Darshan Fans vs Dhruva Fans: ಒರಿಜಿನಲ್ 'ಡಿಬಾಸ್' ಯಾರು? ದಿಢೀರ್ ಈ ಚರ್ಚೆಗೆ ಕಾರಣವೇನು?
ಚಿತ್ರರಂಗದಲ್ಲಿ ಸ್ಟಾರ್ ವಾರ್ ಮಾತ್ರವಲ್ಲ, ಸ್ಟಾರ್‌ಗಳ ಫ್ಯಾನ್ಸ್ ನಡುವೆಯೂ ವಾರ್ ನಡೆಯುತ್ತಲೇ ಇರುತ್ತದೆ. ದಶಕಗಳಿಂದ ಇದು ನಡೆದುಕೊಂಡು ಬಂದಿದೆ. ಮೊದಲೆಲ್ಲಾ ಥಿಯೇಟರ್‌ಗಳ ಮುಂದೆ ರಸ್ತೆಗಳಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿರಿಕ್ ಏರ್ಪಡುತ್ತಿತ್ತು. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಕೂಡ ಅದಕ್ಕೆ ದೊಡ್ಡ ವೇದಿಕೆಯಾಗಿಬಿಟ್ಟಿದೆ.
ತಮ್ಮ ನಟನ ಬಗ್ಗೆ ಕೊಚ್ಚಿಕೊಳ್ಳುವ ಭರದಲ್ಲಿ ಮತ್ತೊಬ್ಬ ನಟನನ್ನು ಆತನ ಅಭಿಮಾನಿಗಳನ್ನು ಕೆಣಕುವ ಪ್ರಯತ್ನ ನಡೆಯುತ್ತಿರುತ್ತದೆ. ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡುವ ವಿಕೃತಿ ಮನಸ್ಥಿತಿ ಕೂಡ ಬೆಳೆದುಬಿಟ್ಟಿದೆ. ಇದೇ ಕಾರಣಕ್ಕೆ ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಇಬ್ಬರು ನಡುವೆ ಮುಸುಕಿನ ಗುದ್ದಾಟ ನಡೆಯುತ್ತದ್ದರೆ ಅದು ಅವರಿಬ್ಬರ ಫ್ಯಾನ್ಸ್ ನಡುವಿನ ತಿಕ್ಕಾಟಕ್ಕೂ ಕಾರಣವಾಗುತ್ತಿದೆ.

ಒಂದ್ಕಾಲದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ನಡುವೆ ಆಗಾಗ್ಗೆ ಸಂಘರ್ಷ ಏರ್ಪಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಇಂತದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ದರ್ಶನ್ ಹಾಗೂ ದೊಡ್ಮನೆ ಅಭಿಮಾನಿಗಳ ನಡುವಿನ ತಿಕ್ಕಾಟ ಹೊಸಪೇಟೆ ಘಟನೆಯಲ್ಲಿ ಬಟಾಬಯಲಾಗಿತ್ತು. ಇದೀಗ ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳ ನಡುವೆಯೂ ಇಂತದ್ದೇ ವಾತವರಣ ನಿರ್ಮಾಣವಾಗಿದೆ.
ಕೆಲ ದಿನಗಳಿಂದ ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಇದನ್ನು ಸ್ವತಃ ಧ್ರುವ ಸರ್ಜಾ ಬಹಿರಂಗಪಡಿಸಿದ್ದರು. 'ನಾನು ದರ್ಶನ್ ಅವರಿಗೆ ಒಂದೆರಡು ಪ್ರಶ್ನೆ ಕೇಳಬೇಕು. ಅವರೇ ಉತ್ತರ ಕೊಡಬೇಕು. ನನಗೂ ಸ್ವಾಭಿಮಾನ ಇದೆ' ಎಂದಿದ್ದರು. ಅಲ್ಲಿಂದ ಮುಂದೆ ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಕೂಡ ತಿಕ್ಕಾಟ ಶುರುವಾಯಿತು.
ಸೋಶಿಯಲ್ ಮೀಡಿಯಾದಲ್ಲಿ ಧ್ರುವ-ದರ್ಶನ್ ಫ್ಯಾನ್ಸ್ ಕಚ್ಚಾಟ ಮುಂದುವರೆದಿದೆ. ಇದೆಲ್ಲದರ ನಡುವೆ ಒರಿಜಿನಲ್ ಡಿಬಾಸ್ ಯಾರು? ಎನ್ನುವ ಚರ್ಚೆಯನ್ನು ಇದೀಗ ಹುಟ್ಟುಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ. ಕಳೆದ ಕೆಲ ವರ್ಷಗಳಿಂದ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು 'ಡಿಬಾಸ್' ಎಂದು ಕರೆಯುತ್ತಿದ್ದಾರೆ. ದರ್ಶನ್ ಬಂದಲ್ಲಿ ಹೋದಲ್ಲಿ 'ಬಾಸ್ ಬಾಸ್ ಡಿ ಬಾಸ್' ಎಂದು ಜೈಕಾರ ಹಾಕುತ್ತಾರೆ.

