ಧನ್ವೀರ್ ನಟನೆಯ 'ಹಯಗ್ರೀವ' ಆಕ್ಷನ್ ಟೀಸರ್‌ನಲ್ಲಿ ಬಿಗ್‌ಬಾಸ್ ಗಿಲ್ಲಿ ಡೈಲಾಗ್ ಧಮಾಕ
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಧನ್ವೀರ್ ಗೌಡ ನಟನೆಯ 'ಹಯಗ್ರೀವ' ಚಿತ್ರದ ಆಕ್ಷನ್ ಟೀಸರ್ ರಿಲೀಸ್ ಆಗಿದೆ. ಸಂಕಷ್ಟಕ್ಕೆ ಸಿಲುಕಿರುವ ದರ್ಶನ್‌ಗೆ ನುಡಿ ನಮನ ಸಲ್ಲಿಸಿ ಸಣ್ಣ ಆಕ್ಷನ್ ಝಲಕ್ ತೋರಿಸಲಾಗಿದೆ. ಜೊತೆಗೆ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಡೈಲಾಗ್ ಕೂಡ ಟೀಸರ್‌ನಲ್ಲಿದೆ.
ಕಬ್ಬಿಣದ ಬಾಗಿಲುಗಳು ನಿಮ್ಮನ್ನು ದೂರ ಮಾಡಿರಬಹುದು. ಆದರೆ ಈ ಜನರ ಹೃದಯಗಳಲ್ಲಿ ನೀವು ಇನ್ನು ನಮ್ಮ ಹೆಮ್ಮೆಯಾಗಿ ಉಳಿದಿದ್ದೀರಿ. ಒಬ್ಬ ಮನುಷ್ಯನನ್ನು ಗೋಡೆಗಳ ಹಿಂದೆ ಇಡಬಹುದು. ಆದರೆ ಒಂದು ಹೆಸರನ್ನು ಪ್ರಭಾವವನ್ನು ಯಾರೂ ಬಂಧಿಸೋಕೆ ಸಾಧ್ಯ? ನೀವು ಇಂದು ಹೋರಾಟದಲ್ಲಿ ಇದ್ದೀರಿ. ಆದರೆ ಈ ಜನ, ಈ ಪ್ರೀತಿ, ಈ ನಂಬಿಕೆ ಕವಚವಾಗಿದೆ. ಕಾಲ ಪರೀಕ್ಷಿಸಬಹುದು. ಆದರೆ ಇತಿಹಾಸ ತೀರ್ಪು ಕೊಡುತ್ತದೆ. ಇದು ಅಂತ್ಯವಲ್ಲ. ಮಹಾ ಆರಂಭ. ದರ್ಶನ್ ಅಣ್ಣ ಎಂದರೆ ಕೇವಲ ಹೆಸರಲ್ಲ. ಲಕ್ಷಾಂತರ ಜನರಿಗೆ ಸ್ಫೂರ್ತಿ, ಧೈರ್ಯ ಪ್ರೀತಿ ನಂಬಿಕೆ. ಈ ಹುಟ್ಟುಹಬ್ಬದಲ್ಲಿ ನಿಮಗೆ ಕಾಣದ ಪ್ರಪಂಚವೇ ನಿಮ್ಮ ಜಯಘೋಷದಿಂದ ತುಂಬಿದೆ. ಶುಭಾಶಯಗಳು ಅಣ್ಣ" ಎಂದು ದರ್ಶನ್‌ಗೆ ಧನ್ವೀರ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಕಿಡಿಗೇಡಿಯೊಬ್ಬ ಧನ್ವೀರ್‌ಗೆ ಎಚ್ಚರಿಕೆ ಕೊಡುತ್ತಿದ್ದಂತೆ ಹಿನ್ನೆಲೆಯಲ್ಲಿ ಗಿಲ್ಲಿ ಡೈಲಾಗ್ ಶುರುವಾಗುತ್ತದೆ. "ಏಯ್, ಕರೆಕ್ಟ್ ಆಗಿ ನೋಡೋ ಈ ಕಟೌಟ್‌ನ.. ಕಿಟ್ ತರ ಕಾಣಿಸ್ತಾನಾ ನಿನ್ನ ಕಣ್ಣಿಗೆ" ಎಂದು ಸ್ನೇಹಿತನಿಗೆ ಬಿಲ್ಡಪ್ ಕೊಡುವ ಸನ್ನಿವೇಶ ಇದು. ಬಳಿಕ ಧನ್ವೀರ್ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸುತ್ತಾ ಶರ್ಟ್ ಲೆಸ್ ಆಗಿ ಕಿಡಿಗೇಡಿಗಳನ್ನು ಬೆಂಡೆತ್ತುವ ಝಲಕ್ ನೋಡಬಹುದು. "ನನಗೆ ತಾಳ್ಮೆ ಸ್ವಲ್ಪ ಕಮ್ಮಿ.. ಯಾಕಂದ್ರೆ ಚಾಮುಂಡೇಶ್ವರಿ ತಾಯಿ ನಮ್ಮ ಮಮ್ಮಿ" ಎನ್ನುವ ಡೈಲಾಗ್ ಹೊಡೆದು ಧನ್ವೀರ್ ಅಬ್ಬರಿಸಿದ್ದಾರೆ.
'ಹಯಗ್ರೀವ' ಚಿತ್ರಕ್ಕೆ ರಘು ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪದ್ಮ ಸಮೃದ್ಧಿ ಮಂಜುನಾಥ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಂಜನಾ ಆನಂದ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಶರತ್ ಲೋಹಿತ್ಶ್ವರ, ರಮೇಶ್ ಭಟ್, ಅಶ್ವಿನಿ ಗೌಡ, ಶೋಭರಾಜ್, ಸಂಗೀತಾ, ಕೃಷ್ಣ ಹೆಬ್ಬಾಳೆ, ಅಶ್ವಿನ್ ಹಾಸನ್, ಗಿಲ್ಲಿ ನಟ ತಾರಾಗಣದಲ್ಲಿದ್ದಾರೆ.
ಜುಡಾ ಸ್ಯಾಂಡಿ ಸಂಗೀತ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಶೈಲೇಶ್ ಕುಮಾರ್, ಚೇತನ್ ಸಿದ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಭೂಷಣ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ರವಿವರ್ಮಾ, ಡಿಫ್‌ರೆಂಡ್ ಡ್ಯಾನಿ ಹಾಗೂ ಅರ್ಜುನ್ ವರ್ಮಾ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.


Click it and Unblock the Notifications











