Dhanveerah: ಕಲೆ ಯಾರಪ್ಪನ ಮನೆ ಸೊತ್ತೂ ಅಲ್ಲ; ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವವರ ಬಗ್ಗೆ ಧನ್ವೀರ ಹೇಳಿದ್ದಿಷ್ಟು!
2019ರಲ್ಲಿ ತೆರೆಗೆ ಬಂದ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಭರವಸೆ ಮೂಡಿಸಿದ ನಟ ಧನ್ವೀರ್ ಗೌಡ. ಬಜಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಾಗಲೇ ತನ್ನ ಮಾಸ್ ಲುಕ್ ಹಾಗೂ ಸ್ಟೈಲ್‌ನಿಂದ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದ ಧನ್ವೀರ್ ನಟನೆ ಮೂಲಕ ತಾವು ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಜಾರ್ ಚಿತ್ರದಲ್ಲಿನ ತಮ್ಮ ನಟನೆಯ ಮೂಲಕ ಹಲವಾರು ಯುವ ಅಭಿಮಾನಿಗಳನ್ನು ಪಡೆದುಕೊಂಡ ಧನ್ವೀರ್ ಕಳೆದ ವರ್ಷ ಬೈ ಟು ಲವ್ ಚಿತ್ರದಲ್ಲಿಯೂ ಸಹ ನಟಿಸಿದ್ದರು.
ಹೀಗೆ ಇಲ್ಲಿಯವರೆಗೂ ಒಟ್ಟು ಎರಡು ಚಿತ್ರಗಳಲ್ಲಿ ಮಾತ್ರ ನಟಿಸಿರುವ ಧನ್ವೀರ್ ಸದ್ಯ ವಾಮನ ಎಂಬ ಚಿತ್ರದಲ್ಲಿ ನಟಿಸಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುತ್ತಿವೆ ಚಿತ್ರದ ಪೋಸ್ಟರ್ ಹಾಗೂ ಲುಕ್. ಇನ್ನು ವಾಮನ ಚಿತ್ರದ ಟೈಟಲ್ ಹಾಡು ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿ ಮಾಸ್ ಸಿನಿಮಾ ರಸಿಕರ ಗಮನ ಸೆಳೆದಿದ್ದು, ಸದ್ಯ ಧನ್ವೀರ್ ಮಾಧ್ಯಮಗಳ ಮುಂದೆ ಹಲವು ದಿನಗಳ ಬಳಿಕ ಬಂದು ಸಂದರ್ಶನಗಳನ್ನು ನೀಡಲು ಆರಂಭಿಸಿದ್ದಾರೆ.

ನಮ್ಮ ಕನ್ನಡ ಫಿಲ್ಮಿಬೀಟ್ ಚಾನೆಲ್ ನಡೆಸಿದ ಸಂದರ್ಶನದಲ್ಲಿಯೂ ಸಹ ಮಾತನಾಡಿರುವ ಧನ್ವೀರ್ ತಮ್ಮ ಮುಂದಿನ ಚಿತ್ರ ಹಾಗೂ ಇಂಡ್ಟ್ರಿಯಲ್ಲಿನ ಪೈಪೋಟಿಗಳ ಬಗ್ಗೆಯೂ ಸಹ ಮುಕ್ತವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ಮೂರು ಚಿತ್ರಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿರುವ ನಟ ಧನ್ವೀರ್ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ನಟರ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ಹಿನ್ನಲೆ ಇರುವ ಹಾಗೂ ಇಲ್ಲದೆಯೇ ಸಿನಿಮಾ ಕ್ಷೇತ್ರಕ್ಕೆ ಬರುತ್ತಿರುವ ಹೊಸಬರ ಬಗ್ಗೆ ಧನ್ವೀರ್ ಮಾತನಾಡಿದ್ದು, ಹೇಗಿದ್ದರೆ ಯಶಸ್ಸು ಸಾಧಿಸಬಹುದು, ಹೀಗೆ ಹೊಸಬರು ಬರುತ್ತಿರುವುದರಿಂದ ಪೈಪೋಟಿ ಎನಿಸುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
"ಕಲೆ ಅನ್ನೋದು ಯಾರಪ್ಪನ ಮನೆ ಸೊತ್ತೂ ಅಲ್ಲ. ಅವರು ಯಾವ ಥರ ಅವರವರ ಪ್ರತಿಭೆ ತೋರಿಸಿಕೊಳ್ತಾರೋ ಅದರ ಮೇಲೆ ಜನ ಪ್ರೀತಿಸುತ್ತಾ ಹೋಗುತ್ತಾರೆ. ನಾವು ಸಹ ಇಲ್ಲೇ ಇದ್ದು ಬಿಡ್ತೀವಿ ಅನ್ಕೊಂಡು ಬರಲಿಲ್ಲ. ನಮ್ಮದೊಂದು ಪ್ರಯತ್ನ ಪಟ್ವಿ. ನಾನು ಮುಂಚಿನಿಂದಲೂ ನಾಟಕ ಹಾಗೂ ಸ್ಟೇಜ್ ಆರ್ಟಿಸ್ಟ್ ಆಗಿದ್ದರಿಂದ ನನಗೆ ಇರೋದು ಇದೊಂದೇ ದಾರಿ ಅಂತ ಪ್ರಯತ್ನ ಪಟ್ಟೆ, ಜನರೂ ಇಷ್ಟಪಟ್ಟರು. ಅದಕ್ಕೆ ತಕ್ಕಂತೆ ಏನೇನು ಬೇಕೋ, ಏನೆಲ್ಲಾ ತಯಾರಿ ಬೇಕೋ ಅದನ್ನೆಲ್ಲಾ ಮಾಡ್ಕೊಂಡು ಮತ್ತೊಂದಷ್ಟು ಸಿನಿಮಾಗಳನ್ನು ನಿಧಾನಕ್ಕೆ ಮಾಡಿಕೊಂಡು ಹೋಗುತ್ತಿದ್ದೇನೆ" ಎಂದು ತಿಳಿಸಿದರು. ಈ ಮೂಲಕ ಧನ್ವೀರ್ ಹೊಸಬರು ಯಾರೇ ಬಂದರೂ ಕಲೆ ಇದ್ದರೆ ಮಾತ್ರ ಜನ ಇಷ್ಟಪಡ್ತಾರೆ ಎಂದು ಧನ್ವೀರ್ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಧನ್ವೀರ್ ಯಾವ ರೀತಿ ಚಿತ್ರಗಳನ್ನು ಆಯ್ದುಕೊಳ್ತೇನೆ ಹಾಗೂ ಮುಂದಿನ ಚಿತ್ರಗಳು ಯಾವ ರೀತಿ ಇರಲಿವೆ ಎಂಬುದನ್ನು ತಿಳಿಸಿದರು. "ಖಂಡಿತವಾಗಿಯೂ ನಾನು ಕಥೆಯನ್ನು ಜಾಗರೂಕತೆಯಿಂದ ಆರಿಸುತ್ತೇನೆ. ವಾಮನ ನನ್ನ ಮೂರನೇ ಚಿತ್ರ. ಕೈವ ನಾಲ್ಕನೇ ಚಿತ್ರವಾಗುತ್ತೆ. ಇಷ್ಟೂ ಮಾಡಿರೋ ಚಿತ್ರಗಳಲ್ಲಿ ಒಂದೊಂದು ಪಾತ್ರನೂ ಒಂದೊಂದು ವಿಭಿನ್ನತೆ ಇದೆ. ಕಲಾವಿದನಾಗಿ ನನ್ನ ಅನಿಸಿಕೆ ಏನೆಂದರೆ ಒಬ್ಬ ಕಲಾವಿದ ಎನಿಸಿಕೊಳ್ಳಬೇಕೆಂದರೆ ಆತನ ಒಂದೊಂದು ಪಾತ್ರದಲ್ಲಿಯೂ ಬದಲಾವಣೆ ಇರಬೇಕು. ಆಗಲೇ ಆತ ಪ್ರಬುದ್ಧ ಕಲಾವಿದ ಎನಿಸಿಕೊಳ್ಳೋದು. ಹಾಗಾಗಿ ನನಗೂ ಇದೇ ರೀತಿ ಎಲ್ಲಾ ರೀತಿಯ ಪಾತ್ರ ಮಾಡುವ ಕಲಾವಿದನಾಗಬೇಕು ಎಂಬ ಆಸೆ ಇದೆ" ಎಂದು ಧನ್ವೀರ್ ಹೇಳಿಕೆ ನೀಡಿದರು.


Click it and Unblock the Notifications











