ಲವ್ ಜಿಹಾದ್ ? ನನ್ನ ಮಗಳಿಗೆ ಯುಟ್ಯೂಬರ್ 'ಮುಕಳೆಪ್ಪ' ಮೋಸ ಮಾಡಿದ್ದಾನೆ -ಗಾಯತ್ರಿ ತಾಯಿ ಕಣ್ಣೀರು
ಧಾರವಾಡ ; 2005 ರಲ್ಲಿ ಸ್ಥಾಪನೆಯಾದ 'ಯೂಟ್ಯೂಬ್' ಇಂದು ವಿಶ್ವದ ಜನಪ್ರಿಯ ವೆಬ್‌ಸೈಟ್. ಅಷ್ಟೇ ಅಲ್ಲ ಅತಿ ಹೆಚ್ಚು ಆದಾಯ ತರುವ ಹಾಗೂ ಹೆಚ್ಚು ಮಂದಿಗೆ ಹಣ ವಿತರಣೆ ಮಾಡುವ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾದುದ್ದು. ಬರೋಬ್ಬರಿ 76 ಭಿನ್ನ ಭಾಷೆಗಳಲ್ಲಿ ಯೂಟ್ಯೂಬ್ ಆಯ್ಕೆಗಳು ಲಭ್ಯವಿದೆ. ಯೂಟ್ಯೂಬ್ ವಿಡಿಯೋಗಳಲ್ಲಿ ಬಳಸಲಾಗಿರುವ ಭಾಷೆಗಳು 4000 ಕ್ಕೂ ಹೆಚ್ಚು.
ಒಂದು ಅಧ್ಯಯನದ ಪ್ರಕಾರ ಯೂಟ್ಯೂಬ್ ಬಳಸುವ ವ್ಯಕ್ತಿ ದಿನಕ್ಕೆ ಸರಾಸರಿ 40 ನಿಮಿಷ ಯೂಟ್ಯೂಬ್ ನೋಡುತ್ತಾನಂತೆ. ಇಂತಹ ಯೂಟ್ಯೂಬ್ ಮೂಲಕ ಹಲವರು ಬದುಕು ರೂಪಿಸಿಕೊಂಡಿದ್ದಾರೆ. ಆ ಪೈಕಿ ''ಮುಕಳೆಪ್ಪ'' ಕೂಡ ಒಬ್ಬರು.

ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ಕರುನಾಡಿನೆಲ್ಲೆಡೆ ತಮ್ಮ ವಿಡಿಯೋಗಳ ಮೂಲಕ ಜನ ಮನ ಗೆದ್ದು, 24ಲಕ್ಷ ಹಿಂಬಾಲಕರನ್ನು ಹೊಂದಿರುವ ಈ ಮುಕಳೆಪ್ಪ ಸುತ್ತ ಈಗ ವಿವಾದದ ಹುತ್ತ ಬೆಳೆದಿದೆ. ಮುಕಳೆಪ್ಪ ಅಲಿಯಾಸ್ ''ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್'' ವಿರುದ್ದ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಇಷ್ಟೇ ಅಲ್ಲದೇ ಹುಡುಗಿಯ ತಾಯಿ ತಮ್ಮ ಮಗಳ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದು ನನ್ನ ಮಗಳಿಗೆ ಮುಕಳೆಪ್ಪ ಮೋಸ ಮಾಡಿದ್ದಾನೆ ಎಂದು ಆರೋಪವನ್ನು ಕೂಡ ಮಾಡಿದ್ದಾರೆ.
