ಪೊಗರು ಸಿನಿಮಾ ನಂತರ ಹಸೆಮಣೆ ಏರಲಿದ್ದಾರೆ ನಟ ಧ್ರುವ ಸರ್ಜಾ?
Recommended Video
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹ್ಯಾಟ್ರಿಕ್ ಹಿಟ್ ನೀಡಿರುವ ಧ್ರುವ ಸರ್ಜಾ ಈಗ ನಾಲ್ಕನೆ ಹಿಟ್ ಗಾಗಿ ಕಾದಾಡುತ್ತಿದ್ದಾರೆ. ಪೊಗರು ಚಿತ್ರಕ್ಕಾಗಿ ಆಕ್ಷನ್ ಪ್ರಿನ್ಸ್ ಬಾಡಿ ಬಿಲ್ಡ್ ಮಾಡಿ ಕಟ್ಟುಮಸ್ತಾದ ದೇಹದ ಮೂಲಕ ಪೊಗರು ತೋರಿಸಿದ್ದಾರೆ.
ಸದ್ಯ ಪೊಗರು ಚಿತ್ರದ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಬಳ್ಳಾರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಪೊಗರು ಧ್ರುವ ಅಭಿನಯದ ನಾಲ್ಕನೆ ಸಿನಿಮಾ. ಪೊಗರು ನಂತರ ಧ್ರುವ ಮುಂದಿನ ಸಿನಿಮಾ ಸುದ್ದಿ ಬಾರಿ ಸದ್ದು ಮಾಡುತ್ತಿದೆ. ಆದ್ರೆ ಮುಂದಿನ ಸಿನಿಮಾ ಶುರು ಮಾಡುವ ಮೊದಲು ಧ್ರುವ ಹಸೆಮಣೆ ಏರುವ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ವರ್ಷ ಬಹುಕಾಲದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ
ಕಳೆದ ವರ್ಷ ಡಿಸೆಂಬರ್ ನಲ್ಲಿ ನಟ ಧ್ರುವ ಸರ್ಜಾ ಬಹುಕಾಲದ ಗೆಳತಿ ಜೊತೆ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್ 9ರಂದು ಧ್ರುವ ಸರ್ಜಾ ಮತ್ತು ಪ್ರೇರಣಾ ಎಂಗೇಜ್ ಮೆಂಟ್ ನಡೆದಿತ್ತು. ಆದರೆ ಮದುವೆ ಡೇಟ್ ಮಾತ್ರ ಇನ್ನು ಅನೌನ್ಸ್ ಮಾಡಿರಲಿಲ್ಲ. ಈ ಮದುವೆ ಆಗುವುದು ಪಕ್ಕಾ ಎಂದು ಹೇಳಿದ್ದರು. ಮೂಲಗಳ ಪ್ರಕಾರ ಧ್ರುವ ಮತ್ತು ಪ್ರೇರಣಾ ಮದುವೆ ನವೆಂಬರ್ ನಲ್ಲಿ ನಡೆಯಲಿದೆಯಂತೆ.

ನವೆಂಬರ್ ನಲ್ಲಿ ಧ್ರುವ ಸರ್ಜಾ ಮದುವೆ
ಸುಮಾರು 14 ವರ್ಷದಿಂದ ಧ್ರುವ ಮತ್ತು ಪ್ರೇರಣಾ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಬರುವ ಮೊದಲೆ ಧ್ರುವ ಪ್ರೀತಿಯಲ್ಲಿ ಬಿದ್ದಿದ್ದರು. ದೀರ್ಘಕಾಲದ ಪ್ರೀತಿಗೆ ಈ ವರ್ಷ ಮದುವೆ ಎನ್ನುವ ಮುದ್ರೆ ಬೀಳುವ ಸಾಧ್ಯತೆ ಇದೆ. ಹೌದು, ಮೂಲಗಳ ಪ್ರಕಾರ ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆ ನವೆಂಬರ್ ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮದುವೆ ನಂತರ ಮುಂದಿನ ಸಿನಿಮಾ
ಪೊಗರು ಚಿತ್ರದ ನಂತರ ಧ್ರುವ ಮುಂದಿನ ಸಿನಿಮಾ ಪ್ರಾರಂಭಿಸುವ ಮೊದಲು ಮದುವೆ ಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ನಂತರ ಧ್ರುವ ಮತ್ತು ನಂದಕಿಶೋರ್ ಸಿನಿಮಾ ಸೆಟ್ಟೇರಲಿದೆ. ಪೊಗರು ಚಿತ್ರ ನಂದಕಿಶೋರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಪೊಗರು ನಂತರ ಮತ್ತೆ ಒಂದಾಗಲಿದ್ದಾರೆ ಧ್ರುವ ಮತ್ತು ನಂದಕಿಶೋರ್. ಇಬ್ಬರ ಚಿತ್ರಕ್ಕೆ ನಿರ್ಮಾಪಕ ಉದಯ್ ಕೆ ಮೆಹ್ತ ಬಂಡವಾಳ ಹೂಡಲಿದ್ದಾರೆ.

ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
ಧ್ರುವ ಸರ್ಜಾ ಮತ್ತು ನಂದಕಿಶೋರ್ ಕಾಂಬಿನೇಷನ್ ನ ಮುಂದಿನ ಸಿನಿಮಾ ಹುಟ್ಟುಹಬ್ಬದಂದು ಅನೌನ್ಸ್ ಮಾಡುವ ಸಾಧ್ಯತೆ ಇದೆ. ಎರಡನೆ ಭಾರಿ ಒಂದಾಗುತ್ತಿರುವ ಜೋಡಿಯ ಮೇಲೆ ಚಿತ್ರಾಭಿಮಾನಿಗಳ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಅಂದ್ಹಾಗೆ ಧ್ರುವ ಸರ್ಜಾ ಹುಟ್ಟುಹಬ್ಬ ಮುಂದಿನ ತಿಂಗಳು ಆಕ್ಟೋಬರ್ 6. ಹುಟ್ಟುಹಬ್ಬಕ್ಕೆ ಸಿನಿಮಾ ಅನೌನ್ಸ್ ಆದರೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ.


Click it and Unblock the Notifications











