»   » ಕನ್ನಂಬಾಡಿಯ ವಿಶ್ವೇಶ್ವರಯ್ಯ ಬೆಳ್ಳಿತೆರೆಗೆ?ಹೌದೆನ್ನುತ್ತಾರೆ

ಕನ್ನಂಬಾಡಿಯ ವಿಶ್ವೇಶ್ವರಯ್ಯ ಬೆಳ್ಳಿತೆರೆಗೆ?ಹೌದೆನ್ನುತ್ತಾರೆ

Posted By: Staff
Subscribe to Filmibeat Kannada

ಸರ್‌. ಎಂ. ವಿಶ್ವೇಶ್ವರಯ್ಯ- ಕೋಟಿ ನಿರ್ಮಾಪಕ ಧನರಾಜ್‌ ಅವರ ಮುಂದಿನ ಚಿತ್ರದ ಶೀರ್ಷಿಕೆಯೇ ಇದಾದರೂ ಅಚ್ಚರಿಯಿಲ್ಲ. ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಎಚ್‌ಟೂಒ" ಚಿತ್ರ ಮುಗಿಯುವುದಕ್ಕೆ ಮುನ್ನವೇ ಧನರಾಜ್‌ ತಲೆಯಲ್ಲಿ ವಿಶ್ವೇಶ್ವರಯ್ಯ ಕುಣಿಯುತ್ತಿದ್ದಾರೆ. ಅಣೆಕಟ್ಟುಗಳ ಸರದಾರ ಎಂದೇ ಖ್ಯಾತರಾದ ಈ ಮಹಾನ್‌ ಶಿಲ್ಪಿಯ ಬಗ್ಗೆ ಇದುವರೆಗೆ ಯಾರೂ ಚಿತ್ರವೊಂದನ್ನು ನಿರ್ಮಿಸಿಲ್ಲ.

ವಿಶ್ವೇಶ್ವರಯ್ಯ ಅವರ ಬದುಕು ಮತ್ತು ಸಾಧನೆಯಲ್ಲಿ ಹಲವಾರು ತಿರುವುಗಳೂ, ಅಕಸ್ಮಿಕಗಳೂ ಇರುವುದರಿಂದ ಇದನ್ನು ಕಥಾಚಿತ್ರವಾಗಿಯೇ ನಿರ್ಮಿಸಬೇಕೆನ್ನುವುದು ಧನರಾಜ್‌ ಕನಸು. ಇದಕ್ಕೆ ಉದಾಹರಣೆಯಾಗಿ ಅವರ ಮುಂದೆ ದಾದಾಸಾಹೇಬ ಅಂಬೇಡ್ಕರ್‌ ಚಿತ್ರವಿದೆ. ಅಲ್ಲಿ ಅಂಬೇಡ್ಕರ್‌ ಪಾತ್ರವನ್ನು ಮಲೆಯಾಳಂ ಸೂಪರ್‌ಸ್ಟಾರ್‌ ಮುಮ್ಮೂಟ್ಟಿ ನಿರ್ವಹಿಸಿದ್ದರು. ಅದೇ ರೀತಿ ವಿಶ್ವೇಶ್ವರಯ್ಯ ಪಾತ್ರವನ್ನು ವಿಷ್ಣುವರ್ಧನ್‌ರಂಥ ಜನಪ್ರಿಯ ನಟ ನಿರ್ವಹಿಸಿದರೆ ಚಿತ್ರಕ್ಕೊಂದು ತೂಕ ಬರುತ್ತದೆ ಅನ್ನೋದು ಧನರಾಜ್‌ ಲೆಕ್ಕಾಚಾರ.

ವಿಶ್ವೇಶ್ವರಯ್ಯನವರಿಂದ ಉಪಕೃತರಾದ ಜನರ ಸಂಖ್ಯೆಯೇನೂ ಕಡಿಮೆಯಿಲ್ಲ . ಆವರೇ ಪ್ರೇಕ್ಷಕರಾದರೆ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸಾದೀತು, ಜೊತೆಗೆ ಪ್ರಶಸ್ತಿಗಳಂತೂ ಗ್ಯಾರಂಟಿ. ಆದರೆ ಧನರಾಜ್‌ ಇದನ್ನು ಆ ದೃಷ್ಟಿಯಿಂದ ಮಾಡುತ್ತಿಲ್ಲ . ಅವರ ಪ್ರಕಾರ ಇದು ಆ ಮಹಾನ್‌ ವ್ಯಕ್ತಿಗೆ ಅವರು ತೋರಿಸುತ್ತಿರುವ ಗೌರವ.

