"ಏಯ್ ನೀ ಊರಿಗೆ ದೊಡ್ಡವ ಅಂತ ಹಾರಾಡಬೇಡ.. ನಾನೇ ದೊಡ್ಡವ"; ಖಡಕ್ ಡೈಲಾಗ್ ಹೊಡೆದ ಧನಂಜಯ್!

ಕಳೆದ ವರ್ಷ ಐದಾರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದ್ದ ಡಾಲಿ ಧನಂಜಯ್ ಈ ವರ್ಷ ಹೊಯ್ಸಳ ಮೂಲಕ ಹಿಟ್ ಬಾರಿಸುವ ತವಕದಲ್ಲಿದ್ದಾರೆ. ಇದು ಧನಂಜಯ್ ಸಿನಿಮಾ ಬದುಕಿನ 25ನೇ ಸಿನಿಮಾವಾಗಿದ್ದು, ಈ ಮೈಲಿಗಲ್ಲಿನ ಸಿನಿಮಾ ಮೂಲಕ ದಾಖಲೆಯ ಮೈಲಿಗಲ್ಲನ್ನು ತಂಡ ನೆಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಈ ಹಿಂದೆ ಇದೇ ಧನಂಜಯ್‌ಗೆ ರತ್ನನ್ ಪ್ರಪಂಚ ಎಂಬ ಸಿನಿಮಾವನ್ನು ನಿರ್ಮಿಸಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಳಿಸಿ ಗೆದ್ದಿದ್ದ ಕೆ ಆರ್ ಜಿ ಸ್ಟುಡಿಯೊಸ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದರೆ, ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಗುರುದೇವ್ ಎಂಬ ಪಾತ್ರವನ್ನು ನಿರ್ವಹಿಸಿದ್ದರೆ, ನಾಯಕಿ ಗಂಗಾ ಪಾತ್ರದಲ್ಲಿ ಅಮೃತಾ ಐಯ್ಯಂಗಾರ್ ನಟಿಸಿದ್ದಾರೆ.
ಇನ್ನು ಈ ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿದೆ. ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿರುವ ಹೊಯ್ಸಳ ಚಿತ್ರತಂಡ ಮೊದಲಿಗೆ 'ಸಳ ಸಳ ಹೊಯ್ಸಳ' ಎಂಬ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿತ್ತು. ಈ ಹಾಡು ಒಂದು ರೇಂಜಿಗೆ ವೈರಲ್ ಆಗಿತ್ತು. ಬಳಿಕ ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿಬಂದಿದ್ದ 'ಅರೆ ಇದು ಎಂಥ ಭಾವನೆ' ಎಂಬ ಹಾಡು ಬಿಡುಗಡೆ ಮಾಡಿ ಕೇಳುಗರ ಮನ ಕದ್ದಿತ್ತು.
ಹೀಗೆ ಸದ್ದು ಮಾಡಲು ಆರಂಭಿಸಿರುವ ಹೊಯ್ಸಳ ಚಿತ್ರ ಇದೇ ತಿಂಗಳ 30ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದ್ದು, ಬಿಡುಗಡೆಗೆ ದಿನಕ್ಕೆ ದಿನಗಣನೆ ಆರಂಭಗೊಂಡಿದೆ. ಹೀಗಾಗಿ ಹೊಯ್ಸಳ ಚಿತ್ರತಂಡ ಚಿತ್ರ ಬಿಡುಗಡೆಯಾಗುವ ಮುನ್ನವೇ ರಾಜ್ಯದ ಹಲವು ಊರುಗಳಿಗೆ ಪ್ರವಾಸವನ್ನು ಕೈಗೊಂಡು, ಅಲ್ಲಿ ಹೊಯ್ಸಳ ಚಿತ್ರದ ಪ್ರಮೋಷನ್ ಮಾಡ್ತಿದೆ.
