ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್: ಧ್ರುವ ಸರ್ಜಾ ವ್ಯಂಗ್ಯ
ಮೀ ಟೂ ಅಭಿಯಾನದ ಸಮಯ, 2018ರಲ್ಲಿ ನಟಿ ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕಬ್ಬನ್‌ಪಾರ್ಕ್ ಪೊಲೀಸರು ಕೈ ಬಿಟ್ಟಿದ್ದು, ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ದೊರೆತಿದೆ.
ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದಂಥಹಾ ಗಂಭೀರ ಆರೋಪ ಹೊರಿಸಲಾದಾಗ ಅರ್ಜುನ್ ಸರ್ಜಾ ಕುಟುಂಬದವರಾದ ಧ್ರುವ ಸರ್ಜಾ, ಆಗ ಬದುಕಿದ್ದ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಅರ್ಜುನ್ ಸರ್ಜಾ ಮಾವ ರಾಜೇಶ್, ಕುಟುಂಬ ಆಪ್ತ ಪ್ರಶಾಂತ್ ಸಂಬರ್ಗಿ ಇನ್ನೂ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಶ್ರುತಿ ಹರಿಹರನ್‌ಗೆ ಬೆಂಬಲ ಸೂಚಿಸಿದ್ದ ನಟ ಚೇತನ್ ಅಹಿಂಸಗೆ ನಟ ಧ್ರುವ ಸರ್ಜಾ ಬಹಿರಂಗವಾಗಿ ಸವಾಲು ಹಾಕಿದ್ದರು.
ಇದೀಗ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ದೊರೆತಿದ್ದು, ಈ ಬಗ್ಗೆ ಧ್ರುವ ಸರ್ಜಾ, ಮೇಘನಾ ರಾಜ್ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಧ್ರುವ ಸರ್ಜಾ ಪರೋಕ್ಷವಾಗಿ ಶ್ರುತಿ ಹರಿಹರನ್ ಹಾಗೂ ಅವರನ್ನು ಬೆಂಬಲಿಸಿದವರನ್ನು ವ್ಯಂಗ್ಯವಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪ್ರಕಟಿಸಿರುವ ಧ್ರುವ ಸರ್ಜಾ, ಸೊಳ್ಳೆ ಬ್ಯಾಟ್‌ನಿಂದ ಸೊಳ್ಳೆಗಳನ್ನು ಹೊಡೆಯುತ್ತಿರುವ ವಿಡಿಯೋ ಪ್ರಕಟಿಸಿ, 'ಸೊಳ್ಳೆ ಕ್ರಿಮಿ ಕೀಟ' ಎಂದು ಬರೆದಿದ್ದಾರೆ. ಅದರ ಜೊತೆಗೆ 'ಧರ್ಮೋ ರಕ್ಷತಿ ರಕ್ಷಿತಃ' ಎಂದು ಸಹ ಬರೆದುಕೊಂಡಿದ್ದಾರೆ.

