ಧ್ರುವ ಸರ್ಜಾ ಚಿತ್ರಕ್ಕೆ ಸುಕ್ಕಾ ಸೂರಿ ಆಕ್ಷನ್ ಕಟ್? ಅದು ಯಾವ ಕಾಲಕ್ಕೋ?
ದುನಿಯಾ ಸೂರಿ ಹಾಗೂ ಧ್ರುವ ಸರ್ಜಾ ಇಬ್ಬರಿಗೂ ದೊಡ್ಡ ಬ್ರೇಕ್ ಬೇಕಿದೆ. ಸದ್ಯ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ.
ವಿಭಿನ್ನ ಕಥೆ, ಸ್ಕ್ರೀನ್‌ಪ್ಲೇ ಹಾಗೂ ರಿಯಲಿಸ್ಟಿಕ್ ರಾ ಮೇಕಿಂಗ್ ಚಿತ್ರಗಳಿಂದ ಗಮನ ಸೆಳೆದವರು ಸೂರಿ. ಖಡಕ್ ಆಕ್ಷನ್ ಸಿನಿಮಾಗಳಿಂದ ಅಭಿಮಾನಿಗಳನ್ನು ರಂಜಿಸಿದವರು ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೆ ಸೇರಿ ಸಿನಿಮಾ ಮಾಡಿದರೆ ಮಾಸ್ ಪ್ರೇಕ್ಷಕರಿಗೆ ಹಬ್ಬವೇ ಸರಿ. ಸದ್ಯ 'ಕೆಡಿ' ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ. ಮುಂದೆ 'ಕೆರೆಬೇಟೆ' ಸಿನಿಮಾ ಖ್ಯಾತಿಯ ನಿರ್ದೇಶಕ ರಾಜ್ ಗುರು ಜೊತೆ ಕೈಜೋಡಿಸುತ್ತಾರೆ ಎನ್ನಲಾಗ್ತಿದೆ. ಈ ನಡುವೆ ಸೂರಿ ನಿರ್ದೇಶನದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ನರ್ತನ್ ಜೊತೆಗೂ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

'ಟಗರು' ಬಳಿಕ ಸೂರಿ ನಿರ್ದೇಶನದ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಂತ ಒಂದರ ಹಿಂದೆ ಒಂದು ಸಿನಿಮಾ ಅವರು ಮಾಡ್ತಿಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. 'ಟಗರು- 2' ಬರಬಹುದು ಎನ್ನುವ ಲೆಕ್ಕಾಚಾರವೂ ಇದೆ. ಆದರೆ ಅದಕ್ಕೆ ಇನ್ನು ಕಾಲ ಕೂಡಿ ಬಂದಿಲ್ಲ. 'ಬ್ಯಾಡ್ ಮ್ಯಾನರ್ಸ್' ಸೋಲಿನ ಬಳಿಕ ಯುವ ರಾಜ್‌ಕುಮಾರ್ ಜೊತೆ ಸೂರಿ ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.
'ಯುವ', 'ಎಕ್ಕ' ಬಳಿಕ ಇದು ಯುವ ರಾಜ್‌ಕುಮಾರ್ ನಟನೆಯ 3ನೇ ಸಿನಿಮಾ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಈ ಚಿತ್ರವನ್ನು ನಿರ್ಮಾಣ ಮಾಡ್ತಿವೆ. ಯುವ ರಾಜ್‌ಕುಮಾರ್ ಜೋಡಿಯಾಗಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಟಿಸುವುದು ಖಚಿತವಾಗಿದೆ. ಇದು ಸೂರಿ ಕನಸಿನ 'ಕಾಗೆ ಬಂಗಾರ'-3 ಕಥೆ ಎನ್ನುವ ಊಹಾಪೋಹ ಕೂಡ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮುಂದಿನ ವರ್ಷವೇ ಸೂರಿ ಜೊತೆಗಿನ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ಸೂರಿ ಹಾಗೂ ಧ್ರುವ ಸರ್ಜಾ ಭೇಟಿಯಾಗಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಗಾಂಧಿನಗರದಲ್ಲಿ ಗುಲ್ಲಾಗಿದೆ. ಆದರೆ ಕಥೆ, ಬ್ಯಾನರ್ ಯಾವುದು ಫೈನಲ್ ಆಗಿಲ್ಲವಂತೆ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳು 'ಕೆಡಿ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್ ಎನ್ನುವುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಸೂರಿ- ಧ್ರುವ ಜೋಡಿಯ ಸಿನಿಮಾ ಶುರುವಾಗುವುದು ಯಾವಾಗ? ಬಿಡುಗಡೆಯಾಗುವುದು ಯಾವ ಕಾಲಕ್ಕೋ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸ್ಟಾರ್ ನಟರು, ನಿರ್ದೇಶಕರು ಬೇಗ ಬೇಗ ಸಿನಿಮಾ ಮಾಡಬೇಕು, ವರ್ಷಕ್ಕೆ ಒಂದೆರಡು ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಲೇ ಇದೆ. ಆದರೆ ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾವು ಮಾಡಿದಾಗಲೇ ಸಿನಿಮಾ ಎನ್ನುವ ಮನೋಭಾವನೆ ಕೆಲವರದ್ದು. ಧ್ರುವ ಸರ್ಜಾ ಪ್ರತಿ ಚಿತ್ರಕ್ಕೆ ಮೂರ್ನಾಲ್ಕು ವರ್ಷ ಸಮಯ ವ್ಯಯಿಸುತ್ತಿದ್ದಾರೆ. ಆದರೆ 'ಭರ್ಜರಿ' ಬಳಿಕ ಬಂದ ಅವರ ಸಿನಿಮಾಗಳು ಗೆಲ್ಲಲೇ ಇಲ್ಲ. ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಹಿಟ್ಸ್ ಕೊಟ್ಟ ಸೂರಿ ಕೂಡ ಈಗ ಸಿನಿಮಾ ಮಾಡುವ ವೇಗ ತಗ್ಗಿಸಿದ್ದಾರೆ. ಹಾಗಾಗಿ ಸೂರಿ- ಧ್ರುವ ಜೋಡಿ ಸಿನಿಮಾ ನೋಡಲು ಪ್ರೇಕ್ಷಕರು ಇನ್ನೆರಡು ವರ್ಷ ಕಾಯಬೇಕು ಅನ್ನಿಸುತ್ತದೆ.


Click it and Unblock the Notifications











