ಪೊಗರು ವಿವಾದ: ಫಿಲಂ ಚೇಂಬರ್ ಬಳಿ ಧ್ರುವ ಸರ್ಜಾ ಅಭಿಮಾನಿಗಳು ಪ್ರತಿಭಟನೆ
ಪೊಗರು ಚಿತ್ರದ ವಿರುದ್ಧ ಹಾಗೂ ನಟ ಧ್ರುವ ಸರ್ಜಾ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಧ್ರುವ ಸರ್ಜಾ ಅಭಿಮಾನಿಗಳು ಫಿಲಂ ಚೇಂಬರ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಅಂಬೇಡ್ಕರ್ ಸೇನೆ ಮತ್ತು ಧ್ರುವ ಸರ್ಜಾ ಅಭಿಮಾನಿಗಳು ಇಂದು ಬೆಳಗ್ಗೆ ಶಿವಾನಂದ ವೃತ್ತದಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.
''ಸಿನಿಮಾ ಅಂದ್ರೆ ಕಾಲ್ಪನಿಕ, ಕೆಲವೊಮ್ಮೆ ಇಂತಹ ದೃಶ್ಯಗಳನ್ನು ಮಾಡಬೇಕಾಗುತ್ತದೆ. ಚಿತ್ರದ ನಿರ್ದೇಶಕರು, ನಿರ್ಮಾಪಕರು ನಿನ್ನೆ ಕ್ಷಮೆ ಕೇಳಿದ್ದಾರೆ. ಪೊಗರು ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂತಯ ಸಮಯದಲ್ಲಿ ಕೆಲವು ದೃಶ್ಯಗಳನ್ನು ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ'' ಎಂದು ಮನವಿ ಸಲ್ಲಿಸಿದ್ದಾರೆ.

''ಯೂಟ್ಯೂಬರ್ ಒಬ್ಬರು ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅವರು ಧ್ರುವ ಸರ್ಜಾ ಅಭಿಮಾನಿಗಳ ಕ್ಷಮೆ ಕೇಳಬೇಕು'' ಎಂದು ಆಗ್ರಹಿಸಿದ್ದಾರೆ.
ಏನಿದು ಘಟನೆ?
ಬ್ರಾಹ್ಮಣ ಸಮುದಾಯದ ಬಗ್ಗೆ ಪೊಗರು ಚಿತ್ರದಲ್ಲಿ ಕೀಳಾಗಿ ತೋರಿಸಲಾಗಿದೆ, ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಖಂಡಿಸಿ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ಮಾಡಿದ್ದರು. ಈ ಸಂಬಂಧ ಫಿಲಂ ಚೇಂಬರ್‌ನಲ್ಲಿ ಬ್ರಾಹ್ಮಣ ಸಮುದಾಯದವರು ದೂರು ನೀಡಿದ್ದರು. ನಂತರ ಬ್ರಾಹ್ಮಣ ಸಮುದಾಯ ಮತ್ತು ಪೊಗರು ಚಿತ್ರತಂಡದ ನಡುವೆ ಫಿಲಂ ಚೇಂಬರ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲವು ಪರಿಹಾರ ಕ್ರಮ ಸೂಚಿಸಿತ್ತು.
ಬ್ರಾಹ್ಮಣ ಸಮುದಾಯ ಬೇಡಿಕೆಯಿಟ್ಟಿರುವ ದೃಶ್ಯಗಳನ್ನು ಕತ್ತರಿಸಲು ನಿರ್ದೇಶಕರು ಒಪ್ಪಿಗೆ ಸೂಚಿಸಿದರು. ಈಗಾಗಲೇ ಚಿತ್ರದಲ್ಲಿ ಗುರುತಿಸಲಾದ ದೃಶ್ಯಗಳನ್ನು ತೆಗೆಯಲಾಗಿದೆ ಎಂಬ ಮಾಹಿತಿ ಇದೆ. ಈ ಮೂಲಕ ಪೊಗರು ವಿವಾದ ಅಂತ್ಯವಾಗಿತ್ತು.
ಆದ್ರೆ, ಪೊಗರು ಸಿನಿಮಾಗೆ ಸಂಬಂಧಿಸಿದಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಧ್ರುವ ಸರ್ಜಾ ಅಭಿಮಾನಿಗಳು ಹಾಗೂ ಅಂಬೇಡ್ಕರ್ ಸೇನೆ ಒತ್ತಾಯಿಸಿದೆ.
ಈ ವೇಳೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ಎನ್ ಎಂ ಸುರೇಶ್ ಅವರು ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.


Click it and Unblock the Notifications