'ಪಬ್ಬಾರ್' ಅಂದ್ರೆ ಏನು? ಧೀರೆನ್, ಅಮೃತಾ ಜೋಡಿ ಸಿನಿಮಾ ಹೇಗಿರುತ್ತೆ?
ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರ ಮುಂದಿನ ಸಿನಿಮಾ ಯಾವ್ದು? ಕಥೆಯೇನು? ನಾಯಕ- ನಾಯಕಿ ಯಾರು? ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇರುತ್ತದೆ. 'ಶಾಖಾಹಾರಿ' ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಹೊಸ ಸಿನಿಮಾ ಆರಂಭಿಸಿದ್ದಾರೆ. ಧೀರೇನ್ ರಾಮ್‌ಕುಮಾರ್ ಹಾಗೂ ಅಮೃತಾ ಪ್ರೇಮ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ.
'ಪಬ್ಬಾರ್' ಎಂಬ ವಿಭಿನ್ನ ಟೈಟಲ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವುದು ವಿಶೇಷ. ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. 'ಶಿವ 143' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧೀರೆನ್ ಇದೀಗ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಟೈಟಲ್‌ನಿಂದಲೇ 'ಪಬ್ಬಾರ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಕಥೆಯೇನು? ಎನ್ನುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ 'ಟಗರುಪಲ್ಯ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಹೊಸ ಹೊಸ ಕಥೆಗಳನ್ನು ಕೇಳುತ್ತಿರುವ ಅಮೃತಾ ಇದೀಗ ಧೀರೆನ್ ಜೊತೆ 'ಪಬ್ಬರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕಥೆಗೂ ಈ ಜಾಗಕ್ಕೂ ಲಿಂಕ್ ಇದೆ. ಆ ಜಾಗವೇ ಚಿತ್ರದ ಕಥೆಯ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ 'ಪಬ್ಬಾರ್' ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ. ಮೊದಲಿಗೆ ಮಡಿಕೇರಿಯಲ್ಲಿ ಚಿತ್ರೀಕರಣ ಆರಂಭಿಸಿ ಬಳಿಕ ಪಬ್ಬರ್ ಕಣಿವೆಗೆ ಹೋಗಿ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ತೀರ್ಮಾನಿಸಿದೆ.

'ವೇದ' ಚಿತ್ರದ ಮೂಲಕ ಗೀತಾ ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಬಳಿಕ ಅದೇ ಬ್ಯಾನರ್ ಅಡಿಯಲ್ಲಿ 'ಭೈರತಿ ರಣಗಲ್' ಸಿನಿಮಾ ಮೂಡಿ ಬಂದಿತ್ತು. ಇತ್ತೀಚೆಗೆ ಶ್ರೀನಿ ನಿರ್ದೇಶನದಲ್ಲಿ 'A ಫಾರ್ ಆನಂದ್' ಸಿನಿಮಾ ಶುರುವಾಗಿತ್ತು. ಶಿವಣ್ಣ ಈ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಇದೀಗ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 4ನೇ ಸಿನಿಮಾ 'ಪಬ್ಬಾರ್' ಸೆಟ್ಟೇರಿದೆ.
ಮೇ 15ರಂದು 'ಪಬ್ಬಾರ್' ಸಿನಿಮಾ ಚಿತ್ರೀಕರಣ ಆರಂಭಿಸಿ ವರ್ಷಾಂತ್ಯಕ್ಕೆ ಮುಗಿಸೋ ಪ್ಲಾನ್ ಮಾಡಲಾಗ್ತಿದೆ. ಮುಂದಿನ ವರ್ಷ ಆರಂಭದಲ್ಲೇ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಕಳೆದ ಕೆಲ ದಿನಗಳಿಂದ ಧೀರೆನ್ ಜೊತೆ ಸಿನಿಮಾ ಮಾಡಲು ನಿರ್ದೇಶನ ಸಂದೀಪ್ ಸುಂಕದ್ ತಯಾರಿ ನಡೆಸಿದ್ದರು. ಇನ್ನು ಧೀರೇನ್ ಕೂಡ ಪಾತ್ರಕ್ಕಾಗಿ ಸಿದ್ಧರಾಗುತ್ತಿದ್ದರು. ಪಾತ್ರಕ್ಕೆ 10 ಕೆಜಿ ತೂಕ ಇಳಿಸಿಕೊಂಡು ಖಡಕ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ 'ಪಬ್ಬರ್' ಚಿತ್ರಕ್ಕಿದೆ. ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಸಾಗಲಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ.


Click it and Unblock the Notifications