ಹೌದು, ಅಸಲಿಗೆ ಕಳೆದ ಜೂನ್ 5ರಂದು ಮುಕಳೆಪ್ಪ ಹಿಂದೂ ಧರ್ಮದ ಯುವತಿಯಾದ ಗಾಯತ್ರಿ ಯಲ್ಲಪ್ಪ ಜಾಲಿಹಾಳ ಎಂಬುವವರನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದರು. ಆದರೆ.. ಮುಕಳೆಪ್ಪ ಈ ಮದುವೆಯನ್ನು ಮನಸಿಂದ ಅಲ್ಲ ಬದಲಿಗೆ ಧಮ್ಕಿ ಹಾಕಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮದುವೆಯಾಗಿದ್ದಾನೆ ಎನ್ನುವ ಆರೋಪವನ್ನು ಬಜರಂಗದಳ ಕಾರ್ಯಕರ್ತರು ಮಾಡಿದ್ದಾರೆ. ಲವ್ ಜಿಹಾದ್ ಆರೋಪದಡಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೀಗೆ ದೂರು ದಾಖಲಾದ ಬೆನ್ನಲ್ಲೇ ಇದೀಗ ಮುಕುಳೆಪ್ಪ ಮದುವೆಯಾಗಿರುವ ಹುಡುಗಿ ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ ಕಣ್ಣೀರು ಹಾಕಿದ್ದಾರೆ. ವಿಡಿಯೋ ಮೂಲಕ ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಗಾಯತ್ರಿ ಅವರ ತಾಯಿ ಶಿವಕ್ಕ ಮುಕಳೆಪ್ಪ ನನ್ನ ಮಗಳನ್ನು ಪ್ರವಾಸಕ್ಕೆಂದು ಕರೆದುಕ್ಕೊಂಡು ಹೋಗುತ್ತಿದ್ದ. ನಾವು ಹಳ್ಳಿಯವರು ಎಲ್ಲೂ ಹೋಗಲ್ಲ ಆದರೆ ನನ್ನ ಮಗಳು ದೊಡ್ಡ ಹೆಸರು ಮಾಡಬಹುದು ಎಂದುಕೊಂಡು ಮುಕಳೆಪ್ಪನ ಜೊತೆ ವಿಡಿಯೋ ಮಾಡಲು ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ನಾವು ಕೂಡ ಮಗಳ ಒತ್ತಾಸೆಗೆ ಮಣಿದು ವಿಡಿಯೋ ಮಾಡಲು ಕಳುಹಿಸಿಕೊಡುತ್ತಿದ್ದೆವು ಎಂದು ಹೇಳಿದ್ದಾರೆ.
ಮುಂದುವರೆದು ನಾವು ಮಾಡುತ್ತಿರುವುದು ದೊಡ್ಡ ತಪ್ಪು ಎನ್ನುವುದು ನಮಗೆ ಅರಿವು ಆಗಲಿಲ್ಲ ಎಂದು ಹೇಳಿರುವ ಗಾಯತ್ರಿ ಅವರ ತಾಯಿ ಶಿವಕ್ಕ ನಮ್ಮ ಮಗಳನ್ನು ಪುಸಲಾಯಿಸಿ ಮುಕುಳೆಪ್ಪ ಮದುವೆ ಆಗಿದ್ದಾನೆ ಎಂದು ಹೇಳಿದ್ದಾರೆ. ನಮ್ಮ ಮಗಳು ದೊಡ್ಡ ಮಟ್ಟದಲ್ಲಿ ಬೆಳಿತಾಳೆ ಅಂತ ನಾವು ಮುಕುಳೆಪ್ಪ ಜೊತೆಗೆ ವಿಡಿಯೋ ಮಾಡಲು ಅನುಮತಿ ನೀಡಿದ್ದೆವು. ಅದೇ ನಾವು ಮಾಡಿದ ದೊಡ್ಡ ತಪ್ಪು ಎಂದು ಕಣ್ಣೀರು ಹಾಕಿದ್ದಾರೆ.

ಚಿತ್ರೀಕರಣದ ನೆಪದಲ್ಲಿ ನಮ್ಮ ಮಗಳನ್ನು ಮೂರು ನಾಲ್ಕು ದಿನ ಹೊರಗಡೆ ಕರೆದುಕೊಂಡು ಹೋಗುತ್ತಿದ್ದ ಎಂದು ಹೇಳಿರುವ ಗಾಯತ್ರಿ ಅವರ ತಾಯಿ ಶಿವಕ್ಕ, ಆ ಕ್ಷಣಕ್ಕೆ ಆತ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. ನಮ್ಮಿಂದ ತಪ್ಪಾಗಿದೆ. ಹಿಂದೂ ಸಮಾಜ ನಮಗೆ ಬೇಕಾದ ಶಿಕ್ಷೆಯನ್ನು ನೀಡಲಿ ಎಂದು ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ.
ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮೀಣ ಪೊಲೀಸರು ಮುಕಳೆಪ್ಪ ಮತ್ತು ಗಾಯತ್ರಿ ಅವರನ್ನು ವಿಚಾರಣೆಗೆಂದು
ಕರೆಸಿಕೊಂಡ ಸಮಯದಲ್ಲಿ ಗಾಯತ್ರಿ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆ ಎಫ್‌ಐಆರ್ ದಾಖಲಿಸದ ಪೊಲೀಸರು ಯಾರನ್ನು ವಶಕ್ಕೆ ಪಡೆದಿಲ್ಲ ಎಂದು ಕೂಡ ಮಾಧ್ಯಮಗಳಲ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications











