240 ದಿನ ಚಿತ್ರೀಕರಣಗೊಂಡ ಧ್ರುವ 'ಮಾರ್ಟಿನ್' ಸಿನಿಮಾ ಕಾಲಾವಧಿ ಇಷ್ಟೇನಾ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ಟೀಸರ್, ಸಾಂಗ್ಸ್ ರಿಲೀಸ್ ಸದ್ದು ಮಾಡ್ತಿದೆ.
ಎಪಿ ಅರ್ಜುನ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಉದಯ್ ಕೆ ಮೆಹ್ತಾ ಚಿತ್ರಕ್ಕೆ ಹಣ ಹೂಡಿದ್ದು ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಇತ್ತೀಚೆಗೆ ದೊಡ್ಡ ಸಿನಿಮಾಗಳ ರನ್‌ಟೈಮ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಟಾರ್ ನಟರ ಸಿನಿಮಾಗಳ ಕಾಲಾವಧಿ ಎರಡೂ ಮುಕ್ಕಾಲು ಗಂಟೆ ಮೀರುತ್ತಿದೆ. ಆದರೆ ಇದು ಕೆಲವೊಮ್ಮೆ ಚಿತ್ರದ ಹಿನ್ನಡೆಗೆ ಕಾರಣವಾಗಿಡುಬಿಡುತ್ತದೆ. 240 ದಿನಗಳ ಕಾಲ 'ಮಾರ್ಟಿನ್' ಸಿನಿಮಾ ಚಿತ್ರೀಕರಣಗೊಂಡಿದೆ. ಹಾಗಾಗಿ ಚಿತ್ರದ ರನ್‌ಟೈಮ್ ಎಷ್ಟಿರಬಹುದು ಎನ್ನುವ ಕುತೂಹಲ ಕೆಲವರಲ್ಲಿದೆ.
ಬಹಳ ದಿನಗಳ ಬಳಿಕ ಧ್ರುವ ಸರ್ಜಾ ನಟನೆ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕಾರಣಾಂತರಗಳಿಂದ ಸಿನಿಮಾ ತಡವಾಗಿದ್ದು ಸುಳ್ಳಲ್ಲ. ಲೇಟ್ ಆದರೂ ಭರ್ಜರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ 'ಮಾರ್ಟಿನ್' ಪ್ರಚಾರ ಜೋರಾಗಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
30ರಿಂದ 40 ಕೋಟಿ ರೂ. ಬಜೆಟ್‌ನಲ್ಲಿ ಮಾಡಲು ಶುರುಮಾಡಿದ 'ಮಾರ್ಟಿನ್' ಚಿತ್ರಕ್ಕೆ ಕೊನೆಗೆ 80ರಿಂದ 90 ಕೋಟಿ ರೂ. ಖರ್ಚಾಗಿದೆ. ಈ ವಿಚಾರವನ್ನು ಕೆಲ ದಿನಗಳ ಹಿಂದೆ ಚಿತ್ರತಂಡವೇ ಹೇಳಿಕೊಂಡಿದೆ. ಇನ್ನು ಚಿತ್ರಕ್ಕಾಗಿ ಧ್ರುವ ದೇಹ ದಂಡಿಸಿ ಬಹಳ ಶ್ರಮ ಮಟ್ಟಿದ್ದಾರೆ. ಭಾರತದ ಯುವಕನೊಬ್ಬ ಪಾಕಿಸ್ತಾನದಲ್ಲಿ ಸಿಕ್ಕಿ ಹಾಕಿಕೊಂಡರೆ ಏನೆಲ್ಲಾ ಆಗುತ್ತದೆ? ಅಲ್ಲಿಂದ ಅವನು ತಪ್ಪಿಸಿಕೊಂಡು ಬರ್ತಾನಾ? ಇಲ್ವಾ? ಅನ್ನೋದೆ ಇಡೀ ಕಥೆ.
ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಮಣಿಶರ್ಮಾ ಸಂಗೀತ ಚಿತ್ರಕ್ಕೆ. ಆದರೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಭರ್ಜರಿ ಆಕ್ಷನ್ ಸನ್ನಿವೇಶಗಳು 'ಮಾರ್ಟಿನ್' ಚಿತ್ರದಲ್ಲಿದೆ. ವಿದೇಶದ ಬಾಡಿ ಬಿಲ್ಡರ್‌ಗಳು ಕಾಣಿಸಿಕೊಂಡಿದ್ದಾರೆ. ನ್ಯಾಥನ್ ಜೋನಸ್ ಹಾಗೂ ರೂಬಿಲ್ ಮೊಸ್ಕ್ಯುರಾ ಜೊತೆ ಧ್ರುವ ಕಾದಾಡಿರುವ ದೃಶ್ಯಗಳಿವೆ.

'ಮಾರ್ಟಿನ್' ಚಿತ್ರದ ರನ್‌ಟೈಮ್ ಎಷ್ಟು ಎನ್ನುವುದನ್ನು ಇತ್ತೀಚೆಗೆ ಸಂದರ್ಶವೊಂದರಲ್ಲಿ ಧ್ರುವ ಸರ್ಜಾ ಬಿಚ್ಚಿಟ್ಟಿದ್ದಾರೆ. ಇದು 2 ಗಂಟೆ 28 ನಿಮಿಷ ಕಾಲಾವಧಿಯ ಸಿನಿಮಾ ಎಂದು ಹೇಳಿದ್ದಾರೆ. ಇದು ಚಿತ್ರಕ್ಕೆ ಪ್ಲಸ್ ಆಗಲಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳನ್ನು ಶೂಟ್ ಮಾಡುವಾಗ ಪ್ರತಿ ದೃಶ್ಯಕ್ಕೂ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ನೋಡೊಕೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ದೃಶ್ಯಗಳನ್ನು ಸೇರಿಸುತ್ತಾ ಹೋದಂತೆ ಕಾಲಾವಧಿ ಹೆಚ್ಚಾಗುತ್ತದೆ.
ಕೋಟಿ ಕೋಟಿ ಸುರಿದು ಚಿತ್ರೀಸಿರುವ ದೃಶ್ಯಗಳನ್ನು ಕತ್ತರಿಸಲು ಆಗದೇ ಉಳಿಸಿಕೊಳ್ಳಲು ಆಗದೇ ಕೆಲವೊಮ್ಮೆ ಚಿತ್ರತಂಡ ಗೊಂದಲಕ್ಕೆ ಸಿಲುಕುತ್ತದೆ. ಸಿನಿಮಾ ಚೆನ್ನಾಗಿದ್ದರೆ 3 ಗಂಟೆ ಇದ್ದರೂ ಪ್ರೇಕ್ಷಕರು ನೋಡ್ತಾರೆ. ಆದರೆ ದೀರ್ಘ ಕಾಲಾವಧಿಯೇ ಬೇಸರ ಹುಟ್ಟಿಸುವ ಸಾಧ್ಯತೆಯೂ ಇರುತ್ತದೆ. ಅಷ್ಟು ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗಿಬಿಡಬಹುದು. ಇದೇ ಕಾರಣಕ್ಕೆ ಇತ್ತೀಚೆಗೆ ಸಿನಿಮಾ ರಿಲೀಸ್ ಬಳಿಕ 10-20 ನಿಮಿಷ ಕತ್ತರಿ ಹಾಕಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ವಿಚಾರದಲ್ಲಿ 'ಮಾರ್ಟಿನ್' ಚಿತ್ರತಂಡ ರಿಸ್ಕ್ ತೆಗೆದುಕೊಳ್ತಿಲ್ಲ.
ಅನ್ವೇಷಿ ಜೈನ್, ಸಾಧುಕೋಕಿಲ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನವಾಬ್ ಶಾ ಸೇರಿ ದೊಡ್ಡ ತಾರಾಗಣ 'ಮಾರ್ಟಿನ್' ಚಿತ್ರದಲ್ಲಿದೆ. ಒಟ್ಟು 13 ಭಾಷೆಗಳಲ್ಲಿ ಪ್ಯಾನ್ ಇಂಟರ್‌ನ್ಯಾಷನಲ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೇಕಿಂಗ್ ಹಂತದಲ್ಲೇ ನಿರೀಕ್ಷೆ ಹುಟ್ಟಾಕಿದ ಸಿನಿಮಾ ತೆರೆಮೇಲೆ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕು.


Click it and Unblock the Notifications