KD Teaser: ಮಳೆ.. ಮಚ್ಚು.. ರಕ್ತ.. 'ಕೆಡಿ' ಖದರ್ ಜೋರು.. ಆದ್ರೂ...
ಜೋರು ಮಳೆ, ಮಚ್ಚು ಹಿಡಿದು ಕಾಳಿ- ಅಗ್ನಿಹೋತ್ರಿ ಆರ್ಭಟ.. 70ರ ಕಾಲಘಟ್ಟ.. ರೌಡಿಗಳ ಹೊಡೆದಾಟ.. ಇದು 'ಕೆಡಿ' ಸಿನಿಮಾ ಮುನ್ನೋಟ.. ಅರ್ಥಾತ್ ಸದ್ಯ ಬಂದಿರುವ ಹೊಸ ಟೀಸರ್ ಹೈಲೆಟ್..
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಇದು. ಮುಂಬೈನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಿ ಭರ್ಜರಿ ಪ್ರಚಾರಕ್ಕೆ ಚಿತ್ರತಂಡ ಚಾಲನೆ ಕೊಟ್ಟಿದೆ. ಮೊದಲ ನೋಟದಲ್ಲೇ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಪ್ರೇಮ್ ಮೇಕಿಂಗ್, ಧ್ರುವ ಹಾಗೂ ಸಂಜುಬಾಬಾ ಮಾಸ್ ಪರ್ಫಾರ್ಮನ್ಸ್ ಝಲಕ್ ಕಿಕ್ ಕೊಡ್ತಿದೆ. ಟೀಸರ್ ನೋಡಿದ್ರೆ, ತೆರೆಮೇಲೆ ಸಿನಿಮಾ ಅದ್ಭುತ ಅನುಭವ ನೀಡುವ ಸುಳಿವು ಕೊಡ್ತಿದೆ.

ಇದು 'ಕೆಡಿ' ಚಿತ್ರದ ಮುಖ್ಯ ಪಾತ್ರಗಳನ್ನು ಪರಿಚಯಿಸುವ ಟೀಸರ್ ಎನ್ನುವಂತಿದೆ. ಅದರಲ್ಲೂ ಧ್ರುವ ಹಾಗೂ ಸಂಜಯ್ ದತ್ ದರ್ಬಾರ್ ಕೊಂಚ ಜೋರಾಗಿಯೇ ಇದೆ. 5 ಭಾಷೆಗಳಲ್ಲಿ ಟೀಸರ್ ಹೊರಬಂದಿದ್ದು ಸಖತ್ ಸದ್ದು ಮಾಡ್ತಿದೆ. ಆದರೆ ಸಿನಿಮಾ ಬಿಡುಗಡೆ ದಿನಾಂಕ ಮಾತ್ರ ರಿವೀಲ್ ಆಗಿಲ್ಲ. ಇನ್ನು ಎಷ್ಟು ದಿನ ಕಾಯಬೇಕು ಎಂದು ಸಿನಿರಸಿಕರು ಬೇಸರಗೊಂಡಿದ್ದಾರೆ.
ಟೀಸರ್‌ನಲ್ಲಿ ಧ್ರುವ, ದತ್ ಪ್ರಸೆನ್ಸ್ ಹಾಗೂ ಬಿಜಿಎಂ ಬೊಂಬಾಟಾಗಿದೆ. ಆದರೂ ಇನ್ನು ಏನೋ ಬೇಕಿತ್ತು ಎಂದು ಅನ್ನಿಸದೇ ಇರದು. ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಕಾಳಿದಾಸನಾಗಿ ಧ್ರುವ, ಮಚ್ಚ್ ಲಕ್ಷ್ಮಿಯಾಗಿ ರೀಷ್ಮಾ, ಧರ್ಮ ಪಾತ್ರದಲ್ಲಿ ರಮೇಶ್ ಅರವಿಂದ್, ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ, ಅಣ್ಣಯ್ಯಪ್ಪ ಆಗಿ ರವಿಚಂದ್ರನ್ ಖದರ್ ಹೇಗಿರುತ್ತದೆ ಎನ್ನುವುದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಬಹಳ ದೊಡ್ಡದಾಗಿ ಪ್ರೇಮ್ ಏನೋ ಪ್ಲ್ಯಾನ್ ಮಾಡಿರುವಂತೆ ಕಾಣುತ್ತಿದೆ.

