ರಾಜ್‌ಕುಮಾರ್ ಮೊಮ್ಮಗನ ಜೊತೆ 'ಜೇಮ್ಸ್' ನಿರ್ಮಾಪಕ ಹೊಸ ಸಿನಿಮಾ
ರಾಜ್ ಕುಮಾರ್ ಮೊಮ್ಮಗ ಧೀರೇನ್ ರಾಮ್‌ಕುಮಾರ್ ಜೊತೆ ಹೊಸ ಸಿನಿಮಾವನ್ನು 'ಜೇಮ್ಸ್' ಸಿನಿಮಾದ ನಿರ್ಮಾಪಕ ಘೋಷಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಸಿನಿಮಾ ನಿರ್ಮಾಣ ಮಾಡಿ ಭಾರಿ ದೊಡ್ಡ ಹಿಟ್ ಚಿತ್ರ ಪಡೆದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇದೀಗ ಹೊಸ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಮತ್ತೊಮ್ಮೆ ರಾಜ್ ಕುಮಾರ್ ಕುಟುಂಬದ ಕುಡಿಯನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಕ್ಕೆ ರಾಮ್ ಕುಮಾರ್ ಪುತ್ರ ಧೀರೇನ್ ರಾಮ್‌ಕುಮಾರ್ ನಾಯಕ. ರಾಮ್ ಕುಮಾರ್, ಡಾ ರಾಜ್‌ಕುಮಾರ್ ಅವರ ಅಳಿಯನೂ ಹೌದು.

'ಧೀರೆನ್ ರಾಮ್‌ಕುಮಾರ್' ಈಗಾಗಲೇ 'ಶಿವ 143' ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಇದೀಗ ಹೊಸ ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಆಗಿದ್ದಾರೆ.
'ಬಡವ ರಾಸ್ಕಲ್' ಸಿನಿಮಾ ನಿರ್ದೇಶನ ಮಾಡಿದ್ದ ಶಂಕರ್ ಅವರು ಧೀರೇನ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಂಕರ್, ''ಅಣ್ಣಾವ್ರ ಕುಟುಂಬದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯವಿದೆ. ಅದನ್ನು ಗಮನದಲ್ಲಿಟ್ಟುಕೊಂಡೆ ಕೌಟುಂಬಿಕ ಕತೆ ಮಾಡಿಕೊಂಡಿದ್ದೇನೆ. 'ಬಡವ ರಾಸ್ಕಲ್' ಸಿನಿಮಾದಲ್ಲಿಯೂ ಕೌಟುಂಬಿಕ ಕತೆ ಹಿಟ್ ಆಗಿತ್ತು. ಇಲ್ಲೂ ಅದೇ ಮಾದರಿ ಕೌಟುಂಬಿಕ ಕತೆ ಇರಲಿದೆ'' ಎಂದಿದೆ.
''ಧೀರೇನ್ ಸಹ ನಾನು ನಿರ್ದೇಶಕರ ನಟ, ನೀವು ಹೇಳಿದಂತೆ ನಟಿಸುತ್ತೇನೆ ಎಂದು ತಮ್ಮನ್ನು ಸಿನಿಮಾಕ್ಕೆ ಸಮರ್ಪಿಸಿಕೊಂಡಿದ್ದಾರೆ. ಧೀರೇನ್ ಅವರ ಸಿನಿಮಾ ಮುಗಿದ ಬಳಿಕ ಮತ್ತೆ ಡಾಲಿ ಧನಂಜಯ್ ಅವರಿಗಾಗಿ ಹೊಸ ಸಿನಿಮಾ ಮಾಡಲಿದ್ದೇನೆ'' ಎಂದಿದ್ದಾರೆ ನಿರ್ದೇಶಕ ಶಂಕರ್.
ಧೀರೇನ್ ರಾಮ್‌ಕುಮಾರ್ ಈಗಾಗಲೇ 'ಶಿವ 143' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನ 'ಆರ್‌ಎಕ್ಸ್ 143' ಸಿನಿಮಾದ ರೀಮೇಕ್ ಇದು ಎನ್ನಲಾಗುತ್ತಿತ್ತು, 'ಶಿವ 143' ಯಲ್ಲಿ ಸಾಕಷ್ಟು ಹಸಿ ಬಿಸಿ ದೃಶ್ಯಗಳಲ್ಲಿ ಧೀರೇನ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಟಗರು ಪುಟ್ಟಿ ಮಾನ್ವಿತಾ.


Click it and Unblock the Notifications