ನಿನ್ನೆಯಿಂದ ( ಮಾರ್ಚ್ 10 ) ಈ ಪ್ರವಾಸವನ್ನು ಆರಂಭಿಸಿರುವ ಹೊಯ್ಸಳ ಚಿತ್ರತಂಡ ಮೊದಲಿಗೆ ಅಫ್ಜಲಪುರ ಹಾಗೂ ಕಲಬುರ್ಗಿಗೆ ಭೇಟಿ ನೀಡಿದೆ. ಅಫ್ಜಲಪುರದಲ್ಲಿ ನಡೆದ ಹೊಯ್ಸಳ ಪ್ರಚಾರದಲ್ಲಿ ಮಾತನಾಡಿದ ಧನಂಜಯ್ ಚಿತ್ರದ ಎಕ್ಸ್‌ಕ್ಲೂಸಿವ್ ಡೈಲಾಗ್ ಒಂದನ್ನು ವೇದಿಕೆ ಮೇಲೆ ಹೇಳಿದ್ದಾರೆ. ಹೊಯ್ಸಳ ಚಿತ್ರದ ಸಂಭಾಷಣೆ ನಿಮಗಾಗಿ ಎಂದು ಮಾತು ಆರಂಭಿಸಿದ ಧನಂಜಯ್ "ಏಯ್ ನೀನ್ ಊರಿಗೆ ದೊಡ್ಡವ ಅಂತ ಹಾರಾಡಬೇಡ, ದೊಡ್ಡವರಿಗೆಲ್ಲ ಟಕ್ಕರ್ ಕೊಟ್ಕೊಂಡು ಅವರ ಕಡೆನೇ ಶಹಬ್ಬಾಷ್‌ಗಿರಿ ತಕ್ಕೊಂಡು ಇಲ್ಲಿ ತನಕ ಬಂದೇನಿ, ಈಗ ನನಗೆ ನಾನಾ ದೊಡ್ಡವ" ಎಂದು ಡೈಲಾಗ್ ಹೊಡೆದರು.
ಧನಂಜಯ್ ಈ ಡೈಲಾಗ್ ಹೊಡೆಯುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್‌ನಲ್ಲಿಯೂ ಸಹ ಇದೇ ರೀತಿಯ ಡೈಲಾಗ್ ಇದ್ದವು. ಅಚ್ಯುತ್ ಕುಮಾರ್ ಧನಂಜಯ್ ಪಾತ್ರದ ಕುರಿತು ಹೇಳುವ ಡೈಲಾಗ್ ಇದಾಗಿದ್ದು, "ಒಳ್ಳೆಯವನ, ಕೆಟ್ಟವನಾ ಜಡ್ಜ್‌ಮೆಂಟ್‌ಗೆ ಸಿಗವಲ್ದು, ಆದ್ರ ಮಂದಿಗೆ ಭಾಳ ಫೇವರಿಟ್ ಅದಾನಾ" ಎಂದು ಗುರುದೇವ್ ಪಾತ್ರದ ಬಗ್ಗೆ ಸಣ್ಣ ಪರಿಚಯವನ್ನು ಮಾಡಿತ್ತು.
ಇನ್ನು ಇದೇ ಟೀಸರ್‌ನಲ್ಲಿ "ಹೆಸರಿಗೆ ಗುರುದೇವ್. ಗುರುವಿಗೆ ಇರಬೇಕಾದ ಸಹನೆನೂ ಇಲ್ಲ. ದೇವರಿಗೆ ಇರಬೇಕಾದ ದಯೆನೂ ಇಲ್ಲ. ಅದಕ್ಕೆ ಅವನನ್ನ ನಮ್ಮ ಡಿಪಾರ್ಟ್‌ಮೆಂಟ್ ಅವರು ಹೊಯ್ಸಳ ಅಂತ ಕರೀತಿವಿ" ಎಂಬ ಡೈಲಾಗ್ ಸಹ ಇದೆ. ಸದ್ಯ ಟೀಸರ್‌ನಲ್ಲಿನ ಈ ಎರಡು ಡೈಲಾಗ್ ಹಾಗೂ ಅಫ್ಜಲಪುರದ ಕಾರ್ಯಕ್ರಮದಲ್ಲಿ ಧನಂಜಯ್ ಹೇಳಿರುವ ಡೈಲಾಗ್ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಇಷ್ಟವಾಗಿದೆ.


Click it and Unblock the Notifications