ಇದರ ಜೊತೆಗೆ ಮಕ್ಕಳ ಚಿತ್ರವೊಂದನ್ನು ನಿರ್ಮಿಸುವ ಕನಸೂ ಇದೆ. ಈ ಹಿಂದೆ ಮಕ್ಕಳ ಸಾಕ್ಷಿ ಚಿತ್ರವನ್ನು ನಿರ್ಮಿಸಿ ಲಕ್ಷಾಂತರ ರುಪಾಯಿ ಕಳಕೊಂಡಿದ್ದ ಧನರಾಜ್‌ಗೆ ಇನ್ನೂ ಆ ಆಸೆ ಹೋಗಿಲ್ಲ . ಮಕ್ಕಳ ಬಗ್ಗೆ ಅವರಿಗಿರುವ ಪ್ರೀತಿ ನಿರಂತರ. ಈ ಸಾರಿ ಅವರಿಗೊಂದು ಕಥಾವಸ್ತು ಅನಾಯಾಸವಾಗಿ ಒದಗಿಬಂದಿದೆ. ಮೈಸೂರಿನ ಭಿಕ್ಷುಕ ಬಾಲಕಿ ನಾಗರತ್ನಾ ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್‌ಕ್ಲಾಸ್‌ ಬಂದು ರಾಜ್ಯಾದ್ಯಂತ ಸುದ್ದಿ ಮಾಡಿರುವುದು ಧನರಾಜ್‌ ಗಮನ ಸೆಳೆದಿದೆ. ಆ ಚಿತ್ರಕ್ಕೆ ನಾಗರತ್ನಾ ಎಂದೇ ಟೈಟಲ್‌ ಇಟ್ಟರೂ ಅಚ್ಚರಿಯಿಲ್ಲ .

ಈ ನಡುವೆ ಎಚ್‌ಟೂಒ ಚಿತ್ರಕ್ಕೆ ಕ್ಲೈಮಾಕ್ಸ್‌ ಮಾತ್ರ ಬಾಕಿಯಿದೆ. ಅದನ್ನು ಕುಂದಾಪುರದಲ್ಲಿ ನಡೆಸುವ ಯೋಜನೆಯಿದೆ. ಉಪೇಂದ್ರ, ಪ್ರಭುದೇವ್‌ ನಟಿಸುತ್ತಿರುವ ಈ ಚಿತ್ರದ ಬಜೆಟ್‌ ಈಗಾಗಲೇ 8 ಕೋಟಿ ದಾಟಿದೆ. ಕ್ಯಾಸೆಟ್‌ ಹಕ್ಕುಗಳು 1.16 ಕೋಟಿ ರುಪಾಯಿಗೆ ಮಾರಾಟವಾಗಿದ್ದರೂ, ಮಿಕ್ಕ ಬಂಡವಾಳವನ್ನು ವಾಪಸ್‌ ಪಡೆಯುವುದು ಸುಲಭದ ಸಂಗತಿಯೇನೂ ಅಲ್ಲ . ಕೆಲವು ಹಂಚಿಕೆದಾರರು ಅಡ್ವಾನ್ಸ್‌ ಕೊಡುವುದಕ್ಕೆ ಮುಂದೆ ಬಂದರೂ ಅವರ ಬಗ್ಗೆ ಧನರಾಜ್‌ಗೆ ನಂಬಿಕೆಯಿಲ್ಲ . ಚಿತ್ರದ ಪ್ರಿಂಟ್‌ ನೋಡಿದಾಕ್ಷಣ ದುಡ್ಡು ವಾಪಸ್‌ ಕೇಳುವ ಜನರಿವರು ಅನ್ನುತ್ತಾರೆ.

ಆ ಬಗ್ಗೆ ಯೋಚಿಸಿದಷ್ಟೂ ಟೆನ್ಷನ್‌ ಜಾಸ್ತಿಯಾಗುತ್ತದೆ ಎನ್ನುವ ಧನರಾಜ್‌ ತಮ್ಮ ಪಾಡಿಗೆ ಅನ್ನ ಸಂತರ್ಪಣೆ ಕಾರ್ಯವನ್ನು ಮುಂದುವರಿಸಿದ್ದಾರೆ. ಅನ್ನದಾತೋ ಸುಖೀಭವ ಅನ್ನುತ್ತಿದೆ ಚಿತ್ರೋದ್ಯಮ ಮತ್ತು ಪತ್ರಿಕೋದ್ಯಮ.

English summary
Producer Dhanraj is planning to shoot a new movie on Sir .M. Vishweshwarayya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada