬಿಡಲಿಲ್ಲ ಕನ್ನಡ ಪ್ರೇಕ್ಷಕರು: ವಿದೇಶಗಳತ್ತ 'ಡೇರ್ ಡೆವಿಲ್ ಮುಸ್ತಾಫಾ'
ಡಾಲಿ ಧನಂಜಯ ಬೆಂಬಲವಾಗಿ ನಿಂತಿರುವ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಗೆಲುವಿನ ಹಾದಿಗೆ ಹೊರಳಿದೆ. ಆರಂಭದಲ್ಲಿ ಪ್ರೇಕ್ಷಕರ ಬರ ಎದುರಿಸಿದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿದೆ. ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕನ್ನಡ ಚಿತ್ರರಂಗದಲ್ಲಿ ಇದು ವಿನೂತನ ಪ್ರಯತ್ನ. ಪೂರ್ಣಚಂದ್ರ ತೇಜಸ್ವಿ ಬರೆದ ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ.
ನಿರ್ದೇಶಕ ಶಶಾಂಕ್ ಸೊಗ್ಗಾಲ್ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ನಿರ್ದೇಶಿಸಿ ಗೆದ್ದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ 100 ಜನ ಅಭಿಮಾನಿಗಳು ಸೇರಿ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಮೌತ್ ಟಾಕ್‌ನಿಂದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿದೆ. ಆದಿತ್ಯಾ ಆಶ್ರೀ, ಅಭಯ್, ಸುಪ್ರೀತ್ ಭಾರಧ್ವಜ್, ಆಶಿತ್ ಶ್ರೀವತ್ಸ, ಪ್ರೇರಣಾ, ಎಂ. ಎಸ್ ಉಮೇಶ್, ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು ಚಿತ್ರದಲ್ಲಿ ನಟಿಸಿದ್ದಾರೆ.

ತೇಜಸ್ವಿಯವರ ಕಥೆಯನ್ನು ಸೊಗಸಾಗಿ ತೆರೆಗೆ ತರುವಲ್ಲಿ ಶಶಾಂಕ್ ಸೊಗ್ಗಾಲ್ ಅಂಡ್ ಟೀಮ್ ಗೆದ್ದಿದೆ. ಕಳೆದ ವಾರ ರಿಲೀಸ್ ಆಗಿದ್ದ ಸಿನಿಮಾ ಎರಡನೇ ವಾರಂತ್ಯದ ವೇಳೆಗೆ ಟೇಕ್‌ಹಾಫ್ ಆಗಿದೆ. ಸಿನಿಮಾ ನೋಡಿದವರೆಲ್ಲಾ ಒಳ್ಳೆ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಬಿಗಿದಪ್ಪಿದ ಪ್ರೇಕ್ಷಕರು
'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಅಮೋಘ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರು ಬಿಗಿದಪ್ಪಿ ಚಿತ್ರವನ್ನು ಕೊಂಡಾಡುತ್ತಿದ್ದಾರೆ. ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ಆರೇಳು ತಿಂಗಳಿನಿಂದ ಥಿಯೇಟರ್ ನಲ್ಲಿ ಯಾವ ಸಿನಿಮಾಗೂ ಸಿಗದ ರೆಸ್ಪಾನ್ಸ್ 'ಮುಸ್ತಾಫಾ'ನ ಪಾಲಾಗಿದೆ.

ವಿದೇಶಗಳಲ್ಲಿ ಮುಸ್ತಾಫಾ
ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಸೆಂಟರ್‌ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪೂಚಂತೇ ಪ್ರಪಂಚದಲ್ಲಿ ಪಯಣಿಸಿರುವ ಪ್ರೇಕ್ಷಕಪ್ರಭು ಇದು ಹೃದಯ ಬೆಸೆಯುವ ಕಥೆ. ಪ್ರತಿಯೊಬ್ಬರು ಇಂತಹ ಚಿತ್ರ ಮಿಸ್ ಮಾಡದೇ ನೋಡಬೇಕು ಎನ್ನುತ್ತಿದ್ದಾರೆ. ಚಿತ್ರಕ್ಕೆ ಈ ಮಟ್ಟಿಗಿನ ವಿಮರ್ಶೆ ಹಾಗೂ ಬೇಡಿಕೆ ಸಿಗುತ್ತಿರುವ ಬೆನ್ನಲ್ಲೆ ವಿದೇಶದಲ್ಲಿ ಡೇರ್ ಡೆವಿಲ್ ಮುಸ್ತಾಫಾನ ದರ್ಶನಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ವಾರ ಅಮೆರಿಕಾ ಹಾಗೂ ಯುರೋಪ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮುಂದಿನ ವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಸೇರಿದಂತೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಪ್ರೀಮಿಯರ್ ಶೋಗೆ 1 ರೂ. ಟಿಕೆಟ್
ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಚಿತ್ರವನ್ನು ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ರಿಲೀಸ್ ಮಾಡಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಸಿನಿಮಾಮರ ಬ್ಯಾನರ್‌ನಲ್ಲಿ 'ಡೇರ್ ಡೆವಿಲ್ ಮುಸ್ತಾಫಾ' ಚಿತ್ರ ನಿರ್ಮಾಣವಾಗಿದೆ. ಪ್ರೇಕ್ಷಕರನ್ನು ಸೆಳೆಯಲು 1 ರೂ.ಗೆ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.

ಗಣ್ಯರಿಂದ ಸಿನಿಮಾ ವೀಕ್ಷಣೆ
ಸಂಸದ ಪ್ರತಾಪ್ ಸಿಂಹ, ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಸಾಕಷ್ಟು ಗಣ್ಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಬುಕ್‌ಮೈ ಶೋನಲ್ಲಿ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈ ವೀಕೆಂಡ್‌ನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಭಾನುವಾರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.


Click it and Unblock the Notifications