ದರ್ಶನ್ ಹೆಸರಿನಲ ಮೊದಲ ಅಕ್ಷರ 'ಡಿ'. ಹಾಗಾಗಿ ಅಭಿಮಾನಿಗಳು ಡಿ ಬಾಸ್ ಎಂದೇ ಸಂಬೋದಿಸುತ್ತಾರೆ. ಇನ್ನು ಧ್ರುವ ಸರ್ಜಾ ಹೆಸರು ಕೂಡ 'ಡಿ' ಅಕ್ಷರದಿಂದ ಶುರುವಾಗುತ್ತದೆ. ಹಾಗಾಗಿ ಇತ್ತೀಚೆಗೆ ಅವರ ಕೆಲ ಅಭಿಮಾನಿಗಳು 'ಡಿಬಾಸ್' ಎನ್ನಲು ಆರಂಭಿಸಿದ್ದಾರೆ. ಕೆಲ ದಿನಗಳು ಡಿಎಸ್ ಬಾಸ್ ಎನ್ನುತ್ತಿದ್ದರು. ದರ್ಶನ್- ಧ್ರುವ ಮನಸ್ತಾಪ ಬಹಿರಂಗ ಆಗುತ್ತಿದ್ದಂತೆ ಡಿಬಾಸ್ ಎಂದು ಕರೆಯಲು ಆರಂಭಿಸಿದ್ದಾರೆ.
ಇಷ್ಟೇ ಆಗಿದ್ದರೆ ಇಷ್ಟೆಲ್ಲಾ ಹೇಳುವ ಪ್ರಮೇಯ ಬರುತ್ತಿರಲಿಲ್ಲ. ಇತ್ತೀಚೆಗೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಿತ್ರಮಂದಿರದಲ್ಲಿ ಟ್ರೈಲರ್ ಪ್ರದರ್ಶನ ಮಾಡಲಾಯಿತು. ಸಾಕಷ್ಟು ಅಭಿಮಾನಿಗಳು 'ಮಾರ್ಟಿನ್' ಆರ್ಭಟದ ಝಲಕ್ ನೋಡಿ ಖುಷಿಯಾಗಿದ್ದರು. ಇದೇ ಸಮಯದಲ್ಲಿ 'ಒರಿಜಿನಲ್ ಡಿಬಾಸ್ ಧ್ರುವ ಸರ್ಜಾ' ಎಂದು ಬ್ಯಾನರ್ ಹಿಡಿದು ಸಂಭ್ರಮಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಒರಿಜಿನಲ್ ಡಿಬಾಸ್ ಯಾರು? ಎಂದು ಗೂಗಲ್ ಮಾಡಿ ನೋಡಿ ಎಂದು ಧ್ರುವ ಫ್ಯಾನ್ಸ್‌ಗೆ ದರ್ಶನ್ ಫ್ಯಾನ್ಸ್ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚೆಗೆ 'ಹೆಬ್ಬುಲಿ' ಸಿನಿಮಾ ರೀ ರಿಲೀಸ್ ವೇಳೆ ಸುದೀಪ್ ಅಭಿಮಾನಿಗಳು ಬ್ಯಾನರ್‌ನಲ್ಲಿ ಬರೆಸಿದ್ದ ಸಾಲುಗಳು ಇದೇ ರೀತಿ ಚರ್ಚೆ ಹುಟ್ಟಾಕ್ಕಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ವಿಚಾರಣಾಧೀನ ಕೈದಿ ಸಂಖ್ಯೆ '6106' ಅವರಿಗೆ ಸಿಕ್ಕಿದೆ. ಆದರೆ ಅಭಿಮಾನಿಗಳು ಈ ಸಂಖ್ಯೆಯನ್ನು ಟ್ರೆಂಡ್ ಮಾಡಿದ್ದರು. ಆದರೆ 'ಹೆಬ್ಬುಲಿ' ಚಿತ್ರದ ಬ್ಯಾನರ್‌ನಲ್ಲಿ 'ನಾನು ಕೈದಿ ಅಲ್ಲ ಸೈನಿಕ' ಎಂದು ಸುದೀಪ್ ಫ್ಯಾನ್ಸ್ ಬರೆಸಿ ಟಾಂಗ್ ಕೊಟ್ಟಿದ್ದರು.


Click it and Unblock the Notifications