ಮೇಘನಾ ರಾಜ್ ಇನ್‌ಸ್ಟಾಗ್ರಾಂ ಪೋಸ್ಟ್
ಇನ್ನು ನಟಿ ಮೇಘನಾ ರಾಜ್ ಸಹ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ''ಜಂಟಲ್‌ಮ್ಯಾನ್ ಸದಾ ಜಂಟಲ್‌ಮ್ಯಾನ್ ಆಗಿಯೇ ಇರುತ್ತಾರೆ'' ಎಂದಿದ್ದಾರೆ. ಅರ್ಜುನ್ ಸರ್ಜಾ 'ಜಂಟಲ್‌ಮ್ಯಾನ್' ಹೆಸರಿನ ಸಿನಿಮಾ ಮಾಡಿದ್ದರು. ಅಲ್ಲದೆ ಜಂಟಲ್‌ಮ್ಯಾನ್ ಎಂದೇ ಅವರು ಚಿತ್ರರಂಗದಲ್ಲಿ ಹೆಸರು ಪಡೆದಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಶ್ರುತಿ ಹರಿಹರನ್
'ವಿಸ್ಮಯ' ಸಿನಿಮಾದ ಚಿತ್ರೀಕರಣ ವೇಳೆ ಅರ್ಜುನ್ಸರ್ಜಾ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿತ್ತು ಎಂದು ಶ್ರುತಿ ಹರಿಹರನ್ಆರೋಪಿಸಿದ್ದರು. ಅರುಣ್ವೈದ್ಯನಾಥನ್ನಿರ್ದೇಶನದ 'ವಿಸ್ಮಯ' ಸಿನಿಮಾದಲ್ಲಿ ಶ್ರುತಿ ಹರಿಹರನ್ಮತ್ತು ಅರ್ಜುನ್ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಶ್ರುತಿ ಹರಿಹರನ್ಆರೋಪ ಹೊರಿಸಿದ್ದರು. ಬಳಿಕ ಸ್ಯಾಂಡಲ್ವುಡ್ನಲ್ಲಿ ವಿವಾದದ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಮೀ ಟೂ ಅಭಿಯಾನ ಜೋರಾಗಿದ್ದ ಕಾಲವದು. ಕೆಲವರು ಶ್ರುತಿ ಹರಿಹರನ್ ಪರವಾಗಿ, ಕೆಲವರು ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ್ದರು.

ಅಂಬರೀಶ್ ನೇತೃತ್ವದಲ್ಲಿ ಸಭೆ
ವಿವಾದ ಬಗೆಹರಿಸಲು ರೆಬೆಲ್ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಯಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಶೃತಿ ಹರಿಹರನ್ ಹೇಳಿದ್ದರು. ಕಬ್ಬನ್ಪಾರ್ಕ್ಪೊಲೀಸ್ಠಾಣೆಯಲ್ಲಿ ಅರ್ಜುನ್ಸರ್ಜಾ ವಿರುದ್ಧ ದೂರು ದಾಖಲಿಸಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ, ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಕೇಸ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳ ಮಹಜರ್, ದೂರು ನೀಡಿದವರು, ಆರೋಪಿತರ ವಿಚಾರಣೆಗಳನ್ನು ನಡೆಸಿದರು. ಆದರೆ ಆರೋಪ ಸಾಬೀತುಪಡಿಸಲು ಸೂಕ್ತ ಸಾಕ್ಷ್ಯ ಸಿಗದ ಕಾರಣ ಇದೀಗ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ-ನಟಿ
ಇದೀಗ ಶ್ರುತಿ ಹರಿಹರನ್ ಕನ್ನಡದ 'ಸಾಲಗಾರ', 'ಸ್ಟ್ರಾಬೆರಿ', ಡಾಲಿ ಧನಂಜಯ್ ನಟನೆಯ 'ಹೆಡ್ಡು ಬುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟ ಅರ್ಜುನ್ ಸರ್ಜಾ, 'ಮರಕ್ಕರ್; ಅರಬ್ಬಿ ಕಡಲಿಂಟೆ ಸಿಂಹಂ' ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಡಿಸೆಂಬರ್ 02ರಂದು ತೆರೆಗೆ ಬರಲಿದೆ. ಸಿನಿಮಾಕ್ಕೆ ಈಗಾಗಲೇ ರಾಷ್ಟ್ರಪ್ರಶಸ್ತಿ ಸಂದಿರುವುದು ವಿಶೇಷ. ಇದರ ಹೊರತಾಗಿ ತೆಲುಗಿನಲ್ಲಿ ರವಿತೇಜ ನಟನೆಯ 'ಖಿಲಾಡಿ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ನಟಿಸುತ್ತಿದ್ದಾರೆ. ತಮಿಳಿನ 'ಮೇಧವಿ' ಹಾಗೂ 'ವಿರುಣ್ಣು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











