ಜೋಗಿ ಪ್ರೇಮ್- ಧ್ರುವ ಜೋಡಿಯ 'KD'ಯನ್ನು ಈ ವರ್ಷ ಮರೆತುಬಿಡಬೇಕಾ?
ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'KD' ಕೂಡ ಒಂದು. 3 ವರ್ಷದ ಹಿಂದೆ ಸೆಟ್ಟೇರಿದ್ದ ಸಿನಿಮಾ ಇನ್ನು ಚಿತ್ರಮಂದಿರಕ್ಕೆ ಬರುವ ಸುಳಿವು ಸಿಗುತ್ತಿಲ್ಲ. ಈ ವರ್ಷ ಸಿನಿಮಾ ತೆರೆಗೆ ಬರೋದೇ ಅನುಮಾನ ಎನ್ನಲಾಗ್ತಿದೆ. ಈಗಾಗಲೇ 2 ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ಟೀಸರ್ ಕೂಡ ಬಂದಿತ್ತು. ಆದರೆ ಸಿನಿಮಾ ರಿಲೀಸ್ ಡೇಟ್ ಮಾತ್ರ ಪಕ್ಕಾ ಆಗ್ಲಿಲ್ಲ.
ಕಳೆದ ವರ್ಷ ಡಿಸೆಂಬರ್‌ನಲ್ಲೇ 'KD' ಸಿನಿಮಾ ತೆರೆಗೆ ತರ್ತಿವಿ ಎಂದು ಚಿತ್ರತಂಡ ಘೋಷಿಸಿತ್ತು. ಬೇರೆ ಯಾವುದೇ ಸಿನಿಮಾ ಬಂದರೂ ಹೆದರಲ್ಲ, ಅಂದುಕೊಂಡ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದು ಪ್ರೇಮ್ ಹೇಳಿದ್ದರು. ಆದರೆ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಟೂರ್ ಮಾಡಿ ಟೀಸರ್ ರಿಲೀಸ್ ಮಾಡಿತ್ತು ಚಿತ್ರತಂಡ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'KD' ಚಿತ್ರ ನಿರ್ಮಾಣ ಆಗ್ತಿದೆ. ಸಂಜಯ್ ದತ್, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. 70-80ರ ದಶಕದ ಕಥೆಯನ್ನು ಚಿತ್ರದಲ್ಲಿ ಪ್ರೇಮ್ ಕಟ್ಟಿಕೊಡುತ್ತಿದ್ದಾರೆ.
ಬಾಲಿವುಡ್ ನಟಿ ನೋರಾ ಫತೇಹಿ ಕೂಡ 'KD' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 70ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಪ್ರೇಮ್ ಚಿತ್ರದ ಕತೆ ಹೆಣೆದಿದ್ದಾರೆ. ಆ ಘಟನೆ ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ರೆಟ್ರೋ ಸ್ಟೈಲ್‌ನಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆ. ಅದಕ್ಕಾಗಿ ಭಾರೀ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಮೈಸೂರು, ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.
ವಿದೇಶದಲ್ಲಿ 'KD' ಚಿತ್ರದ ರೀ-ರೆಕಾರ್ಡಿಂಗ್, ಸಾಂಗ್ ರೆಕಾರ್ಡಿಂಗ್ ಕೆಲಸಗಳು ನಡೀತಿದೆ. ಯಾವುದಕ್ಕೂ ರಾಜಿಯಾಗದೇ ಕೆವಿಎನ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ಸುದೀಪ್ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ. ಇದೆಲ್ಲದರ ನಡುವೆ ಸಿನಿಮಾ ಚಿತ್ರೀಕರಣ ಇನ್ನು ಮುಗಿದಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ತಿಲ್ಲ ಎನ್ನಲಾಗ್ತಿದೆ.

ಅಕ್ಟೋಬರ್ ಮೊದಲ ವಾರದಲ್ಲಿ ರಿಷಬ್ ಶೆಟ್ಟಿ 'ಕಾಂತಾರ'-1 ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಇನ್ನು ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ ಡೆವಿಲ್ ಹಾಗೂ ಡಿಸೆಂಬರ್ 25ಕ್ಕೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್ '45' ಸಿನಿಮಾ ಬಿಡುಗಡೆ ಆಗುತ್ತಿದೆ. ಇದೆಲ್ಲದರ ಮಧ್ಯೆ ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ರಿಲೀಸ್ ಕಥೆ ಏನು ಎನ್ನುವುದೇ ಗೊತ್ತಾಗುತ್ತಿಲ್ಲ.
ಪ್ರೇಮ್ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತಾರೆ. ಈ ವರ್ಷ ವರಲಕ್ಷ್ಮಿ ಹಬ್ಬ ಹೋಗಿ ಗಣೇಶ ಹಬ್ಬ ಮುಗಿದು ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆದರೆ 'KD' ಸಿನಿಮಾ ತೆರೆಗೆ ಬರುವ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ವರ್ಷ ಸಿನಿಮಾ ಬಿಡುಗಡೆ ಆಗುವುದೇ ಅನುಮಾನ ಎನ್ನುವ ಊಹಾಪೋಹ ಶುರುವಾಗಿದೆ. ಮತ್ತಷ್ಟು ಚಿತ್ರೀಕರಣ ಬಾಕಿ ಇರುವುದೇ ಇದಕ್ಕೆಲ್ಲಾ ಕಾರಣ ಎನ್ನುವ ಚರ್ಚೆ ಶುರುವಾಗಿದೆ.
ಅದ್ಯಾಕೋ ಧ್ರುವ ಸರ್ಜಾ ನಟನೆಯ ಪ್ರತಿ ಸಿನಿಮಾ ಬಿಡುಗಡೆಗೆ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ತಿದೆ. 'KD' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎನ್ನುವ ಬಗ್ಗೆ ಖುದ್ದು ಪ್ರೇಮ್ ಅವರಿಗೂ ಸ್ಪಷ್ಟ ಚಿತ್ರಣ ಇಲ್ಲ ಎನ್ನುವಂತೆ ಕಾಣ್ತಿದೆ. ಸ್ಟಾರ್ ನಟರು, ನಿರ್ದೇಶಕರು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರ್ತಿದೆ. ವರ್ಷಕ್ಕೆ ಎರಡಲ್ಲ ಎರಡು ವರ್ಷಕ್ಕೆ ಒಂದು ಸಿನಿಮಾ ಬಿಡುಗಡೆ ಮಾಡಲು ತಿಣುಕಾಡುತ್ತಿರುವುದು ವಿಪರ್ಯಾಸವೇ ಸರಿ.


Click it and Unblock the Notifications











