ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದ ಧೀರೇನ್; ಹೊಸ ಸಿನಿಮಾ ಘೋಷಣೆ
ಕನ್ನಡ ಚಿತ್ರರಂಗದಲ್ಲೀಗ ಅಣ್ಣಾವ್ರ ಮೊಮ್ಮಕ್ಕಳ ಕಾರುಬಾರು ಶುರುವಾಗಿದೆ. ಇತ್ತೀಚೆಗೆ 'ಯುವ' ಆಗಿ ಬಂದು ರಾಘಣ್ಣನ ಕಿರಿಮಗ ಗೆದ್ದಿದ್ದರು. 'ಶಿವ 143' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಧೀರೇನ್ ರಾಮ್‌ಕುಮಾರ್ ಮೊದಲ ಪ್ರಯತ್ನದಲ್ಲಿ ಸೋತಿದ್ದರು.
ಎರಡು ವರ್ಷದ ಹಿಂದೆ ಬಂದಿದ್ದ 'ಶಿವ 143' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೀಗ ಹೊಸ ಸಿನಿಮಾ ಸಾಹಸಕ್ಕೆ ಧೀರೇನ್ ಮುಂದಾಗಿದ್ದಾರೆ. ಈ ಬಾರಿ ಕೆಆರ್‌ಜಿ ಸ್ಟುಡಿಯೋಸ್ ಬೆಂಬಲ ಸಿಕ್ಕಿದೆ. ಇನ್ನು ಹೆಸರಿಡದ ಹೊಸ ಸಿನಿಮಾ ಮೂಲಕ ರೀಲಾಂಚ್ ಆಗಲು ರಾಮ್‌ಕುಮಾರ್ ಪುತ್ರ ಸಿದ್ಧರಾಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಘೋಷಣೆ ಆಗಿದೆ.

ಧೀರೇನ್ ರಾಮ್‌ಕುಮಾರ್ ಎನ್ನುವ ತಮ್ಮ ಹೆಸರನ್ನು ಧೀರೇನ್ ರಾಜ್‌ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ. ಅಂದರೆ ತಂದೆ ಹೆಸರಿನ ಬದಲಿಗೆ ತಾತನ ಹೆಸರಿನೊಟ್ಟಿಗೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ 'ಶಿವ 143' ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರೂ ಮತ್ತೊಮ್ಮೆ ಹೊಸ ಸಿನಿಮಾ ಮೂಲಕ ಹೊಸ ಜರ್ನಿ ಎಂದಿದ್ದಾರೆ.
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ನಿರ್ದೇಶಕರು, ನಾಯಕಿ ಇನ್ನುಳಿದ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿದೆ. ಹೆಸರು ಬದಲಿಸಿಕೊಳ್ಳಬೇಕು ಎನಿಸಿತು ಹಾಗಾಗಿ ಬದಲಿಸಿಕೊಂಡೆ. ಆದಷ್ಟು ಬೇಗ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ ಎಂದು ಫಿಲ್ಮಿಬೀಟ್‌ಗೆ ಧೀರೇನ್ ಮಾಹಿತಿ ನೀಡಿದ್ದಾರೆ.

ಹೀರೊ ಆಗಲು ಬೇಕಾದ ಎಲ್ಲಾ ತಾಲೀಮು ನಡೆಸಿ ಧೀರೇನ್ ಮೊದಲ ಚಿತ್ರದಲ್ಲಿ ನಟಿಸಿದ್ದರು. ಸಿಕ್ಸ್‌ಪ್ಯಾಕ್ ಮಾಡಿ ಮೊದಲ ಚಿತ್ರದಲ್ಲೇ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದರು. 'ಶಿವ 143' ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಜಯಣ್ಣ- ಭೋಗೇಂದ್ರ ಸಿನಿಮಾ ನಿರ್ಮಿಸಿದ್ದರು. ಮಾನ್ವಿತಾ ಕಾಮತ್ ನಾಯಕಿಯಾಗಿ ಸಾಥ್ ಕೊಟ್ಟಿದ್ದರು.
ತೆಲುಗಿನ 'RX100' ಸಿನಿಮಾ ರೀಮೇಕ್ ಆಗಿದ್ದ 'ಶಿವ 143' ಚಿತ್ರಕ್ಕೆ ಅರ್ಜುನ್ ಜನ್ಯಾ ಟ್ಯೂನ್ ಹಾಕಿದ್ದರು. ಅವಿನಾಶ್, ಚರಣ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಶೋಭರಾಜ್ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು. 'ಶಿವ 143' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಕೂಡ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ. ಬಳಿಕ ಸೈಲೆಂಟ್ ಆಗಿದ್ದ ಧೀರೇನ್ ಇದೀಗ ಹೊಸ ಹುರುಪಿನೊಂದಿಗೆ ಮತ್ತೆ ಕಂಬ್ಯಾಕ್ ಮಾಡಲು ಮುಂದಾಗಿದ್ದಾರೆ.
ಸಿನಿಮಾ ವಿತರಣೆಯಲ್ಲಿ ಹೆಸರು ಮಾಡಿರುವ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿಭಿನ್ನ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕುತ್ತಿದೆ. 'ರತ್ನನ್ ಪ್ರಪಂಚ' ಮೂಲಕ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿತು. ಕಳೆದ ವರ್ಷ 'ಗುರುದೇವ್ ಹೊಯ್ಸಳ' ಸಿನಿಮಾ ನಿರ್ಮಿಸಿತ್ತು. ಸದ್ಯ 'ಪೌಡರ್', 'ಉತ್ತರಕಾಂಡ' ಹೀಗೆ ಸಾಲು ಸಾಲು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದೆ. ಇದೆಲ್ಲದರ ನಡುವೆ ಧೀರೇನ್ ಸಿನಿಮಾ ಕೈಗೆತ್ತಿಕೊಂಡಿದೆ.
ಧೀರೇನ್ ಸಹೋದರಿ ಧನ್ಯಾ ರಾಮ್‌ಕುಮಾರ್ ಕೂಡ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಧನ್ಯಾ ಬಳಿಕ 'ಹೈಡ್ ಅಂಡ್ ಸೀಕ್', 'ಕಾಲಪತ್ಥರ್', 'ಎಲ್ಲಾ ನಿನಗಾಗಿ' ಸಿನಿಮಾಗಳಲ್ಲಿ ನಟಿಸಿದರು. ವಿಶೇಷ ಅಂದ್ರೆ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣದ 'ಪೌಡರ್' ಚಿತ್ರದಲ್ಲಿ ದಿಗಂತ್ ಜೊತೆ ಧನ್ಯಾ ಬಣ್ಣ ಹಚ್ಚಿದ್ದಾರೆ.


Click it and Unblock the Notifications











