ಧ್ರುವ ಸರ್ಜಾ ಈಗ 'ಕೆಡಿ' ಅಲ್ಲ 'ಕ್ರಿಮಿನಲ್'; ಗುರೂ ಈ ಸಿನಿಮಾ ಆದ್ರು ಬೇಗ ಬರುತ್ತಾ?
ಯಾಕೋ ಧ್ರುವ ಸರ್ಜಾಗೆ ಅದೃಷ್ಟ ಪದೇ ಪದೆ ಕೈ ಕೊಡ್ತಿದೆ. ನಟಿಸಿದ ಸಿನಿಮಾಗಳು ಮತ್ತೆ ಮತ್ತೆ ತಡವಾಗುತ್ತಿದೆ. ಸದ್ಯಕ್ಕೆ 'ಕೆಡಿ' ಬರೋದು ತಡವಾಗುತ್ತದೆ ಎಂದು ಆಕ್ಷನ್ ಪ್ರಿನ್ಸ್ ಹೊಸ ಸಿನಿಮಾ ಆರಂಭಿಸಿದ್ದಾರೆ. ಸದ್ದಿಲ್ಲದೇ ಧ್ರುವ ಸರ್ಜಾ ನಟನೆಯ 7ನೇ ಸಿನಿಮಾ 'ಕ್ರಿಮಿನಲ್' ಸೆಟ್ಟೇರಿದೆ.
ಈ ಹಿಂದೆ 'ಕೆರೆಬೇಟೆ' ಚಿತ್ರ ಕಟ್ಟಿಕೊಟ್ಟಿದ್ದ ರಾಜ್ ಗುರು ಈಗ 'ಕ್ರಿಮಿನಲ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ. ಹಾವೇರಿಯಲ್ಲಿ ನಡೆದ ಒಂದು ಪ್ರೇಮಕಥೆಯನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಈ ಹಿಂದೆ 'ಭರ್ಜರಿ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.

ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ 'ಕ್ರಿಮಿನಲ್' ಚಿತ್ರ ನಿರ್ಮಾಣ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ ಚಿತ್ರಕ್ಕಿದೆ. ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ.
ಚಿತ್ರದಲ್ಲಿ ಹಳ್ಳಿಹೈದನಾಗಿ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ. ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಸೆರೆಹಿಡಿಯಲಾಗಿದೆ. ನಗರದ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ 'ಕ್ರಿಮಿನಲ್' ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ಶರ್ಟು, ಪ್ಯಾಂಟು ಧರಿಸಿ ಹೆಗಲ ಮೇಲೆ ಹಸಿರು ಬಣ್ಣದ ಟವೆಲ್ ಹಾಕಿಕೊಂಡು ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಸಲ್ವಾರ್ ಧರಿಸಿ ರಚಿತಾ ರಾಮ್ ಮಿಂಚಿದ್ದಾರೆ. ಇಡೀ ಸಿನಿಮಾದಲ್ಲಿ ಇಬ್ಬರೂ ಇದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಧ್ರುವ ಸರ್ಜಾ ನಟನೆಯ ಸಿನಿಮಾಗಳೆಲ್ಲಾ ನಾನಾ ಕಾರಣಕ್ಕೆ ತಡವಾಗುತ್ತಾ ಬರ್ತಿವೆ. 'ಕ್ರಿಮಿನಲ್' ಸಿನಿಮಾ ಆದರೂ ಬೇಗ ಬರುತ್ತಾ ಕಾದು ನೋಡಬೇಕಿದೆ.
'ಅದ್ಧೂರಿ', 'ಬಹದ್ದೂರ್' ಹಾಗೂ 'ಭರ್ಜರಿ' ಹೀಗೆ ಧ್ರುವ ನಟಿಸಿದ ಮೊದಲ 3 ಸಿನಿಮಾಗಳು ಹಿಟ್ ಆಗಿತ್ತು. ಪ್ರತಿ ಚಿತ್ರಕ್ಕೆ ಎರಡು, ಮೂರು ವರ್ಷ ಸಮಯದ ಹಿಡಿಸಿತ್ತು. ಬಳಿಕ 4 ವರ್ಷಗಳ ಬಳಿಕ 'ಪೊಗರು' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಇದಕ್ಕೆ ಕೋವಿಡ್ ಸಂಕಷ್ಟವೂ ಕಾರಣವಾಗಿತ್ತು. ಆದರೆ ಬಳಿಕ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ 3 ವರ್ಷ ಬೇಕಾಯಿತು. ಈ ಎರಡೂ ಸಿನಿಮಾಗಳು ಸೋತು ಸುಣ್ಣವಾಗಿದ್ದವು.
ಬಳಿಕ 2022ರಲ್ಲಿ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರವನ್ನು ಧ್ರುವ ಆರಂಭಿಸಿದ್ದರು. ಆದರೆ ಈವರೆಗೆ ಆ ಸಿನಿಮಾ ತೆರೆಗೆ ಬಂದಿಲ್ಲ. ಈ ವರ್ಷ ಬರೋದು ಇಲ್ಲ. ಹೆಚ್ಚು ಕಮ್ಮಿ 4 ವರ್ಷಗಳ ಬಳಿಕ ಸಿನಿಮಾ ತೆರೆಗೆ ಬರ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಪ್ರೇಮ್ ಸಿನಿಮಾ ಬಿಡುಗಡೆ ಮಾಡ್ತೀನಿ ಅಂದ್ರು. ವರ್ಷ ಕಳೆದ್ರು ಆ ಸುಳಿವೇ ಸಿಗ್ತಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಸ್ಟಾರ್ ನಟನ ಸಿನಿಮಾ ಪದೇ ಪದೆ ತಡವಾಗುತ್ತಿರುವುದು ಬೇಸರದ ಸಂಗತಿ.
'ಕ್ರಿಮಿನಲ್' ಚಿತ್ರದಲ್ಲಿ ಹೋರಿ ಹಿಡಿಯುವ ಪೈಲ್ವಾನ್ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಇನ್ನು ಧ್ರುವ ತಾಯಿ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧ ಬಣ್ಣ ಹಚ್ಚುತ್ತಿದ್ದಾರೆ. 'ಮಫ್ತಿ' ಖ್ಯಾತಿಯ ನರ್ತನ್ ಹಾಗೂ ದುನಿಯಾ ಸೂರಿ ಕೂಡ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಯಾವಾಗ ಆ ಸಿನಿಮಾಗಳು ಸೆಟ್ಟೇರುತ್ತದೆ ಎನ್ನುವುದು ಗೊತ್ತಿಲ್ಲ. ಅದಕ್ಕೂ ಮುನ್ನ 'ಕ್ರಿಮಿನಲ್' ಸಿನಿಮಾ ತೆರೆಗೆ ಬರಬೇಕಿದೆ.


Click it and Unblock the Notifications