ವಿಲಿಯಂ ಡೇವಿಡ್ ಕ್ಯಾಮರಾ ಕಣ್ಣಲ್ಲಿ ಒಂದಷ್ಟು ಸನ್ನಿವೇಶಗಳು ಮಜಾ ಕೊಡುತ್ತದೆ. ಕೆಲ ಸನ್ನಿವೇಶಗಳಲ್ಲಿ ಸಹಜತೆ ಕಾಣಿಸುತ್ತಿಲ್ಲ. ಅರ್ಜುನ್ ಜನ್ಯಾ ಬಿಜಿಎಂ ಕೂಡ ಚೆನ್ನಾಗಿದೆ. ನೋರಾ ಫತೇಹಿ ಗ್ಲಾಮರ್ ಟಚ್ ಕೂಡ ಚಿತ್ರಕ್ಕಿದೆ. ಆರ್ಮುಗ ರವಿಶಂಕರ್ ಖಡಕ್ ವಾಯ್ಸ್‌ನಲ್ಲಿ ಕೆಲ ಡೈಲಾಗ್ಸ್ ಮಜಾ ಕೊಡುತ್ತದೆ.
ಇನ್ನು ಬಹುತೇಕ ಫ್ರೇಮ್‌ಗಳಲ್ಲಿ ಕತ್ತಲು ಆವರಿಸಿಕೊಂಡಿದೆ. 70ರ ಕಾಲಘಟ್ಟ ತೋರಿಸಲು ಚಿತ್ರತಂಡ ಇದನ್ನು ಆಯ್ಕೆ ಮಾಡಿಕೊಂಡಂತೆ ಕಾಣ್ತಿದೆ. ಈಗಾಗಲೇ ಒಂದಷ್ಟು ಸಿನಿಮಾಗಳು ಇದೇ ರೀತಿ ಬಂದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. 'KD' ಸಿನಿಮಾ ಕೂಡ ಅಂಥದ್ದೇ ಅನುಭವ ನೀಡುತ್ತಾ ಕಾದು ನೋಡಬೇಕಿದೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ, ಯಾವುದಕ್ಕೂ ರಾಜಿಯಾಗದೇ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ.
ಬಾಯಲ್ಲಿ ಮಚ್ಚು ಕಚ್ಚಿಕೊಂಡು ಕಿಡಿಗೇಡಿಯನ್ನು ಧ್ರುವ ತನ್ನ ಸೊಂಟಕ್ಕೆ ಸುತ್ತಿಕೊಂಡಂತೆ ಹಿಡಿದು ಹೆಜ್ಜೆ ಹಾಕುವ ದೃಶ್ಯ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಇನ್ನು ಪೊಲೀಸ್ ಸ್ಟೇಷನ್‌ನಲ್ಲಿ ಸಂಜಯ್ ದತ್ ಮಾಸ್ ಡೈಲಾಗ್ ಕಿಕ್ ಕೊಡ್ತಿದೆ. ನಿರ್ದೇಶಕ ಪ್ರೇಮ್ ಮೇಲೆ ಬಹಳಷ್ಟು ಜನ ನಂಬಿಕೆ ಇಟ್ಟಿದ್ದಾರೆ. ಹಿಂದಿನ ಸಿನಿಮಾಗಳಲ್ಲಿ ಆಗಿದ್ದ ತಪ್ಪು ಪುನರಾವರ್ತನೆ ಮಾಡದೇ ಈ ಬಾರಿ ಪ್ರೇಕ್ಷಕರನ್ನು ರಂಜಿಸುತ್ತಾರೆ ಎಂದು ಕಾಯುತ್ತಿದ್ದಾರೆ.
'ಮಾರ್ಟಿನ್' ಸಿನಿಮಾ ಮಾಡಿ ಸೋತಿದ್ದ ಧ್ರುವ ಸರ್ಜಾ ಕೂಡ ಭರ್ಜರಿ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ವಿಭಿನ್ನ ಶೇಡ್‌ಗಳಲ್ಲಿ ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ನೋಡಲು ಸಿನಿರಸಿಕರು ಎದುರು ನೋಡುತ್ತಿದ್ದಾರೆ. ವರಲಕ್ಷ್ಮಿ ಹಬ್ಬಕ್ಕೆ 'ಕೆಡಿ' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಮತ್ತಷ್ಟು ತಡವಾಗುವ ಸುಳಿವು ಸಿಕ್ತಿದೆ. ಈಗಾಗಲೇ 2 ಸಾಂಗ್ ಹೊರಬಂದು ಹಿಟ್ ಆಗಿದೆ. ಇನ್ನುಳಿದ ಸಾಂಗ್ಸ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.


Click it and Unblock the Notifications











