ಕನ್ನಡಿಗರನ್ನು ಕೆಣಕಿದ ಧ್ರುವ್ ರಾಠೀ; ನಿರ್ದೇಶಕ ಮಂಸೋರೆ ಅಸಮಾಧಾನ
ಸೋಶಿಯಲ್ ಮೀಡಿಯಾ ಜಮಾನದಲ್ಲಿ ಯಾರ್ಯಾರೋ ರಾತ್ರೋರಾತ್ರಿ ಫೇಮಸ್ ಆಗಿಬಿಡ್ತಾರೆ. ವಿವಾದಾತ್ಮಕ ಹೇಳಿಕೆಗಳು, ರೀಲ್ಸ್, ವಿಭಿನ್ನ ಫೋಟೋ ಹೀಗೆ ಚಿತ್ರವಿಚಿತ್ರ ಕಾರಣಗಳಿಗೆ ಜನರ ಗಮನ ಸೆಳೆಯುತ್ತಿದ್ದಾರೆ. ಇನ್ನು ಯೂಟ್ಯೂಬ್‌ಗಳು ಕೂಡ ಇತ್ತೀಚೆಗೆ ಜನಪ್ರಿಯತೆ ಸಾಧಿಸುತ್ತಿದ್ದಾರೆ. ಅದೇ ರೀತಿ ಮೋದಿ ಸರ್ಕಾರವನ್ನು ಟಾರ್ಗೆಟ್ ಮಾಡಿ ಸದ್ದು ಮಾಡಿದವರು ಧ್ರುವ್ ರಾಠೀ.
ಹರಿಯಾಣ ಮೂಲದ ಧ್ರುವ್ ರಾಠೀ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ವೇಳೆ ತಮ್ಮ ವೀಡಿಯೋಗಳ ಮೂಲಕ ಬಿಜೆಪಿಗೆ ಧ್ರುವ್ ರಾಠೀ ದುಃಸ್ವಪ್ನವಾಗಿ ಕಾಡಿದ್ದರು.

ಸದ್ಯ ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ಕನ್ನಡ ಚಿತ್ರ ನಿರ್ದೇಶಕ ಮಂಸೋರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಆತ ಮಾಡಿದ್ದ ಹೊಸ ವೀಡಿಯೋದಲ್ಲಿ ಕನ್ನಡಿಗರ ಬಗ್ಗೆ ಮಾಡಿರುವ ಕಾಮೆಂಟ್ಸ್. ಸತ್ಯ ಗೊತ್ತಿಲ್ಲದೇ ಸುಳ್ಳು ಸುದ್ದಿ ಹರಡಿದ್ದಾಗಿ ಕನ್ನಡಿಗರು ಧ್ರುವ್ ರಾಠೀ ವಿರುದ್ಧ ಗರಂ ಆಗಿದ್ದಾರೆ. ನಿರ್ದೇಶಕ ಮಂಸೋರೆ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರು ನಡೆಸುವ ಹೋರಾಟವನ್ನು ಧ್ರುವ್ ರಾಠೀ ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿ ಬಗ್ಗೆ ಇತ್ತೀಚೆಗೆ ಒಂದು ವೀಡಿಯೋ ಮಾಡಿದ್ದಾರೆ. "ಪಹಲ್ಗಾಮ್ ದಾಳಿಯ ವಾಸ್ತವ ಏನು? ಭಾರತವನ್ನು ವಿಫಲಗೊಳಿಸುತ್ತಿರುವವರು ಯಾರು?" ಎನ್ನುವ ಹೆಸರಿನಲ್ಲಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಪಹಲ್ಗಾಮ್ ದಾಳಿ, ಅದರ ಸುತ್ತಾ ನಡೆಯುತ್ತಿರುವ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಧ್ರುವ್ ರಾಠೀ ಮಾತನಾಡಿದ್ದಾರೆ.
