ಇಂಗ್ಲೀಷ್‌ನಲ್ಲಿ ದೊಡ್ಡದಾಗಿ ಸಿಗ್ನಲ್ ಕೊಟ್ಟ ಜೋಗಿ ಪ್ರೇಮ್; ಅಷ್ಟಕ್ಕೂ ಮ್ಯಾಟರ್ ಏನಂದ್ರೆ?
ವಿಭಿನ್ನ ಸಿನಿಮಾಗಳು ಹಾಗೂ ವಿಭಿನ್ನ ಪ್ರಚಾರ ತಂತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದವರು ಜೋಗಿ ಪ್ರೇಮ್. 'ಎಕ್ಸ್‌ಕ್ಯೂಸ್‌ಮಿ', 'ಕರಿಯ', ಜೋಗಿ, 'ರಾಜ್-ದಿ ಶೋ ಮ್ಯಾನ್', 'ವಿಲನ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇದೀಗ 'KD' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಪ್ರೇಮ್ ನಿರ್ದೇಶನದ 'KD' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಧ್ರುವ ಸರ್ಜಾ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಇನ್ನು 'KD' ಸಿನಿಮಾ ಬಿಡುಗಡೆಗೂ ಮುನ್ನ ನಟ ದರ್ಶನ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. 'ಕೆಡಿ' ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ D58 ಚಿತ್ರಕ್ಕೂ ಹಣ ಹೂಡಲಿದೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹೊಸ ಪೋಸ್ಟ್ ಮೂಲಕ ಕುತೂಹಲ ಮೂಡಿಸಿದೆ. 'KD' ಚಿತ್ರದ ಅಪ್‌ಡೇಟ್ ಕೊಡಲು ಮುಂದಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕಳೆದ ವರ್ಷ 'KD' ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು. ಚಿತ್ರದಲ್ಲಿ 60, 70ರ ದಶಕದ ಕಥೆಯನ್ನು ಪ್ರೇಮ್ ಹೇಳಲು ಮುಂದಾಗಿದ್ದಾರೆ.
ಸದ್ಯ 'ಮಾರ್ಟಿನ್' ಸಿನಿಮಾ ಮೂಲಕ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅದರ ಬೆನ್ನಲ್ಲೇ 'KD'ಯ ಆಗಮನವಾಗಲಿದೆ. ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. 'KGF-2' ಚಿತ್ರದಲ್ಲಿ ಅಧೀರ ಆಗಿ ಅಬ್ಬರಿಸಿದ್ದ ಸಂಜುಬಾಬ 'KD' ಅಖಾಡದಲ್ಲಿ ಕೂಡ ಆರ್ಭಟಿಸಲಿದ್ದಾರೆ.
ದೊಡ್ಡ ಬ್ರೇಕ್‌ಗಾಗಿ ಜೋಗಿ ಪ್ರೇಮ್ ಕಾಯುತ್ತಿದ್ದಾರೆ. 'KD' ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಡಿಸೆಂಬರ್‌ನಲ್ಲೇ ನಮ್ಮ ಸಿನಿಮಾ ರಿಲೀಸ್, 'KD' ಎದುರು ಪರಭಾಷೆಯ ಯಾವುದೇ ಸಿನಿಮಾ ಬಂದರೂ ವಾರ್ ಎಂದು ನಿರ್ದೇಶಕರು ಘೋಷಿಸಿದ್ದಾರೆ. ಅಷ್ಟರಮಟ್ಟಿಗೆ ತಮ್ಮ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
ಜುಲೈ 29ಕ್ಕೆ ಧಕ್ ದೇವಾ ಬರ್ತಾನೆ. 'KD' ಅಖಾಡದಲ್ಲಿ ಅಬ್ಬರಿಸುತ್ತಾನೆ ಎಂದು ಚಿತ್ರತಂಡ ಪೋಸ್ಟ್ ಮಾಡಿದ್ದಾರೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಧಕ್ ದೇವಾ ಯಾರು? ಏನ್ ಕಥೆ? ಎಂದು ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಮ್ಯಾಟರ್ ಏನಂದ್ರೆ? ಚಿತ್ರದಲ್ಲಿ ಧಕ್ ದೇವಾ ಎನ್ನುವ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಜುಲೈ 29ರಂದು ಸಂಜು ಬಾಬ ಹುಟ್ಟುಹಬ್ಬ. ಆ ದಿನ ಚಿತ್ರದಲ್ಲಿ ಅವರ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆ ಆಗಲಿದೆ.
ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಇದೇ ವಿಚಾರವನ್ನು ಕುತೂಹಲಭರಿತವಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಇಂಗ್ಲೀಷ್‌ನಲ್ಲಿ ಪೋಸ್ಟ್ ಹಾಕುವ ಬದಲು ಕನ್ನಡದಲ್ಲಿ ಹಾಕಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೆ ಇಂಗ್ಲೀಷ್‌ನಲ್ಲಿ ಅನೌನ್ಸ್‌ಮೆಂಟ್ ಪೋಸ್ಟರ್ ರಿವೀಲ್ ಆಗಿದೆ.
ಈಗಾಗಲೇ ಕಾಳಿದಾಸನನ್ನು ಪರಿಚಯಿಸಿರುವ ಪ್ರೇಮ್ ಇದೀಗ ಧಕ್ ದೇವಾನನ್ನು ಕರೆತರುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಲುಕ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಡೆವಿಡ್ ವಿಲಿಯಂ ಛಾಯಾಗ್ರಹಣವಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