ವೀಡಿಯೋ ಕೊನೆಯಲ್ಲಿ ದೇಶದ ಒಳಗೆ ಎಲ್ಲವೂ ಸರಿಯಿಲ್ಲ. ನಮ್ಮ ನಮ್ಮಲ್ಲೇ ಗಲಾಟೆ ನಡೆಯುತ್ತಿದೆ ಎಂದು ಧ್ರುವ್ ರಾಠೀ ಹೇಳಿದ್ದಾರೆ. ಇತ್ತೀಚೆಗೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಭಾರೀ ಸದ್ದು ಮಾಡಿತ್ತು. ಕ್ಷುಲ್ಲಕ ಕಾರಣಕ್ಕೆ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿದ್ದರು. ಬಳಿಕ ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಸುಳ್ಳು ಅಪ್ರಚಾರ ಮಾಡಿದ್ದು ಗೊತ್ತೇಯಿದೆ. ಬಳಿಕ ಸಿಸಿಟಿವಿ ಫುಟೇಜ್‌ನಲ್ಲಿ ಅಸಲಿ ಸಂಗತಿ ಬಯಲಾಗಿತ್ತು.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ವಿಚಾರ ಭಾರೀ ಚರ್ಚೆ ಆಗಿತ್ತು. ಉತ್ತರ ಭಾರತದವರನ್ನು ಕರ್ನಾಟಕದಲ್ಲಿ ಹೊಡೆದಿದ್ದಾರೆ ಎನ್ನುವ ರೀತಿ ಅಪಪ್ರಚಾರ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ ಉತ್ತರ ಭಾರತದ ವ್ಯಕ್ತಿಯ ವೀಡಿಯೋ ಸಹ ವೈರಲ್ ಆಗಿತ್ತು. ಅದನ್ನು ಕೂಡ ಕೆಲವರು ಉತ್ತರ ಭಾರತದ ಮಂದಿ ತಪ್ಪಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದರು. ಬಳಿಕ ಆಟೋ ಚಾಲಕನಿಗೆ ಬೆದರಿಕೆ ಹಾಕಿದ್ದ ವಸ್ಯಕ್ತಿ ಕ್ಷಮೆ ಕೇಳಿದ್ದನು.
ಹೀಗೆ ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಉತ್ತರ ಭಾರತದಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ. ಇಂತಹದ್ದೇ ಸುಳ್ಳು ಸುದ್ದಿ ನಂಬಿ ಧ್ರುವ್ ರಾಠೀ ತನ್ನ ವೀಡಿಯೋದಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ಮಂಸೋರೆ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. "ಧ್ರುವ್ ರಾಠೀ ನಿಮ್ಮ ಹೊಸ ವಿಡಿಯೋದಲ್ಲಿ ಕನ್ನಡ ಭಾಷೆಗಾಗಿ ನಡೆಸುವ ಹೋರಾಟವನ್ನು ತಪ್ಪಾಗಿ ಅರ್ಥೈಸಿ ಉಗ್ರವಾದಕ್ಕೆ ಸಮ ಎಂಬ ಅರ್ಥದಲ್ಲಿ ಹೇಳಿರುವುದು, ಭಾಷೆಯ ಉಳಿವಿಗಾಗಿ ಕನ್ನಡಿಗರು ಮಾಡುತ್ತಿರುವ ಹೋರಾಟಕ್ಕೆ ಅವಮಾನ ಮಾಡಿದಂತೆ. ನಿಮ್ಮಹಿಂದಿ ಗೋದಿ ಮೀಡಿಯಾ ಹೇಳುವ ಸುಳ್ಳನ್ನೇ ನಿಜ ಎಂದು ನಂಬುವ ದಡ್ಡ ನೀವು ಎಂದು ಗೊತ್ತಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಸಾಕಷ್ಟು ಜನ ನಿರ್ದೇಶಕ ಮಂಸೋರೆ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಧ್ರುವ್ ರಾಠೀ ವಿರುದ್ಧ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸುಳ್ಳು ಸುದ್ದಿ ನಂಬಿ ವೀಡಿಯೋ ಮಾಡುವುದು ಬಿಡು ಎನ್ನುತ್ತಿದ್ದಾರೆ.


Click it and Unblock the Notifications











